ಸಿದ್ದಾಪುರ ಸೆ.7 : (ಅಂಚೆಮನೆ ಸುಧಿ) ಚಿತ್ರ ಕಲಾವಿದರೊಬ್ಬರು ತಮ್ಮ ಕಲೆಯನ್ನು ತಾವು ಶಿಕ್ಷಣ ಪಡೆದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಬಡ ವಿದ್ಯಾರ್ಥಿಗಳಿಗೆ ಪರಿಚಯ ಮಾಡುವ ಮೂಲಕ ಮಾದರಿಯಾಗಿದ್ದಾರೆ.
ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ನೀಡುವ ಪ್ರಯತ್ನ ಮಾಡುತ್ತಿದೆ. ಆದರೆ ಮಕ್ಕಳ ಅತಿ ಆಸಕ್ತಿಯ ಚಿತ್ರಕಲೆಗೆ ಕೊಂಚ ಪ್ರೋತ್ಸಾಹ ಕಡಿಮೆಯೇ ಇದೆ. ಇದನ್ನು ಮನಗಂಡ ಮಾಲ್ದಾರೆಯ ಚಿತ್ರ ಕಲಾವಿದ ರೆಹಮತ್ ಬಾವ ಅವರು ಬಡ ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಬಗ್ಗೆ ಅರಿವು ಮೂಡಿಸುವ ಕಾಯಕದಲ್ಲಿ ತೊಡಗಿದ್ದಾರೆ.
ತಾವು ವ್ಯಾಸಂಗ ಮಾಡಿದ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಉಚಿತವಾಗಿ ಚಿತ್ರಕಲೆಯ ಕುರಿತು ತರಬೇತಿ ನೀಡುತ್ತಿದ್ದಾರೆ. ರೆಹಮತ್ ಅವರ ಪ್ರಯತ್ನದ ಫಲವಾಗಿ ವಿದ್ಯಾರ್ಥಿಗಳು ಕೂಡ ಅತಿ ಆಸಕ್ತಿಯಿಂದ ಚಿತ್ರಕಲೆಯನ್ನು ಮೈಗೂಡಿಸಿಕೊಳ್ಳುತ್ತಿದ್ದಾರೆ.
ಜಾಹೀರಾತು ಮತ್ತು ಜಾಗೃತಿ ಫಲಕಗಳಲ್ಲಿ ಚಿತ್ರವನ್ನು ರಚಿಸುವ ಕಲೆಗಾರ ರೆಹಮತ್ ಗೋಡೆ ಬರಹಗಳ ಮೂಲಕವೂ ಗಮನ ಸೆಳೆದಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಈ ಕಾಯಕದಲ್ಲಿ ತೊಡಗಿರುವ ಇವರು ಬಡ ವಿದ್ಯಾರ್ಥಿಗಳಲ್ಲಿ ಚಿತ್ರಕಲೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಿಸಬೇಕು ಎನ್ನುವ ಅಭಿಲಾಷೆ ಹೊಂದಿದ್ದಾರೆ.
ವಿದ್ಯಾರ್ಥಿಗಳಿಗೆ ಉಚಿತವಾಗಿ ಚಿತ್ರಕಲೆಯ ಬಗ್ಗೆ ತರಬೇತಿ ನೀಡುತ್ತಿರುವುದಕ್ಕೆ ಸಿದ್ದಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಹೆಚ್.ಎಂ.ಪ್ರೇಮ ಕುಮಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.