ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಮಾರುತಿಪುರ ಸಮೀಪದ ಮೇಲಿನಸಂಪಳ್ಳಿ ಗ್ರಾಮದ ನಿವಾಸಿ ಶಶಿಕಲಾ ಅವರ ಸಂಕಷ್ಟದ ಬದುಕಿಗೆ ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಕಡುಬಡತನದ ಜೊತೆಗೆ ಅಂಗವೈಕಲ್ಯದ ಸಮಸ್ಯೆಯಿಂದ ಬಳಲುತ್ತಿರುವ 20 ವರ್ಷದ ಮಗಳ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತಿರುವ ಶಶಿಕಲಾ ಅವರ ಬಳಿ ಸ್ವಂತ ಮನೆಯಾಗಲೀ, ಆಧಾರ್ ಕಾರ್ಡ್ ಆಗಲೀ ಮತ್ತು ಪಡಿತರ ಚೀಟಿಯಾಗಲೀ ಈ ಯಾವುದು ಇಲ್ಲದಿರುವ ಕಾರಣಕ್ಕೆ ರಾಜ್ಯ ಸರ್ಕಾರದ ಗೃಹಲಕ್ಷ್ಮಿ, ಅನ್ನಭಾಗ್ಯವೂ ಸೇರಿ ಇನ್ನಿತರೆ ಯೋಜನೆಯಿಂದ ವಂಚಿತರಾಗಿದ್ದರು. ಈ ವಿಚಾರವನ್ನು ಪತ್ರಕರ್ತರಾದ ರವಿ ಬಿದನೂರು ಅವರು ನಮ್ಮ ಕಚೇರಿಯ ಗಮನಕ್ಕೆ ತಂದ ತಕ್ಷಣ ಸಂಬಂಧಪಟ್ಟ ಅಧಿಕಾರಿಗಳನ್ನು ಅವರ ಮನೆಗೆ ಕಳುಹಿಸಿ ಆಧಾರ್ ಕಾರ್ಡ್ ಅಪ್ಲೋಡ್ ಮಾಡಿಸಲಾಗಿದೆ. ಜೊತೆಗೆ ಆದಷ್ಟು ಶೀಘ್ರ ತಾಯಿ ಮಗಳಿಗೆ ಪಡಿತರ ಚೀಟಿಯನ್ನು ಒದಗಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ.
ಸೌಲಭ್ಯ ವಂಚಿತ ಬಡ ತಾಯಿ – ಮಗಳ ಬದುಕಿಗೆ ಆಸರೆ ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಇಂತಹ ಸಾರ್ವಜನಿಕ ಹಿತಾಸಕ್ತಿಯ ವಿಚಾರಗಳು ನಿಮಗೂ ಕಂಡು ಬಂದರೆ ನಮ್ಮ ಕಚೇರಿಯ @osd_cmkarnataka ಟ್ವಿಟರ್ ಖಾತೆಯನ್ನು ಸಂಪರ್ಕಿಸಿ.