ಮಡಿಕೇರಿ ಆ.28 : ಕರಗ ಹಾಗೂ ದಶಮಂಟಪ ಸಂಚರಿಸುವ ರಸ್ತೆಗಳ ಗುಂಡಿ ಮುಚ್ಚಿಸಿ, ಕಾಡು ಕಡಿದು ಶುಚಿಗೊಳಿಸುವಂತೆ ಮಡಿಕೇರಿ ದಸರಾ ದಶ ಮಂಟಪ ಸಮಿತಿ ಒತ್ತಾಯಿಸಿದೆ.
ದಸರ ಸಮಿತಿ ಅಧ್ಯಕ್ಷ ಹೆಚ್.ಮಂಜುನಾಥ್ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ ಅವರಿಗೆ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು ಹಾಗೂ ಪದಾಧಿಕಾರಿಗಳು, ರಸ್ತೆ ಕಾರ್ಯ ಹಾಗೂ ಶುಚಿತ್ವಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಬಾರಿಯ ದಸರಾ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ಹತ್ತು ಮಂಟಪಗಳು ಸಂಚರಿಸುವ ರಸ್ತೆಗಳ ಗುಂಡಿ ಮುಚ್ಚಿಸುವುದು ಹಾಗೂ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವವು ಸಂಚಿರಿಸುವ ರಸ್ತೆಗಳ ಇಕ್ಕೆಲಗಳಲ್ಲಿ ಬೆಳೆದಿರುವ ಗಿಡ ಗಂಟಿಗಳನ್ನು ಕಡಿದು ಶುಚಿಗೊಳಿಸುವಂತೆ ಒತ್ತಾಯಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಜಗದೀಶ್, ಪ್ರಮುಖರಾದ ಮಹೇಶ್ ಜೈನಿ, ಅರುಣ್ ಶೆಟ್ಟಿ, ಮನು ಮಂಜುನಾಥ್, ನವೀನ್ ಪೂಜಾರಿ ಸೇರಿದಂತೆ ಮತ್ತಿರರು ಹಾಜರಿದ್ದರು.









