ಕುಶಾಲಗರ ಆ.29 : ಲೋಕಕಲ್ಯಾಣಕ್ಕಾಗಿ ಅವಿಸ್ಮರಣೀಯವಾದ ಸೇವೆಗೈವ ಮೂಲಕ ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗಳ ಮೂಲಕ ತಮ್ಮ ಜೀವನವೇ ಒಂದು ಸಂದೇಶವೆಂಬಂತೆ ಬಾಳಿ ಬದುಕಿದ ಮಹಾ ತಪಸ್ವಿ ಸುತ್ತೂರಿನ 23ನೇ ಜಗದ್ಗುರು ಡಾ.ರಾಜೇಂದ್ರ ಮಹಾ ಸ್ವಾಮೀಜಿ ಎಂದು ಕೊಡ್ಲಿಪೇಟೆಯ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಸ್ಮರಿಸಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ಸುತ್ತೂರು ಮಠದ 23ನೇ ಪೀಠಾಧಿಪತಿ ಡಾ.ರಾಜೇಂದ್ರ ಸ್ವಾಮೀಜಿಯವರ 108ನೇ ಜಯಂತಿ ಅಂಗವಾಗಿ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ವಚನ ದಿನಾಚರಣೆಯಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ನಾಡಿನ ಕ್ಷೇಮಕ್ಕೆ ಸದಾ ಮಿಡಿಯುತ್ತಿದ್ದ ಮಾತೃ ಹೃದಯದ ಕೋಮಲ ಮನಸ್ಸಿನ ಡಾ.ರಾಜೇಂದ್ರ ಸ್ವಾಮೀಜಿ ಹಲವು ವರ್ಷಗಳ ಕಾಲ ತಪಸ್ಸನ್ನಾಚರಿಸಿದ ಮಹಾ ತಪಸ್ವಿ ಎಂದು ಬಣ್ಣಿಸಿದರು.
ಬಡ ಮಕ್ಕಳ ಅನ್ನಕ್ಕಾಗಿ ರುದ್ರಾಕ್ಷಿ ಮಾಲೆಯ ಚಿನ್ನದ ಸರವನ್ನು ಮಾರಿದ, ಹೇಮ ಕಿರೀಟಧಾರಣೆ ಹಾಗೂ ಅಡ್ಡಪಲ್ಲಕ್ಕಿ ಉತ್ಸವವನ್ನು ನಿರಾಕರಿಸಿದ, ಜಾತಿ ಬೇಧ ಲೆಕ್ಕಿಸದೇ ಎಲ್ಲಾ ವರ್ಗಗಳ ಮಕ್ಕಳಿಗೆ ಶ್ರೀಮಠದಲ್ಲಿ ಅನ್ನಾಶ್ರಯ ನೀಡಿ ಕೋಟ್ಯಾಂತರ ಮಂದಿಯ ಬದುಕಿಗೆ ಬೆಳಕಾದ ಮಹಾ ಯೋಗಿ ಎಂದು ಸದಾಶಿವ ಸ್ವಾಮೀಜಿ ಬಣ್ಣಿಸಿದರು.
ಶ್ರೀಗಳಲ್ಲಿ ಮಿಳಿತವಾಗಿದ್ದ ಸಮಾಜೋಧಾರ್ಮಿಕ ಭಾವನೆ, ಸಾಮಾಜಿಕ ಕಳಕಳಿ, ಬಡವರ ಬಗೆಗಿನ ಅನುಕಂಪದ ಕೃಷಿಯೇ ಜೆಎಸ್‍ಎಸ್ ಮಹಾ ವಿದ್ಯಾಪೀಠ ನಾಡಿನಾದ್ಯಂತ ಬೆಳೆದು ನಿಲ್ಲಲು ಕಾರಣವಾಯಿತು ಎಂದು ಸದಾಶಿವ ಸ್ವಾಮೀಜಿ ಹೇಳಿದರು.
ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದ ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲಾಧ್ಯಕ್ಷ ಹೆಚ್.ವಿ.ಶಿವಪ್ಪ ಅವರು ಮಾತನಾಡಿ, ಬಡತನ ಮತ್ತು ದಟ್ಟ ದಾರಿದ್ರ್ಯ ತುಂಬಿದ ಕಾಲಘಟ್ಟದಲ್ಲಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಜನ ಕಲ್ಯಾಣಕ್ಕಾಗಿ ಕಾಯಕ ಮಾಡಿ ಸಮಾಜದ ಕಲ್ಯಾಣಕ್ಕೆ ಮುಂದಡಿ ಇಟ್ಟವರು ರಾಜೇಂದ್ರ ಸ್ವಾಮೀಜಿಗಳು.
ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯ ಅಳಿವಿನಂಚಿನಲ್ಲಿದ್ದಾಗ ಅದರ ಪೋಷಣೆಗಾಗಿ ರಾಜೇಂದ್ರ ಸ್ವಾಮೀಜಿಗಳು ವಚನಗಳ ಪುಸ್ತಕಗಳನ್ನು ಅಚ್ಚು ಹಾಕಿಸಿ ಪ್ರಸಾರ ಮಾಡಿದ ಮಹಾಮುರುಷ ರಾಜೇಂದ್ರ ಸ್ವಾಮೀಜಿ ಎಂದು ಶಿವಪ್ಪ ಸ್ಮರಿಸಿದರು.
ಪ್ರಾಸ್ತಾವಿಕ ನುಡಿಗಳಾಡಿದ ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ಅಪಾರ ಸಾಧನೆಗಳನ್ನು ಮಾಡಿದ ಡಾ.ರಾಜೇಂದ್ರ ಸ್ವಾಮಿಗಳದು ಹನ್ನೆರಡನೇ ಶತಮಾನದ ಬಸವೇಶ್ವರರ ಕಾಯಕದಾಸೋಹಾದಿ ತತ್ವಗಳ ಅನುಷ್ಠಾನಗೊಳಿಸಿದ ಅಧುನಿಕ ಶರಣ ಶ್ರೇಷ್ಠರಾಗಿ ಮರೆಯಾಗಿದ್ದಾರೆ.
ಆದರೆ ಅವರು ಸಾಹಿತ್ಯ ಹಾಗೂ ಸಾಂಸ್ಕೃತಿಕ ರಂಗದ ಉದ್ದೀಪನಕ್ಕೆ ವಚನ ಸಾಹಿತ್ಯ ಪರಿಷತ್ತನ್ನು ಕಟ್ಟುವ ಮೂಲಕ ಬಸವಾದಿ ಶರಣರ ಸಂದೇಶಗಳನ್ನು ನಾಡಿನಾದ್ಯಂತ ಪಸರಿಸಲು ಕಾರಣರು. ಹಾಗಾಗಿ ಶ್ರೀಗಳ ಸ್ಮರಣೆಯನ್ನು “ವಚನ ದಿನೋತ್ಸವ” ವಾಗಿ ಆಚರಿಸಲಾಗುತ್ತಿದೆ ಎಂದರು.
ತೊರೆನೂರು ಸರ್ಕಾರಿ ಶಾಲಾ ಪ್ರೌಢಶಾಲೆ ಮುಖ್ಯ ಶಿಕ್ಷಕ ಬಿ.ಆರ್.ಸತ್ಯನಾರಾಯಣ ಅಧ್ಯಕ್ಷತೆ ವಹಿಸಿ ವಚನ ಸಾಹಿತ್ಯದ ಕುರಿತು ಮಾತನಾಡಿದರು.
ಶಿಕ್ಷಕ ಟಿ.ಬಿ.ಮಂಜುನಾಥ್ ನಿರೂಪಿಸಿದರು. ಶಿಕ್ಷಕಿ ಎಂ.ಯು.ದಿವ್ಯಾ ಸ್ವಾಗತಿಸಿದರು. ಎಸ್.ಕೆ.ಶೈಲಾ ವಂದಿಸಿದರು. ವಿದ್ಯಾರ್ಥಿಗಳಿಂದ ವಚನಗಾಯನ ನಡೆಯಿತು.










