ಮಡಿಕೇರಿ ಸೆ.9 : ವಿದ್ಯಾರ್ಥಿಗಳು ಜೀವನದಲ್ಲಿ ನಿರ್ದಿಷ್ಟ ಗುರಿಯೊಂದಿಗೆ ಅಧ್ಯಯನ ಮಾಡಬೇಕು. ಗೆದ್ದೇ ಗೆಲ್ಲುವೆ ಎನ್ನುವ ಆತ್ಮ ವಿಶ್ವಾಸದೊಂದಿಗೆ ಮುನ್ನುಗ್ಗಬೇಕು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ವಿರಾಜಪೇಟೆ, ಮಡಿಕೇರಿ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟ, ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಂಯುಕ್ತಾಶ್ರಯದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಉತ್ಸವವನ್ನು ಉದ್ಘಾಟಿಸಿ ಅವರು, ಮಾತನಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಯುವಕರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ. ನಾವು ಓದುಲು ಬಂದಿದ್ದೇನೆ ಓದಬೇಕು ಎನ್ನುವ ಪ್ರಜ್ಞೆಯೊಂದಿಗೆ ನಿರಂತರ ಅಧ್ಯಯನ ನಡೆಸಿದಲ್ಲಿ ಯಶಸ್ಸಿನ ದಾರಿ ಸುಗಮವಾಗಲಿದೆ. ಯುವಜನತೆ ಒಂದು ದೊಡ್ಡ ಶಕ್ತಿ. ಶಿಸ್ತಿನಿಂದ ಸಾಗಿದಾಗ ಸಾಧನೆ ಸಾಧ್ಯವಾಗಲಿದೆ ಎಂದರು.
ಯಾವುದೇ ದೇಶವು ಮುಂದುವರಿಯಲು ಶಿಕ್ಷಣ ಮುಖ್ಯ ಪಾತ್ರ ವಹಿಸುತ್ತದೆ. ಮೌಲ್ಯಯುತ ಶಿಕ್ಷಣದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಸರಕಾರಿ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಡಿದವರು ಇಂದು ಉನ್ನತ ಸ್ಥಾನದಲ್ಲಿದ್ದಾರೆ. ಯುವ ಜನತೆ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಸ್ಫರ್ದೇಗಳನ್ನು ಇಟ್ಟುಕೊಳ್ಳಬೇಕು. ಯುವ ಜನರು ತಮ್ಮಲ್ಲಿರುವ ಕಲೆ ಸಾಹಿತ್ಯ ಪ್ರತಿಭೆಯನ್ನು ಅನಾವರಣಗೊಳಿಸಿ ಮುಖ್ಯ ವಾಹಿನಿಯಲ್ಲಿ ಬರುವಂತಾಗಬೇಕು. ಈ ನಿಟ್ಟಿನಲ್ಲಿ ಹೆಜ್ಜೆ ಹಾಕಿದಾಗ ಮಾತ್ರ ನಮ್ಮ ಕೀರ್ತಿ ಇನ್ನೂ ಉನ್ನತ ಮಟ್ಟದಲ್ಲಿ ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ನೆಹರು ಯುವ ಕೇಂದ್ರ ಪ್ರಾದೇಶಿಕ ಸಂಘಟನೆಯ ರಾಜ್ಯ ನಿರ್ದೇಶಕ ಎಂ.ಎನ್.ನಟರಾಜ್ ಮಾತನಾಡಿ, ದೇಶ ಕಟ್ಟುವಲ್ಲಿ ಯುವಜನತೆಯ ಪಾತ್ರ ಮತ್ತು ಜವಾಬ್ದಾರಿ ದೊಡ್ಡದಿದೆ. ಅಮೃತಕಾಲದ ಪಂಚಪ್ರಾಣ ಇಂಡಿಯಾ 2014 ಜಿಲ್ಲಾ ಮಟ್ಟದ ಯುವ ಉತ್ಸವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಯುವ ಉತ್ಸವ ಅಯೋಜಿಸಲಾಗಿದೆ. ವಿಶೇಷವಾಗಿ ಯುವಜನತೆಯನ್ನು ಗಮನದಲ್ಲಿಟ್ಟುಕೊಂಡು ಅನೇಕ ಪ್ರೇರಣಾತ್ಮಕ ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಹಮ್ಮಿಕೊಂಡಿತು. ಇದೀಗ ಶತಮಾನೋತ್ಸವದ ಅಂಗವಾಗಿ ಐದು ಅಂಶಗಳ ಆಧಾರದಲ್ಲಿ ಪಂಚಪ್ರಾಣ ಇಂಡಿಯಾ @20147 ಎಂಬ ಕಾರ್ಯಕ್ರಮದಡಿಯಲ್ಲಿ ಯುವ ಉತ್ಸವವನ್ನು ನಡೆಸುತ್ತಿದೆ ಎಂದರು.
ಯುವ ಜನತೆಗೆ ಪ್ರೇರಣೆಯಾಗಿ ನೆಹರು ಯುವ ಕೇಂದ್ರ ಕೆಲಸ ಮಾಡುತ್ತಿದೆ. ಶತಮಾನೋತ್ಸವದ ಅಂಗವಾಗಿ ಐದು ಅಂಶಗಳ ಕಾರ್ಯಕ್ರಮವನ್ನು ಆಯೋಜಿಸಿ ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸಿ ಜಿಲ್ಲಾಮಟ್ಟದಲ್ಲಿ ಆಯ್ಕೆಯಾದವರನ್ನು ರಾಜ್ಯ ಮಟ್ಟಕ್ಕೆ, ರಾಜ್ಯಮಟ್ಟದಲ್ಲಿ ಆಯ್ಕೆಯಾದವರನ್ನು ರಾಷ್ಟ್ರಮಟ್ಟಕ್ಕೂ ಆಯ್ಕೆ ಮಾಡಲಾಗುವುದು ಎಂದರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೆ.ಸಿ.ದಯಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಯುವಜನರು ಪ್ರತಿಭಾ ಪ್ರದರ್ಶನಕ್ಕೆ ಇರುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಿ ಜಿಲ್ಲೆಗೆ ಕೀರ್ತಿ ತರಬೇಕು. ಯುವಜನರ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವುದೇ ಯುವ ಉತ್ಸವಗಳ ಆಯೋಜನೆ ಉದ್ದೇಶವಾಗಿದೆ ಎಂದು ಕಾರ್ಯಕ್ರಮಕ್ಕೆ ಶುಭಕೋರಿದರು.
ವೇದಿಕೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ, ನೆಹರು ಯುವ ಕೇಂದ್ರದ ಜಿಲ್ಲಾ ಸಮನ್ವಯಾಧಿಕಾರಿ ಕೆ.ಟಿ.ಕೆ.ಉಲ್ಲಾಸ್, ಕೊಡಗು ಜಿಲ್ಲಾ ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್, ವಿರಾಜಪೇಟೆ ಯುವ ಒಕ್ಕೂಟದ ಅಧ್ಯಕ್ಷೆ ಮನೆಯಪಂಡ ಶೀಲಾ ಬೋಪಣ್ಣ, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟದ ಅಧ್ಯಕ್ಷ ಬಾಲಾಡಿ ದಿಲೀಪ್ ಕುಮಾರ್, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷರುಗಳಾದ ಎ.ಎಸ್. ಟಾಟು ಮೊಣ್ಣಪ್ಪ, ಎನ್. ಎಸ್ ಕಂದಾ ದೇವಯ್ಯ, ತಾಲೂಕು ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಪ್ರಮೋದ್ ಗಣಪತಿ ಹಾಜರಿದ್ದರು.
ರಾಜ್ಯ ಸರ್ಕಾರದಿಂದ ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪಡೆದಿರುವ ಎ.ಎಸ್.ಟಾಟು ಮೊಣ್ಣಪ್ಪ, ಪಿ.ಪಿ.ಸುಕುಮಾರ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿಯ ಮಳಿಗೆಗಳನ್ನು ತೆರೆಯಲಾಗಿತ್ತು.
ರಾಷ್ಟ್ರೀಯ ಏಕತೆ ಮತ್ತು ಒಗ್ಗಟ್ಟು ಕುರಿತು ಯುವ ಉತ್ಸವ ಕಾರ್ಯಕ್ರಮದ ಯುವ ಚಿತ್ರಕಲಾ ಸ್ಪರ್ಧೆ, ಕವನ ಸ್ಪರ್ಧೆ, ಛಾಯಾಗ್ರಹಣ ಸ್ಪರ್ಧೆ, ಭಾಷಣ ಸ್ಪರ್ಧೆ ಹಾಗೂ ಸಾಮೂಹಿಕ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದದವರು, ನೆಹರು ಯುವ ಕೇಂದ್ರದ ಯುವ ಕಾರ್ಯಕರ್ತರುಗಳು ಪಾಲ್ಗೊಂಡಿದ್ದರು.
ಜಿಲ್ಲಾ ಯುವ ಒಕ್ಕೂಟದ ಕೂಡಂಡ ಸಾಬ ಸುಬ್ರಮಣಿ, ಉಪನ್ಯಾಸಕರಾದ ಆರ್.ರಘುರಾಜ್ ನಿರೂಪಿಸಿದರು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಸುಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಬಸವರಾಜು ವಂದಿಸಿದರು.








