ಮಡಿಕೇರಿ ಸೆ.7 : ಶಾಲೆಗೆ ತೆರಳಲೆಂದು ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳಿಗೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಓರ್ವ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ಸೀತಾಪುರ ಕಾವಲು ಗೇಟ್ ಬಳಿ ನಡೆದಿದೆ.
ಬಾವಿಕೆರೆ ಪ್ರೌಢಶಾಲೆಯಲ್ಲಿ 9 ನೇ ತರಗತಿ ವ್ಯಾಸಂಗ ಮಾಡುತ್ತಿರುವ ಸೀತಾಪುರ ಕಾವಲು ತುಳಸಿ (15) ಮೃತ ದುರ್ದೈವಿ. ಮತ್ತೋರ್ವ ವಿದ್ಯಾರ್ಥಿನಿ ನಿವೇದಿತ (14) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಮರ ಮತ್ತು ಮನೆಯೊಂದಕ್ಕೂ ಡಿಕ್ಕಿ ಹೊಡೆದಿದೆ. ಅಸಮಾಧಾನಗೊಂಡ ಸಾರ್ವಜನಿಕರು ಬಸ್ ನ ಮೇಲೆ ಕಲ್ಲು ತೂರಾಟ ನಡೆಸಿದ ಪ್ರಕರಣವೂ ನಡೆಯಿತು. ಸ್ಥಳ ಪರಿಶೀಲನೆ ನಡೆಸಿದ ಪೊಲೀಸರು ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.