ಮೈಸೂರು ಆ.30 : ಕಾಂಗ್ರೆಸ್ ಸರ್ಕಾರವು ರಾಜ್ಯದ 1.10 ಕೋಟಿ ಮಹಿಳೆಯರಿಗೆ ಮಾಸಿಕ ತಲಾ 2,000 ರೂಪಾಯಿ ಸಹಾಯಧನ ನೀಡುವ ‘ಗೃಹ ಲಕ್ಷ್ಮಿ’ ಯೋಜನೆಗೆ ಅಧಿಕೃತ ಚಾಲನೆ ದೊರೆಯಿತು.
ಮೈಸೂರಿನ ಮಹಾರಾಜ ಕಾಲೇಜು ಆವರಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಡಿಜಿಟಲ್ ಬಟನ್ ಒತ್ತುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಸಚಿವರಾದ ಡಾ.ಜಿ.ಪರಮೇಶ್ವರ್, ಡಾ.ಮಹದೇವಪ್ಪ, ಲಕ್ಷ್ಮೀ ಹೆಬ್ಬಾಳ್ಕರ್, ಕೆ.ವೆಂಕಟೇಶ್, ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ, ಕೆ.ಎನ್.ರಾಜಣ್ಣ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.
ರಾಜ್ಯದ ಸುಮಾರು 1.10 ಕೋಟಿ ಮಹಿಳೆಯರು ‘ಗೃಹಲಕ್ಷ್ಮಿ’ ಯೋಜನೆಗೆ ತಮ್ಮ ಹೆಸರನ್ನು ಆನ್‌ಲೈನ್ ಮೂಲಕ ನೋಂದಾಯಿಸಿಕೊಂಡಿದ್ದು, ರಾಜ್ಯಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.