ವಿರಾಜಪೇಟೆ ಸೆ.6 : ಪರಿಸರದಲ್ಲಿ ನದಿಗಳು ಬಹುಮುಖ್ಯ ಪಾತ್ರವಹಿಸುತ್ತವೆ. ನದಿಗಳ ಹಂಗಿಲ್ಲದೆ ಮನುಷ್ಯರು ಬದುಕುವುದು ಸಾಧ್ಯವಿಲ್ಲ. ಅರ್ಧ ದಕ್ಷಿಣ ಭಾರತವನ್ನು ಸಲಹುವ ಕಾವೇರಿ ನದಿಯ ಹರಿವು ಶೇ.40 ರಷ್ಟು ಕಡಿಮೆಯಾಗಿದೆ ಎಂದು ವರದಿಗಳು ಹೇಳುತ್ತಿವೆ. ಹಾಗಾಗೀ ನದಿಮೂಲದ ರಕ್ಷಣೆಗೆ ಸರ್ಕಾರ ಒತ್ತು ನೀಡಬೇಕು ಎಂದು ಪತ್ರಕರ್ತೆ ಉಷಾಪ್ರೀತಮ್ ಹೇಳಿದರು.
ವಿರಾಜಪೇಟೆಯ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ವಿರಾಜಪೇಟೆ ಕಾವೇರಿ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಿದ್ದ ಕೊಡಗು ಜಿಲ್ಲೆಗೆ ಸಂಬಂಧಿಸಿದ ಪರಿಸರದ ಕುರಿತಾದ ಸುಲೋಚನಾ ಡಾ.ಎಂ.ಜಿ ನಾಗರಾಜ್ ಅವರು ಸ್ಥಾಪಿಸಿರುವ ದತ್ತಿನಿಧಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಉಪನ್ಯಾಸಕರಾಗಿ ಮಾತನಾಡಿದರು.
ಕಾವೇರಿ ನದಿಯ ಹರಿವು ಯಾಕಾಗೀ ಕಡಿಮೆಯಾಗಿದೆ ಎನ್ನುವ ನಿಟ್ಟಿನಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳು ವೈಜ್ಞಾನಿಕ ಅಧ್ಯಯನಕ್ಕೆ ಮುಂದಾಗಬೇಕು. ನದಿಯ ಹರಿವನ್ನು ಕಡಿಮೆಯಾಗಲು ಏನೇನು ಅಡೆತಡೆಗಳಾಗಿವೆ ಎಂಬುದನ್ನು ವೈಜ್ಞಾನಿಕವಾಗಿ ಪತ್ತೆಹಚ್ಚುವ ಮೂಲಕ ಕಾವೇರಿ ಎಂದಿನಂತೆ ಮೈದುಂಬಿ ಹರಿಯುವಂತೆ ಮಾಡಿದರೆ ಪರಿಸರದಲ್ಲಿ ಸಾಕಷ್ಟು ಸಮಸ್ಯೆಗಳು ತನ್ನಿಂದಾತಾನೇ ಸರಿಹೋಗುತ್ತವೆ.
ಆನೆ-ಮಾನವ ಸಂಘರ್ಷದ ಹಿಂದೆ ಇರುವ ನಿಜವಾದ ಕಾರಣವನ್ನು ಅರಣ್ಯ ಇಲಾಖೆಗಳು ಸರ್ಕಾರಕ್ಕೆ ಸರಿಯಾದ ವರದಿ ಸಲ್ಲಿಸಬೇಕು. ಬರೇ ತೇಗದ ಮರದ ಪಾರ್ಕು ಬೆಳೆಸಿಕೊಂಡು ಅದಕ್ಕೆ ಅಭಯಾರಣ್ಯ, ರಕ್ಷಿತಾರಣ್ಯ ಅಂಥ ಹೆಸರು ಕೊಟ್ಟರೇ ಅರಣ್ಯೀಕರಣ ಮಾಡಿದಂತಾಗುವುದಿಲ್ಲ. ನೈಜವಾದ, ವೈವಿಧ್ಯತೆಗಳಿಂದ ಕೂಡಿದ ಮರಗಳನ್ನು ಕಾಡಿನಲ್ಲಿ ಬೆಳೆಸುವ ಪ್ರಯತ್ನಗಳು ಅರಣ್ಯ ಇಲಾಖೆಯಿಂದ ಆಗಬೇಕು ಎಂದು ಅಭಿಪ್ರಾಯಪಟ್ಟರು.
ವಿರಾಜಪೇಟೆ ತಾಲ್ಲೂಕು ಕ.ಸಾ.ಪ ಅಧ್ಯಕ್ಷ ರಾಜೇಶ್ ಪದ್ಮನಾಭ ಮಾತನಾಡಿ, ಈ ರೀತಿಯ ದತ್ತಿನಿಧಿ ಉಪನ್ಯಾಸಗಳನ್ನು ಕನ್ನಡ ಸಾಹಿತ್ಯ ಪರಿಷತ್ ಶಿಕ್ಷಣ ಸಂಸ್ಥೆಗಳಲ್ಲಿ ಆಯೋಜಿಸುವ ಮುಖ್ಯ ಉದ್ದೇಶವೆಂದರೆ ವಿದ್ಯಾರ್ಥಿಗಳು ಸಮಾಜದ ನಾನಾ ವಿಚಾರಗಳ ಬಗ್ಗೆ ಜ್ಞಾನ ಹೊಂದುವಂತಾಗಲಿ. ಆ ಮೂಲಕ ಆ ಜ್ಞಾನವನ್ನು ನಿಮ್ಮ ಬದುಕಿನ್ನಲ್ಲಿ ಉಪಯೋಗಿಸಿಕೊಳ್ಳುವಂತಾಗಲಿ ಎಂದು. ವಿದ್ಯಾರ್ಥಿಗಳು ಮೊಬೈಲ್ ಆಚೆಗೀನ ಜಗತ್ತನ್ನು ನೋಡಬೇಕು. ಪರಿಸರ ಸಂಬಂಧಿತ ಪುಸ್ತಕಗಳನ್ನು ಓದುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ.ಆನಂದ್ ಕಾರ್ಲ ಮಾತನಾಡಿ, ಪರಿಸರದ ಸಮತೋಲನ ಬಹಳ ಮುಖ್ಯ. ಪ್ರಕೃತಿಗೆ ಯಾವುದು ಮುಖ್ಯ ಮತ್ತು ಅಮುಖ್ಯ ಎಂದು ಇರುವುದಿಲ್ಲ. ವಿದ್ಯಾರ್ಥಿಗಳು ಗಿಡಗಳನ್ನು ನೆಡಬೇಕು ಮತ್ತು ನೆ್ಟ್ಟ ಗಿಡಕ್ಕೆ ನಿಮ್ಮ ಹೆಸರನ್ನೇ ಇಟ್ಟು ಪೋಷಣೆ ಮಾಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕು ಕಸಾಪ ಗೌರವ ಕೋಶಾಧಿಕಾರಿ ಶಬರೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಸಾಪದ ಗೌರವ ಕಾರ್ಯದರ್ಶಿ ಸಾವಿತ್ರಿ ಹೆಚ್.ಜಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಧನ್ಯಾಶ್ರೀ ಗೌರಮ್ಮ, ಉಪನ್ಯಾಸಕಿ ಅಂಬಿಕಾ ಕಾರ್ಯಕ್ರಮ ನಿರೂಪಿಸಿದರು. ಕಸಾಪದ ಗೌರವ ಕಾರ್ಯದರ್ಶಿ ಸಾವಿತ್ರಿ ಹೆಚ್.ಜಿ ಸ್ವಾಗತಿಸಿದರು.









