ಮಡಿಕೇರಿ, ಅ.2: ‘ಪ್ರತಿಯೊಬ್ಬರೂ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದರೊoದಿಗೆ ಜೀವ ವೈವಿಧ್ಯವನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗಾಗಿ ಉತ್ತಮ ಪರಿಸರವನ್ನು ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ’
ಎಂದು ಕೊಡಗು ಅರಣ್ಯ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್ ತ್ರಿಪಾಠಿ ಸೋಮವಾರ ಮಡಿಕೇರಿಯಲ್ಲಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕರ್ನಾಟಕ ಅರಣ್ಯ ಇಲಾಖೆಯ ಕೊಡಗು ಅರಣ್ಯ ವೃತ್ತ ಹಾಗೂ ಮಡಿಕೇರಿ ವನ್ಯಜೀವಿ ವಿಭಾಗದ ವತಿಯಿಂದ ಶಾಲಾ ಶಿಕ್ಷಣ ಇಲಾಖೆ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ , ರಾಷ್ಟ್ರೀಯ ಸೇವಾ ಯೋಜನೆ ( ಎನ್ನೆಸ್ಸೆಸ್ ) ಘಟಕಗಳು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ (ಕರಾವಿಪ) ಕೊಡಗು ಜಿಲ್ಲಾ ಸಮಿತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಘಟಕ ಮತ್ತು ಎನ್.ಸಿ.ಸಿ.,ಘಟಕ ಹಾಗೂ ನಗರದ ಗ್ರೀನ್ ಸಿಟಿ ಪೋರಂ ನ ಸಂಯುಕ್ತಾಶ್ರಯದಲ್ಲಿ ಮಡಿಕೇರಿ ನಗರದ ಅರಣ್ಯ ಭವನದ ಆವರಣದಲ್ಲಿ “ವನ್ಯಜೀವಿಗಳ ಸಂರಕ್ಷಣೆಗಾಗಿ ನಡಿಗೆ” ಎಂಬ ಘೋಷವಾಕ್ಯದೊಂದಿಗೆ ಹಮ್ಮಿಕೊಂಡಿದ್ದ 69ನೇ ವನ್ಯಜೀವಿ ಸಪ್ತಾಹ : 2023 ದ ಜಾಗೃತಿ ಜಾಥಾ ಹಾಗೂ ಪರಿಸರ ನಡಿಗೆ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ಮೂಲಕ ಚಾಲನೆ ನೀಡಿ ಮಾತನಾಡಿದರು.
ಅರಣ್ಯ ಮತ್ತು ಪರಿಸರ ಸಂರಕ್ಷಣೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಕೊಡಗಿನ ಜನತೆಯ ಪರಿಸರ ಪ್ರೇಮ ಮಾದರಿಯಾದುದು. ಅರಣ್ಯ ಹಾಗೂ ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು, ಈ ನಿಟ್ಟಿನಲ್ಲಿ ಜನ ಜಾಗೃತಿ ಮೂಡಿಸುವ ಸಲುವಾಗಿ ವನ್ಯಜೀವಿ ಸಪ್ತಾಹ ಆಚರಿಸಲಾಗುತ್ತಿದೆ ಎಂದು ತ್ರಿಪಾಠಿ ಹೇಳಿದರು.
ವನ್ಯಜೀವಿ ಸಪ್ತಾಹ ಕುರಿತಾದ ಕರಪತ್ರ ಬಿಡುಗಡೆಗೊಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ಅರಣ್ಯ ಸಂರಕ್ಷಣೆಗೆ ಅರಣ್ಯ ಇಲಾಖೆಯವರು ಹೆಚ್ಚಿನ ಜವಾಬ್ದಾರಿಯಿಂದ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯವಾದುದು. ನಾವೆಲ್ಲರೂ ಅವರೊಂದಿಗೆ ಕೈಜೋಡಿಸಿ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಪಣ ತೊಡಬೇಕಿದೆ ಎಂದರು.
ನಾವು ಇಂದು ಶುದ್ಧ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲ್ ಗಳಿಂದ ಖರೀದಿಸುವ ಮೂಲಕ ಪ್ಲಾಸ್ಟಿಕ್ ಮಾಲಿನ್ಯವನ್ನು ಉಂಟು ಮಾಡುತ್ತಿದ್ದೇವೆ. ನಾವು ಪರಿಸರವನ್ನು ಸರಿಯಾಗಿ ಸಂರಕ್ಷಿಸಿದ್ದಲ್ಲಿ ಭವಿಷ್ಯದಲ್ಲಿ ಉಸಿರಾಡಲು ಗಾಳಿಯನ್ನು ಖರೀದಿಸುವ ಪರಿಸ್ಥಿತಿ ಬರದಂತೆ ಮುನ್ನೆಚ್ಚರಿಕೆ ವಹಿಸಿಬೇಕಿದೆ ಎಂದರು.
ವನ್ಯಜೀವಿ ವಿಭಾಗದ ಡಿಸಿಎಫ್ ಎಂ.ಶಿವರಾಮ್ ಬಾಬು ಮಾತನಾಡಿ, ವನ್ಯಜೀವಿ ಸಪ್ತಾಹ ಕಾರ್ಯಕ್ರಮ ಹಾಗೂ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ (ಕರಾವಿಪ) ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷರೂ ಆದ ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್,
ವನ್ಯಜೀವಿಗಳು ಭೂಜಗತ್ತಿನ ಪ್ರಮುಖ ಜೀವಿಗಳಾಗಿವೆ.
ಆಹಾರ ಸರಪಳಿ ಮತ್ತು ಪರಿಸರ ವ್ಯವಸ್ಥೆಯ ಸಮತೋಲನವನ್ನು ಕಾಪಾಡಿಕೊಳ್ಳಲು ವನ್ಯಜೀವಿ ಸಂರಕ್ಷಣೆ ಬಹಳ ಮುಖ್ಯ. ಅರಣ್ಯಕ್ಕೆ ನಾವು ಯಾವುದೇ ಹಾನಿಯನ್ನು ಉಂಟುಮಾಡದೇ ನಾವು ಪಶ್ಚಿಮ ಘಟ್ಟ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಅರಣ್ಯದಲ್ಲಿ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ ಆಗಿದೆ ಎಂದರು.
ವನ್ಯಜೀವಿಗಳ ಸಂರಕ್ಷಣೆಯ ಮಹತ್ವ ಕುರಿತು ಮಾಹಿತಿ ನೀಡಿದ ರಾಜ್ಯ ವಿಜ್ಞಾನ ಪರಿಷತ್ತಿನ ಪದಾಧಿಕಾರಿ ಎಂ.ಎನ್.ವೆಂಕಟನಾಯಕ್, ಅರಣ್ಯ ಮತ್ತು ಪರಿಸರ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ, ಸಂಸ್ಥೆಯ ಪ್ರಮುಖರಾದ ಬೊಳ್ಳಜಿರ ಬಿ. ಅಯ್ಯಪ್ಪ, ಎಚ್.ಆರ್.ಮುತ್ತಪ್ಪ, ಹರಿಣಿ ವಿಜಯ್, ಉಷಾರಾಣಿ, ಕೆ.ಯು.ರಂಜಿತ್, ಸಂಘಟಕಿ ಯು.ಸಿ.ದಮಯಂತಿ, ಸಾಮಾಜಿಕ ಅರಣ್ಯ ಇಲಾಖೆಯ ಪ್ರಭಾರ ಡಿಸಿಎಫ್ ಚಂಗಪ್ಪ, ಭಾಗಮಂಡಲ ಜೇನು ಕೃಷಿ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಕುಮಾರ್, ನಗರದ ಗ್ರೀನ್ ಸಿಟಿ ಫೋರಂ ನ ಅಧ್ಯಕ್ಷ ಚೆಯ್ಯಂಡ ಸತ್ಯ, ಸದಸ್ಯ ಹೊಸೂರು ಪ್ರಿಯಾನ್ಶು, ಎಸಿಎಫ್ ಗಳಾದ ಶ್ರೀನಿವಾಸ್ ನಾಯಕ್, ಎ.ಎ.ಗೋಪಾಲ್, ಪುಷ್ಪಗಿರಿ ವನ್ಯಜೀವಿ ವಲಯ ಅರಣ್ಯಾಧಿಕಾರಿ ಜೆ.ಅನನ್ಯಕುಮಾರ್, ಆರ್ ಎಫ್ ಓ ಗಳಾದ ಕೆ.ವಿ.ಶಿವರಾಮ್, ಚೇತನ್, ಮರಿಸ್ವಾಮಿ,
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಪ್ರಸನ್ನ, ಎನ್.ಸಿ.ಸಿ.ಅಧಿಕಾರಿ ಎಂ.ಎಸ್.ಚಂದ್ರಿಕಾ, ಸಂಪನ್ಮೂಲ ಶಿಕ್ಷಕರಾದ ಎಂ.ಎಸ್. ಕೇಶವ, ಎಚ್.ಸಿ. ಬಸವರಾಜಪ್ಪ, ಕಸಾಪ ಪದಾಧಿಕಾರಿ ಕೆ.ವಿ.ಉಮೇಶ್, ಡಿಆರ್ ಎಫ್ ಓ ಗಳಾದ ಮಯೂರ್, ರಾಥೋಡ್, ಶ್ರೀಧರ್, ಸ್ಕೌಟ್ಸ್, ಗೈಡ್ಸ್, ಇಕೋ ಕ್ಲಬ್, ಎನ್ನೆಸ್ಸೆಸ್, ಎನ್.ಸಿ.ಸಿ.ಕೆಡೆಟ್ ಗಳು, ಅರಣ್ಯ ಸಿಬ್ಬಂದಿ, ಇತರರು ಇದ್ದರು.
ಜಾಥಾದಲ್ಲಿ ಅರಣ್ಯ , ಅಧಿಕಾರಿಗಳು, ಸಿಬ್ಬಂದಿ, ನಗರದ ಸರ್ಕಾರಿ ಪಿಯೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಎನ್.ಸಿ.ಸಿ.ಘಟಕ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಘಟಕ, ಕುಶಾಲನಗರ ತಾಲ್ಲೂಕಿನ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಇಕೋ ಕ್ಲಬ್ , ಸ್ಕೌಟ್ಸ್, ಗೈಡ್ಸ್ ಸಂಸ್ಥೆ
ಹಾಗೂ ಎನ್ನೆಸ್ಸೆಸ್ ಘಟಕದ ವಿದ್ಯಾರ್ಥಿಗಳು ಭಾಗವಹಿಸಿ ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆ ಕುರಿತು ಜನಜಾಗೃತಿ ಮೂಡಿಸಿದರು.
ಜನಜಾಗೃತಿ ಜಾಥಾ: ನಗರದ ಅರಣ್ಯ ಭವನದಿಂದ ಸಾಲುಮರದ ತಿಮ್ಮಕ್ಕ ಉದ್ಯಾನದ ತನಕ 4 ಕಿ.ಮೀ.ದೂರ ನಡಿಗೆ ಜತೆಗೆ ಬೈಸಿಕಲ್ ಜಾಥಾ ಕೂಡ ನಡೆಯಿತು.
ಜಾಗೃತಿ ಜಾಥಾ ಮತ್ತು ನಡಿಗೆ ಕಾರ್ಯಕ್ರಮದಲ್ಲಿ ಹಸಿರೇ ಉಸಿರು, ಜಲಮೂಲಗಳ ಸಂರಕ್ಷಣೆ, ಕಾಡಿನ ರಕ್ಷಣೆ ಮತ್ತು ವನ್ಯಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಕಾಡೇ ರಾಷ್ಟ್ರದ ಸಂಪತ್ತು, ಪಶ್ಚಿಮ ಘಟ್ಟ ಸಂರಕ್ಷಣೆ ಎಲ್ಲರ ಹೊಣೆ, ವನ್ಯಜೀವಿ ಸಂಪತ್ತನ್ನು ಭವಿಷ್ಯಕ್ಕಾಗಿ ಸಂರಕ್ಷಿಸಿ ಎಂಬಿತ್ಯಾದಿ ಅರಣ್ಯ, ವನ್ಯಜೀವಿ ಹಾಗೂ ಪರಿಸರ ಸಂರಕ್ಷಣೆ ಕುರಿತು ಜಾಥಾದಲ್ಲಿ ಘೋಷಣಾ ಫಲಕಗಳನ್ನು ಹಿಡಿದು ಪರಿಸರ ಘೋಷಣೆಗಳನ್ನು ಪ್ರಚುರಪಡಿಸಲಾಯಿತು.









