ಮಡಿಕೇರಿ ಆ.29 : ನ್ಯಾಯಯುತವಾಗಿ ತೆರಿಗೆ ಪಾವತಿಸಿ ಅಂಗಡಿ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸುತ್ತಿರುವ ವರ್ತರಿಗೆ ನಿಯಮ ಬಾಹಿರ ಬೀದಿ ಬದಿ ವ್ಯಾಪಾರದಿಂದ ಅನ್ಯಾಯವಾಗುತ್ತಿದೆ ಎಂದು ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಆತಂಕ ವ್ಯಕ್ತಪಡಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಚೇಂಬರ್ ಆಫ್ ಕಾಮರ್ಸ್‍ನ ನಗರಾಧ್ಯಕ್ಷ ಎಂ.ಧನಂಜಯ್ ಅಂಗಡಿ ಬಾಡಿಗೆ, ಮಾರಾಟ ಪರವಾನಿಗೆ ಶುಲ್ಕ, ಮಾರಾಟ ತೆರಿಗೆ, ಆದಾಯ ತೆರಿಗೆ, ವೃತ್ತಿಪರ ತೆರಿಗೆ, ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಶುಲ್ಕ, ತೂಕ ಮತ್ತು ಅಳತೆ ಇಲಾಖೆ ನೋಂದಣಿ ಶುಲ್ಕ ಸೇರಿದಂತೆ ಇನ್ನೂ ಅನೇಕ ವಿಧದಲ್ಲಿ ಶುಲ್ಕಗಳನ್ನು ಪಾವತಿಸಿ ವ್ಯಾಪಾರ ಮಾಡುತ್ತಿರುವ ವರ್ತಕ ಇತ್ತೀಚಿನ ದಿನಗಳಲ್ಲಿ ನಷ್ಟ ಅನುಭವಿಸುತ್ತಿದ್ದಾನೆ. ಯಾವುದೇ ಶುಲ್ಕ ಪಾವತಿಸದೆ ರಾಜಾರೋಷವಾಗಿ ಬೀದಿ ಬದಿ ವ್ಯಾಪಾರ ನಡೆಸುತ್ತಿರುವ ವ್ಯಾಪಾರಿಗಳು ನೈಜ ವರ್ತಕರಿಗೆ ಸಮಸ್ಯೆಯಾಗಿ ಪರಿಣಮಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮಡಿಕೇರಿ ನಗರದ ರಸ್ತೆ ಬದಿಯಲ್ಲಿ ತರಕಾರಿ, ಹಣ್ಣು, ಹೂವು ಮಾತ್ರವಲ್ಲದೆ ಇತರ ವಸ್ತುಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ. ಈ ವ್ಯಾಪಾರಿಗಳು ಯಾವುದೇ ತೆರಿಗೆ ಪಾವತಿ ಮಾಡುತ್ತಿಲ್ಲ. ಇವರಿಂದ ತೆರಿಗೆ ಪಾವತಿದಾರ ವರ್ತಕರಿಗೆ ನಷ್ಟ ಮತ್ತು ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದ್ದಾರೆ.
ನಗರದ ಮುಖ್ಯ ಬೀದಿಗಳಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಬೀದಿ ಬದಿ ವ್ಯಾಪಾರಿಗಳು ಕಾಣಿಸಿಕೊಳ್ಳುತ್ತಿದ್ದು, ಜಿಲ್ಲಾಡಳಿತ ಹಾಗೂ ನಗರಸಭೆ ಈ ನಿಯಮ ಬಾಹಿರ ವಹಿವಾಟಿಗೆ ಕಡಿವಾಣ ಹಾಕಬೇಕು. ಆ ಮೂಲಕ ತೆರಿಗೆ ಪಾವತಿದಾರ ವರ್ತಕರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಎಂ.ಧನಂಜಯ್ ಒತ್ತಾಯಿಸಿದ್ದಾರೆ.









