ಮಡಿಕೇರಿ ಸೆ.10 : ಸರಕಾರಿ ಉದ್ಯೋಗಿಗಳ ನೂತನ ಪಿಂಚಣಿ ನೀತಿಯನ್ನು ತೆಗೆದು ಅದರಲ್ಲೂ ವಿಶೇಷವಾಗಿ ಶಿಕ್ಷಣ ಕ್ಷೇತ್ರದ ಉದ್ಯೋಗಿಗಳಿಗೆ ಹಳೆಯ ಪಿಂಚಣಿ ನೀತಿಯನ್ನೇ ಮುಂದುವರೆಸುವಂತೆ ಮಾಡಲು ಸಕ್ರಿಯವಾಗಿ ಪ್ರಯತ್ನಿಸುತ್ತಿರುವುದಾಗಿ ಕೊಡಗು ಮಂಗಳೂರು ಶಿಕ್ಷಕ ಕ್ಷೇತ್ರದ ಶಾಸಕ ಭೋಜೇಗೌಡ ತಿಳಿಸಿದ್ದಾರೆ.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ ಪರಿಶೀಲನೆ ನಡೆಸಿದ ಅವರು ಖಾಯಂ ಹಾಗೂ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಿದರು. ಕೊಡಗು ವಿಶ್ವವಿದ್ಯಾನಿಲಯಕ್ಕೆ ಸೇರಲು ಇಚ್ಛಿಸುವ ಅಧ್ಯಾಪಕರಿಗೆ ಹಳೆಯ ಪಿಂಚಣಿ ಯೋಜನೆಯನ್ನೇ ಮುಂದುವರೆಸುವಂತೆ ಸರಕಾರಕ್ಕೆ ಆಗ್ರಹಿಸಲಾಗುವುದು ಎಂದು ತಿಳಿಸಿದರು.
ಕಾಲೇಜ್ ಗೆ ಶಾಸಕರ ನಿಧಿಯಿಂದ 5ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಪ್ಯೂರಿಫೈಯರ್ ಗಳನ್ನು ಒದಗಿಸುವುದಾಗಿ ಹೇಳಿದರು.
ರಾಜಕೀಯ ಪೂರ್ವಗ್ರಹವಿಲ್ಲದೆ ಶಿಕ್ಷಣ ಕ್ಷೇತ್ರಕ್ಕೆ ತನ್ನ ಕೈಲಾದ ಸೇವೆ ಸಲ್ಲಿಸುವ ಪ್ರಯತ್ನವನ್ನು ತಾನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಅತಿಥಿ ಉಪನ್ಯಾಸಕರ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಉದ್ಯೋಗಿಗಳಿಗೆ ಔದ್ಯೋಗಿಕ ಭದ್ರತೆ ಒದಗಿಸುವ ಕುರಿತು ಸಮಾಲೋಚನೆ ನಡೆಸಲಾಗುವುದು ಎಂದರು.
2024ರಲ್ಲಿ ಕಾರ್ಯಪ್ಪ ಕಾಲೇಜ್ ಗೆ 75 ವರ್ಷ ತುಂಬುತ್ತಿದ್ದು, ಈ ಸುಸಂದರ್ಭದಲ್ಲಿ ಕಾಲೇಜ್ ನ ಸಮಗ್ರ ಅಭಿವೃದ್ಧಿಗೆ ಅಗತ್ಯವಾದ ಅರ್ಥಿಕ ಮೂಲಗಳನ್ನು ಸರಕಾರದ ಮೂಲಕ ಒದಗಿಸಿಕೊಡುವ ಭರವಸೆ ನೀಡಿದರು.
ಸಭೆಯಲ್ಲಿ ಕಾಲೇಜ್ ನ ಪ್ರಾಂಶುಪಾಲ ಮೇಜರ್ ಪ್ರೊ.ರಾಘವ ಬಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.











