ಮಡಿಕೇರಿ ಆ.22 : ಬಸ್ ಡಿಕ್ಕಿಯಾಗಿ ಹಾನಿಗೊಳಗಾಗಿರುವ ವೀರ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಪುನರ್ ಪ್ರತಿಷ್ಠಾಪಿಸಲು ತಗಲುವ ಸಂಪೂರ್ಣ ವೆಚ್ಚವನ್ನು ಕೆಎಸ್‌ಆರ್‌ಟಿಸಿ ಭರಿಸಬೇಕು ಎಂದು ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಚೆಪ್ಪುಡಿರ ರಾಕೇಶ್ ದೇವಯ್ಯ ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜನರಲ್ ತಿಮ್ಮಯ್ಯ ಅವರ ಪ್ರತಿಮೆ ನೆಲಕ್ಕುರುಳಿರುವ ಘಟನೆ ವಿಷಾದನೀಯ, ಇದು ಬಸ್ ಚಾಲಕನ ಅತಿ ವೇಗ ಮತ್ತು ಅಜಾಗರೂಕತೆಯಿಂದಲೇ ನಡೆದಿದೆ ಎಂದು ಆರೋಪಿಸಿದ್ದಾರೆ.
ಈಗ ಇರುವ ವೃತ್ತದಲ್ಲೇ ತಿಮ್ಮಯ್ಯ ಅವರ ಪ್ರತಿಮೆಯನ್ನು ಮರು ಸ್ಥಾಪಿಸಬೇಕು. ವೀರ ಸೇನಾನಿಗೆ ಗೌರವ ಸೂಚಕವಾಗಿ ವೃತ್ತವನ್ನು ಅಭಿವೃದ್ಧಿ ಪಡಿಸಬೇಕು. ಅಪಘಾತಕ್ಕೆ ಕಾರಣಕರ್ತನಾದ ಬಸ್ ಚಾಲಕನನ್ನು ಸೇವೆಯಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಘಟನೆಗೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಬೇಕು. ಪ್ರತಿಮೆಯನ್ನು ಮರು ಸ್ಥಾಪಿಸುವ ಯೋಜನೆಗೆ ಕೆಎಸ್‌ಆರ್‌ಟಿಸಿಯಿಂದ ಹಣ ಭರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ವೀರ ಯೋಧರ ಪ್ರತಿಮೆ ಹಾಗೂ ಸ್ಮಾರಕಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ರಾಕೇಶ್ ದೇವಯ್ಯ ಆಗ್ರಹಿಸಿದ್ದಾರೆ.










