ಪೊನ್ನಂಪೇಟೆ, ಆ.28: ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲೂಕು ಮಟ್ಟದ ಅಂತರ್ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟವು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ (ಕಾಪ್ಸ್) ಜರುಗಿತು.
ಕೂರ್ಗ್ ಪಬ್ಲಿಕ್ ಶಾಲೆ ಮತ್ತು ಕೂರ್ಗ್ ಪಬ್ಲಿಕ್ ಪದವಿ ಪೂರ್ವ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕ್ರೀಡಾಕೂಟವನ್ನು ಕಾಪ್ಸ್ ಪ್ರಾಂಶುಪಾಲ ಡಾ.ಎಂ.ರಾಮಚಂದ್ರನ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಕ್ರೀಡೆ ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ, ತಾಳ್ಮೆ ಮತ್ತು ಜೀವನ ಕೌಶಲ್ಯಗಳನ್ನು ಸಹಜವಾಗಿಯೇ ಕಲಿಸುತ್ತದೆ. ಶೈಕ್ಷಣಿಕ ಅಗತ್ಯಗಳನ್ನು ಸಮತೋಲನಗೊಳಿಸುವುದರೊಂದಿಗೆ ದೈನಂದಿನ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ಕ್ರೀಡಾ ಸ್ಪೂರ್ತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳ ಶೈಕ್ಷಣಿಕ ಸಾಧನೆಗಳು ಹೆಚ್ಚುತ್ತವೆ. ಕ್ರೀಡೆಗಳು ವಿದ್ಯಾರ್ಥಿಗಳ ಜೀವನದಲ್ಲಿ ಉತ್ತಮ ಸಾಧನೆಗಳನ್ನು ಮಾಡಲು ಒಂದು ಮಾರ್ಗವಾಗಿದೆ. ಅಲ್ಲದೆ ಕ್ರೀಡೆ ವಿದ್ಯಾರ್ಥಿಗಳ ಚಲನಶೀಲತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೊತೆಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೇಗೆ ಬದುಕಬೇಕೆಂಬ ಜೀವನ ಪಾಠ ಕಲಿಸುತ್ತದೆ ಎಂದು ರಾಮಚಂದ್ರನ್ ಅಭಿಪ್ರಾಯಪಟ್ಟರು.
ಕಾಪ್ಸ್ ನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥರಾದ ಡಾ. ಕ್ಯಾ. ಬಿ.ಎಂ.ಗಣೇಶ್ ವಾಸ್ತವಿಕವಾಗಿ ಮಾತನಾಡಿ, ಯಾವುದೇ ಕ್ರೀಡೆಯು ಶಾಲಾ ಪಠ್ಯಕ್ರಮದ ಮುಖ್ಯ ಭಾಗವಾಗಿರುತ್ತದೆ. ಅದು ವಿದ್ಯಾರ್ಥಿಗಳನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಸದೃಢಗೊಳಿಸುತ್ತದೆ ಸಹಾಯ ಮಾಡುತ್ತದೆ ಎಂದು ಹೇಳಿದರು.
ವಿರಾಜಪೇಟೆ ಮತ್ತು ಪೊನ್ನಂ ಪೇಟೆ ತಾಲೂಕಿನ ಒಟ್ಟು 17 ಪ. ಪೂ. ಕಾಲೇಜುಗಳ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ.ಎಂ.ಗಣೇಶ್ ಸ್ವಾಗತಿಸಿದರು. ತನುಶ್ರೀ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.