ವಿರಾಜಪೇಟೆ, ಸೆ.7 : ವಚನ ಸಾಹಿತ್ಯ ಕನ್ನಡ ಸಾಹಿತ್ಯದ ಮೇರು ಕಿರೀಟವಾಗಿದ್ದು, ಸಮ ಸಮಾಜದ ಪರಿಕಲ್ಪನೆಗೆ ವಚನಕಾರರ ಹೋರಾಟ ಅದ್ವಿತೀಯ ಎಂದು ವಿರಾಜಪೇಟೆ ತಾಲ್ಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿ ಹೆಚ್.ಎನ್.ರಾಮಚಂದ್ರ ಬಣ್ಣಿಸಿದರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ವತಿಯಿಂದ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು ಏಕಲವ್ಯ ವಸತಿ ಶಾಲೆಯಲ್ಲಿ ಹಮ್ಮಿಕೊಂಡಿದ್ದ ” ಶಾಲಾ ಕಾಲೇಜುಗಳೆಡೆಗೆ ವಚನ ಸಾಹಿತ್ಯದ ನಡಿಗೆ ” ಚಿಂತನಾ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು, ಹನ್ನೆರಡನೇ ಶತಮಾನದ ದಿನಮಾನಗಳಲ್ಲಿ ತಾಂಡವವಾಡುತ್ತಿದ್ದ ಜಾತಿ, ವರ್ಗಬೇಧ, ಮೇಲು – ಕೀಳು, ಬಡವ – ಬಲ್ಲಿದರೆಂಬ ಅಸಮಾನತೆ ತೊಲಗಿಸಲು ಬಸವಾದಿ ಶರಣರು ನಡೆಸಿದ ವಚನ ಕ್ರಾಂತಿ ಅಂದಿನ ಜನಸಾಮಾನ್ಯರ ಬದುಕನ್ನೇ ಬದಲಿಸಿತ್ತು. ಹಾಗೆಯೇ ಬಸವೇಶ್ವರರು ಕೊಟ್ಟ ಕಲಬೇಡ ಕೊಲಬೇಡ ಹುಸಿಯನುಡಿಯಲು ಬೇಡ ಎಂಬ ಸಪ್ತ ಸೂತ್ರ ಇಡೀ ಮಾನವ ಬದುಕಿಗೆ ಕಿರೀಟ ಪ್ರಾಯ ಎಂದು ವಚನಗಳ ಮೂಲಕ ವಿವರಿಸಿದ ರಾಮಚಂದ್ರ, ವಿದ್ಯಾರ್ಥಿಗಳು ಇಂತಹ ವಚನಗಳ ಸಾರವನ್ನರಿತು ಅದರಂತೆ ಉತ್ತಮವಾದ ವ್ಯಕ್ತಿತ್ವ ರೂಪಿಸಿಕೊಳ್ಳಲು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ, ಶರಣ ಪರಂಪರೆಯ ಮರೆತು ಹೋದ ಮೌಲ್ಯಗಳನ್ನು ಮೌಲ್ಯಗಳನ್ನು ಪುನಃ ಸ್ಮರಣೆ ಮಾಡುವ ಮೂಲಕ ಎಳೆಯ ವಯಸ್ಸಿನ ವಿದ್ಯಾರ್ಥಿಗಳ ಮನದಲ್ಲಿ ವಚನಗಳ ಮೌಲ್ಯಗಳನ್ನು ತಿಳಿಯಪಡಿಸುವುದು. ಆ ಮುಖೇನ ಸಮಾಜದ ಆದರ್ಶ ವ್ಯಕ್ತಿತ್ವ ರೂಪಿಸಿಕೊಳ್ಳುವ ಸಚ್ಚಿಂತನೆಯೇ ವಚನಗಳ ನಡಿಗೆ – ಶಾಲಾ ಕಾಲೇಜುಗಳೆಡೆಗೆ ಪರಿಕಲ್ಪನೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಏಕಲವ್ಯ ವಸತಿ ಶಾಲಾ ಪ್ರಾಂಶುಪಾಲ ಡಾ. ಐನಂಗಡ ದಿಲನ್, ಕನ್ನಡ ಸಾಹಿತ್ಯಕ್ಕೆ ವಿಶ್ವ ಮಟ್ಟದಲ್ಲಿ ಹೊಸ ಬೆಳಕನ್ನು ತಂದು ಕೊಟ್ಟ ವಚನ ಸಾಹಿತ್ಯದ ಸಾಮಾಜಿಕ, ಸಾಹಿತ್ಯಿಕ ಹಾಗೂ ಧಾರ್ಮಿಕ ಕ್ರಾಂತಿ ಚರಿತ್ರಾರ್ಹವಾದುದು.
ಹನ್ನೆರಡನೇ ಶತಮಾನದಲ್ಲಿ ಕೆಳವರ್ಗದಲ್ಲಿನ ಜನರನ್ನು ಜಾತಿಯ ಹೆಸರಲ್ಲಿ ಪ್ರಾಣಿಗಳಿಗಿಂತಲೂ ನಿಕೃಷ್ಟವಾಗಿ ಕಾಣುತ್ತಿದ್ದ ಸಮಾಜವನ್ನು ಕಂಡ ಶರಣರು ಅಂತಹ ನೊಂದ ಜನರ ಕಲ್ಯಾಣಕ್ಕಾಗಿ ಶೋಷಣೆಯ ವಿರುದ್ಧ ಸಮರ ಸಾರಿದರು. ಅಂದಿನ ಜನಸಾಮಾನ್ಯರಿಗೆ ಕಬ್ಬಿಣದ ಕಡಲೆಯಾಗಿದ್ದ ಸಂಸ್ಕೃತ ಭಾಷೆಯನ್ನು ಸರಳವಾಗಿ ಜನರಾಡುವ ಸುಂದರ ಭಾಷೆಯಾಗಿ ವಚನಗಳ ಮೂಲಕ ಕೊಡುಗೆ ನೀಡಿದ ಶರಣರ ಸಾಧನೆ ಅನನ್ಯ ಎಂದರು.
ವಿದ್ಯಾರ್ಥಿಗಳಿಂದ ಇದೇ ಸಂದರ್ಭ ವಿವಿಧ ಶರಣರು ರಚಿಸಿದ ವಚನ ಗಾಯನ ನಡೆಯಿತು.
ವಸತಿ ಶಾಲೆಯ ವಿದ್ಯಾರ್ಥಿ ನಾಯಕರಾದ ದಿಲೀಪ್ ಹಾಗೂ ಲೋಚನಾ ವೇದಿಕೆಯಲ್ಲಿದ್ದರು.
ಉಪನ್ಯಾಸಕ ಮನೋಹರ್ ಸ್ವಾಗತಿಸಿದರು. ವಿದ್ಯಾರ್ಥಿಗಳಾದ ಅಕಿತಾ ಹಾಗೂ ನವ್ಯಜಾ ನಿರೂಪಿಸಿದರು.
ಉಪನ್ಯಾಸಕಿ ಸಾರಿಕಾ ವಂದಿಸಿದರು.









