ಸೋಮವಾರಪೇಟೆ ಆ.31 : ಬ್ಲೂಸ್ಟಾರ್ ಹಾಕಿ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಕ್ರೀಡಾ ದಿನ ಹಾಗೂ ಹಾಕಿ ಮಾಂತ್ರಿಕ ಮೇಜರ್ ದ್ಯಾನ್‍ಚಂದ್ ಅವರ ಜನ್ಮದಿನವನ್ನು ಜೂನಿಯರ್ ಕಾಲೇಜಿನ ಆಟದ ಮೈದಾನದಲ್ಲಿ ಆಚರಿಸಲಾಯಿತು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಬೆಳ್ಳಿಯಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾತನಾಡಿ, ದೇಶದಲ್ಲಿ ಅಪ್ರತಿಮ ಕ್ರೀಡಾ ಸಾಧಕ ಮೇಜರ್ ದ್ಯಾನ್‍ಚಂದ್ ಅವರು ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ. ಇವರು 1928ರಲ್ಲಿ ಭಾರತ ಒಲಂಪಿಕ್ಸ್‍ನಲ್ಲಿ ಚಿನ್ನದ ಪದಕ ಪಡೆಯಲು ಪ್ರಮುಖ ಕಾರಣಕರ್ತರಾಗಿದ್ದರು. ತಮ್ಮ 17ನೇ ವಯಸ್ಸಿನಲ್ಲಿಯೇ ಕ್ರೀಡಾ ಕ್ಷೇತ್ರಕ್ಕೆ ಬಂದು 1949ರ ವರೆಗೆ 189 ಪಂದ್ಯಗಳನ್ನಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದರು.
ಕ್ರೀಡೆಯಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳಬೇಕಿದೆ. ಇದು ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಸಹಕಾರಿಯಾಗಿದೆ. ಧ್ಯಾನ್‍ಚಂದ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಉತ್ತಮ ಕ್ರೀಡಾಪಟುಗಳಾಗಿ ಹೊರ ಹೊಮ್ಮುಬೇಕೆಂದು ಕರೆ ನೀಡಿದರು.
ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಸ್ಥಾಪಕ ಸದಸ್ಯ ಬಿ.ಎಂ.ಸುರೇಶ್, ಕ್ಲಬ್‍ನ ಹಿರಿಯ ಸದಸ್ಯರಾದ ಎಸ್.ಬಿ.ಯಶ್ವಂತ್, ಶುಭಾಕರ್, ಬಿ.ಈ.ಅರುಣ್‍ಕುಮಾರ್, ಅಭಿ ಗೋವಿಂದಪ್ಪ, ಪ್ರದೀಪ್, ಮಾಜಿ ಸೈನಿಕ ಚಂದ್ರಕುಮಾರ್, ಹಾಕಿ ತರಬೇತುದಾರ ಯುವರಂಜನ್ ಹಾಜರಿದ್ದರು.