ಮಡಿಕೇರಿ ಆ.22 : ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಬಸ್ ಡಿಕ್ಕಿಯಾಗಿ ನೆಲಕ್ಕುರುಳಿದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕೂಲಂಕುಷ ತನಿಖೆ ನಡೆಸಿ ವರದಿಯನ್ನು ಬಹಿರಂಗ ಪಡಿಸಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆಯೇ ಅಥವಾ ಆಕಸ್ಮಿಕವೇ ಎನ್ನುವುದು ತನಿಖೆಯಿಂದ ಬಹಿರಂಗಗೊಳ್ಳಲಿ. ಬಸ್ ಡಿಕ್ಕಿಯಾದ ಈ ಘಟನೆಯನ್ನು ಯಾರೂ ಲಘುವಾಗಿ ಪರಿಗಣಿಸಬಾರದು, ಪ್ರತಿಮೆಯ ಪತನದ ಹಿಂದಿನ ಪಿತೂರಿ ಕುರಿತು ಕೊಡವರು ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕು ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಬೇರೆಡೆ ಪ್ರತಿಷ್ಠಾಪಿಸಬಾರದು. ಈ ಹಿಂದೆ ಇದ್ದ ವೃತ್ತದಲ್ಲೇ ಮರು ಸ್ಥಾಪನೆ ಮಾಡಿ ವೀರ ಸೇನಾನಿಗೆ ಗೌರವ ಅರ್ಪಿಸಬೇಕು. ಪ್ರತಿಮೆ ಮರು ಸ್ಥಾಪನೆಯು ಸುವರ್ಣ ಮಹೋತ್ಸವವಾಗಲಿ, ಈ ಉತ್ಸವಕ್ಕೆ ಪ್ರಧಾನಮಂತ್ರಿ, ರಕ್ಷಣಾ ಸಚಿವರು, ಮುಖ್ಯಮಂತ್ರಿಗಳು ಸೇರಿದಂತೆ ಸೇನಾಧಿಕಾರಿಗಳನ್ನು ಆಹ್ವಾನಿಸಿ ಅರ್ಥಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
1973 ರಲ್ಲಿ ದೇಶದ ಹೆಮ್ಮೆಯ ಸೇನಾನಿ ಜನರಲ್ ತಿಮ್ಮಯ್ಯ ಅವರ ಪ್ರತಿಮೆ ಸ್ಥಾಪನೆಗೆ ಅಂದಿನ ಪುರಸಭೆಯ ಅಧ್ಯಕ್ಷರಾಗಿದ್ದ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಕಾರಣಕರ್ತರಾಗಿದ್ದರು. ಸುಮಾರು 25 ವರ್ಷಗಳ ಹಿಂದೆ ಈ ಪ್ರತಿಮೆಗೆ ಸಗಣಿ ಮೆತ್ತುವ ಮೂಲಕ ಅವಮಾನಿಸಲಾಗಿತ್ತು. 15 ವರ್ಷಗಳ ಹಿಂದೆ ಫೀ.ಮಾ.ಕೆ.ಎಂ.ಕಾರ್ಯಪ್ಪ ಅವರ ಪ್ರತಿಮೆಗೆ ಪಾದರಕ್ಷೆ ಹಾಕಿ ಅಗೌರವ ತೋರಲಾಗಿತ್ತು. ಈ ಪ್ರಕರಣಗಳ ನೈಜ ಆರೋಪಿಗಳಿಗೆ ಇಲ್ಲಿಯವರೆಗೆ ಶಿಕ್ಷೆ ಆಗಲೇ ಇಲ್ಲ ಎಂದು ನಾಚಪ್ಪ ಆರೋಪಿಸಿದ್ದಾರೆ.
ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳು ದೇಶ ಕಂಡ ಅಪ್ರತಿಮ ವೀರರಾಗಿದ್ದಾರೆ, ಕೊಡವರಿಗೆ ಮಾತ್ರವಲ್ಲದೆ ಜಿಲ್ಲೆ, ರಾಜ್ಯ ಮತ್ತು ಇಡೀ ದೇಶಕ್ಕೆ ಮಹಾ ವರವಾಗಿದ್ದಾರೆ. ಇವರನ್ನು ಗೌರವಿಸುವುದು ಇಡೀ ವಿಶ್ವಕ್ಕೆ ಹೆಮ್ಮೆ ಎನಿಸಿದೆ. ಇಬ್ಬರು ವೀರಪುತ್ರರ ಪ್ರತಿಮೆಗಳನ್ನು ಸ್ಥಳಾಂತರಿಸುವ ಪ್ರಸ್ತಾಪ ಎದುರಾದರೆ ಅದಕ್ಕೆ ಸಿಎನ್‌ಸಿ ಸಂಘಟನೆ ತೀವ್ರ ವಿರೋಧವನ್ನು ವ್ಯಕ್ತಪಡಿಸುತ್ತದೆ.
ಮಡಿಕೇರಿ ನಗರವನ್ನು ಪ್ರವೇಶಿಸುತ್ತಿದ್ದಂತೆ ಜನರಲ್ ತಿಮ್ಮಯ್ಯ ಅವರ ಪ್ರತಿಮೆಯನ್ನು ಕಂಡಾಕ್ಷಣ ರೋಮಾಂಚನದ ಅನುಭವವಾಗುತ್ತಿತ್ತು. ಸೇನಾ ಗೌರವ ಮತ್ತು ದೇಶಭಕ್ತಿ ಉಕ್ಕಿ ಬರುತ್ತಿತ್ತು. ಆದ್ದರಿಂದ ಈ ಹಿಂದೆ ಇದ್ದ ವೃತ್ತದಲ್ಲೇ ತಿಮ್ಮಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಬೇಕು. ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರ ನೇತೃತ್ವದಲ್ಲಿ ಮರು ಸ್ಥಾಪನೆಯ ಪ್ರಕ್ರಿಯೆ ನಡೆಯಬೇಕು ಮತ್ತು ಶಾಸಕರುಗಳು ಕೈಜೋಡಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಕೆಯಾಗಬೇಕು, ಸಾರ್ವಜನಿಕರ ಹಣ ಬಳಸಬಾರದು ಎಂದು ನಾಚಪ್ಪ ಒತ್ತಾಯಿಸಿದ್ದಾರೆ.
Breaking News
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*
- *ಮಿಸ್ಟಿ ಹಿಲ್ಸ್ ನಿಂದ ಮಕ್ಕಳಿಗೆ ಸಾಹಸಕ್ರೀಡೆ*
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*
- *ವೀರ ಸೇನಾನಿಗಳಿಗೆ ಅಗೌರವ : ಆಮ್ ಆದ್ಮಿ ಪಾರ್ಟಿ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ*
- *ವಿರಾಜಪೇಟೆ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿಯಿಂದ ಸ್ಥಳ ಪರಿಶೀಲನೆ*
- *ವಿರಾಜಪೇಟೆ ಕಾವೇರಿ ಕಾಲೇಜಿನಲ್ಲಿ ಸಾಂಸ್ಕೃತಿಕ ಕಲರವ*
- *ಕಬ್ಬಚ್ಚಿರ ರಶ್ಮಿ ಕಾರ್ಯಪ್ಪಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ*