ಚೆಟ್ಟಳ್ಳಿ ಅ.2 : ಚೆಟ್ಟಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯಲ್ಲಿ ಈ ಹಿಂದೆ ಅಧ್ಯಕ್ಷರಾಗಿದ್ದ ಬಲ್ಲಾರಂಡ ಮಣಿ ಉತ್ತಪ್ಪ ಅವರ ಬಳಗ ಭರ್ಜರಿ ಗೆಲವು ಸಾಧಿಸಿದೆ. ಎಲ್ಲಾ 12 ಸ್ಥಾನಗಳಲ್ಲಿ ಮಣಿ ಉತ್ತಪ್ಪ ಅವರ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ.
ಒಟ್ಟು 12 ಸ್ಥಾನಗಳಲ್ಲಿ 2ಮಹಿಳಾ ಮೀಸಲು ಸ್ಥಾನಕ್ಕೆ ಕೊಂಗೇಟಿರ ವಾಣಿಕಾಳಪ್ಪ ಹಾಗೂ ಮುಳ್ಳಂಡ ಮಾಯಮ್ಮ, ಪರಿಶಿಷ್ಟ ಜಾತಿ ಸ್ಥಾನಕ್ಕೆ ಪಿ.ಟಿ.ಗಣೇಶ್ ಹಾಗೂ ಪರಿಶಿಷ್ಟ ಪಂಗಡ ಸ್ಥಾನಕ್ಕೆ ಜೆ.ಅರ್.ರವಿ, ಹಿಂದುಳಿದ ವರ್ಗದ ಪ್ರವರ್ಗ- ಎ ಸ್ಥಾನಕ್ಕೆ ಬಿ.ಎಂ.ಕಾಶಿ ಹಾಗೂ ಪ್ರವರ್ಗ- ಬಿ ಸ್ಥಾನಕ್ಕೆ ಪೇರಿಯನ ಪೂಣಚ್ಚ, ಸಾಲಗಾರರಲ್ಲದ ಸ್ಥಾನಕ್ಕೆ ಮರದಾಳು ಚೇತನ್ (ಹರಿ) ಸೇರಿ 7 ಮಂದಿ ಅವಿರೋಧವಾಗಿ ಆಯ್ಕೆಯಾದರು.
ಉಳಿದ 5 ಸ್ಥಾನಗಳಿಗೆ ಚುನಾವಣೆ ನಡೆದು ಬಲ್ಲಾರಂಡ ಮಣಿ ಉತ್ತಪ್ಪ (497), ಶಿವುನಂಜಪ್ಪ ಪುತ್ತರಿರ (473), ವೇಣುಗೋಪಾಲ ಬಟ್ಟೀರ (465) ದಯಾನಂದ ಅಕ್ಕಾರಿ(406) ಹಾಗೂ ಪ್ರಜ್ವಲ್ ಕರ್ಣಯ್ಯನ (422) ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿಗಳಾದ ತೀರ್ಥ ಕುಮಾರ್ ಚೆಟ್ಟೋಳಿರ 123 ಹಾಗೂ ತಿಮ್ಮಯ್ಯ ಪುತ್ತರಿರ 110 ಮತಗಳನ್ನು ಪಡೆದು ಸೋಲು ಅನುಭವಿಸಿದರು.
ಕಳೆದ 26 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿರುವ ಮಣಿಉತ್ತಪ್ಪ ಅವರು 4ನೇ ಬಾರಿಗೆ ಚೆಟ್ಟಳ್ಳಿ ಸಹಕಾರ ಸಂಘದ ಅಧ್ಯಕ್ಷರಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ಮಣಿಉತ್ತಪ್ಪ ಹೇಳಿದರು.
ಚುನಾವಣಾ ಅಧಿಕಾರಿಗಳಾಗಿ ವಾಲ್ನೂರು ತ್ಯಾಗತ್ತೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೊಕೇಶ್, ಉಪ ಚುನಾವಣಾಧಿಕಾರಿಗಳಾಗಿ ಚೆಟ್ಟಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಅಶೋಕ ಎನ್.ಎಸ್ ಹಾಗೂ ಚೆಟ್ಟಳ್ಳಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ನಂದಿನಿ ಕಾರ್ಯನಿವಹಿಸಿದರು.
ಕಳೆದ ಮೂರು ಅವಧಿಯೂ ಮಣಿ ಉತ್ತಪ್ಪ ಅವರೇ ಅಧ್ಯಕ್ಷರಾಗಿ ಸಂಘದ ಬೆಳವಣಿಗೆಗೆ ಕಾರಣಕರ್ತರಾಗಿದ್ದಾರೆ. ನೂತನ ಕಟ್ಟಡ, ನರೇಂದ್ರಮೋದಿ ಸಹಕಾರ ಭವನ, ಕಾಫಿ ಗುಣಮಟ್ಟ ಪರೀಕ್ಷಾ ಕೇಂದ್ರ, ಮಣ್ಣು ಪರೀಕ್ಷಾ ಘಟಕ, ಕುಡಿಯುವ ನೀರಿನ ಘಟಕ, ಈರಳೆ ಶಾಖೆಯ ಅಭಿವೃದ್ಧಿ ಸೇರಿದಂತೆ ಹಲವು ಲಾಭದಾಯಕ ವ್ಯವಹಾರ ನಡೆಸುವ ಮೂಲಕ ಸಂಘ ರಾಜ್ಯದಲ್ಲಿಯೇ ಮಾದರಿ ಎನಿಸಿಕೊಂಡಿದೆ.












