ಮಡಿಕೇರಿ ಅ.2 : ಮನುಷ್ಯ ತನ್ನ ಮನವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕುರಿತು ಯೋಚಿಸಬೇಕು. ಎರಡನೇ ಹಂತವಾಗಿ ತನ್ನ ಪರಿಸರ ಸ್ವಚ್ಛತೆಯ ಬಗೆಯೂ ಕಾಳಜಿ ವಹಿಸಬೇಕು. ಆ ಮೂಲಕ ಪ್ರಜ್ಞೆ ಮತ್ತು ಪರಿಸರ ಎರಡನ್ನೂ ಸಮತೂಕದಲ್ಲಿಟ್ಟುಕೊಂಡರೆ ಉತ್ತಮ ಸಮಾಜ ರೂಪಿಸಲು ಸಾಧ್ಯ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಮಹದೇವಯ್ಯ ಅಭಿಪ್ರಾಯಪಟ್ಟರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್.ಎಸ್.ಎಸ್, ಎನ್.ಸಿ.ಸಿ ಇಸಿ/ಸಿಸಿ, ವಿದ್ಯಾರ್ಥಿ ಸಂಘ ಹಾಗೂ ಕ್ರೀಡಾ ವಿಭಾಗದ ಸಂಯೋಜನೆಯಲ್ಲಿ ಆಯೋಜಿಸಿದ 154ನೇ ಗಾಂಧಿ ಜಯಂತಿ ಆಚರಣಾ ಕಾರ್ಯಕ್ರಮದಲ್ಲಿ ಗಾಂಧಿ ಚಿಂತನಾಧಾರೆಯ ಕುರಿತು ಅವರು, ಉಪನ್ಯಾಸ ನೀಡಿದರು.
ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಚಿಂತನೆಗಳು ಸಾರ್ವಕಾಲಿಕತೆಯನ್ನು ಪ್ರತಿಪಾದಿಸುತ್ತದೆ. ರಾಜಕಾರಣಿಗಳು ಗಾಂಧಿ ಮಾರ್ಗದಲ್ಲಿ ಮುನ್ನೆಡೆಯುವ ಪ್ರಯತ್ನ ಮಾಡಿದರೆ ದೇಶ ಈಗಾಲೇ ಅಭಿವೃದ್ಧಿಯ ನಾಗಲೋಟದಲ್ಲಿ ಮುಂಚೂಣಿಯಲ್ಲಿರುತ್ತಿತ್ತು. ವಿಪರ್ಯಾಸವೆಂದರೆ ಗಾಂಧಿ ಚಿಂತನೆ ದೇಶದ ರಾಜಕೀಯ ಪ್ರಕ್ರಿಯೆಯನ್ನು ಪ್ರಭಾವಿಸಲಿಲ್ಲ ಎಂದರು.
ಮಾತ್ರವಲ್ಲ ಗಾಂಧಿ ಮತ್ತು ಅಂಬೇಡ್ಕರ್ ಈ ದೇಶದ ಕಣ್ಮಣಿಗಳು ಅವರ ಮಾರ್ಗದಲ್ಲಿ ನಾವೆಲ್ಲರೂ ನಮ್ಮ ಬದುಕನ್ನು ರೂಪಿಸಿಕೊಳ್ಳೋಣ ಎಂದು ಅವರು ಅಭಿಪ್ರಾಯಪಟ್ಟರು.
ಕಾಲೇಜಿನ ಪೋ ಷಕ ಮತ್ತು ಶಿಕ್ಷಕ ಸಂಘದ ಅಧ್ಯಕ್ಷ ಕೆ.ಪಿ.ಮ್ಯಾಥ್ಯೂ ಮಾತನಾಡಿ, ಮಕ್ಕಳಿಂದ ಮಾತ್ರ ಈ ದೇಶದ ಅಭಿವೃದ್ಧಿ ಸಾಧ್ಯ. ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾ ಅವರ ಚಳವಳಿಯ ಮೇಲೆ ಗಾಂಧೀಜಿ ಅವರ ಚಿಂತನಾಧಾರೆಯ ಪ್ರೇರಣೆ ಮತ್ತು ಪ್ರಭಾವವಿದೆ. ಗಾಂಧಿ ಚಿಂತನೆಯನ್ನು ನಮ್ಮ ಬದುಕಿನಲ್ಲಿಯೂ ಅಳವಡಿಸಿಕೊಂಡು ನಾವು ಸಹ ಮಹತ್ತವಾದದ್ದನ್ನು ಪಡೆದು ಇತಿಹಾಸ ಸೃಷ್ಟಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ರಾಜೇಂದ್ರ, ಗಾಂಧೀಜಿ ಅವರ ಸರಳ ಬದುಕಿನ ಸೂತ್ರವೇ ಅವರ ಸಾಧನೆಗೆ ಪ್ರೇರಕ ಶಕ್ತಿಯಾಯಿತು. ನಾವು ಸಹ ಸರಳವಾಗಿ ಬದುಕಿ ಉದಾತ್ತ ವಾದವನ್ನು ಪ್ರತಿಪಾದಿಸೋಣ ಎಂದರು.
ಕಾಲೇಜಿನ ವಿದ್ಯಾರ್ಥಿ ಸಂಘದ ಸಲಹೆಗಾರ ಹಾಗೂ ಹಿಂದಿ ವಿಭಾಗದ ಮುಖ್ಯಸ್ಥ ಬಿ.ಎಸ್.ತಳವಾರ ಮಾತನಾಡಿ, ಗಾಂಧೀಜಿ ಅವರಿಗೆ ಸಿಕ್ಕ ಮಹಾತ್ಮ ಎಂಬ ಗೌರವಸೂಚಿ ಪದದ ಕುರಿತು ಮಹಾತ್ಮ ಕಬೀರ್ ದಾಸರ ಕುರಿತು ಸಂಯೋಜಿತ ನೆಲೆಯಲ್ಲಿ ವಿಶ್ಲೇಷಣೆ ಮಾಡಿದರು. ಗಾಂಧಿ ಪಥ ಬದುಕಿನ ಪಥವಾಗಬೇಕು ಎಂಬ ಸಂದೇಶವನ್ನು ಸಾರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ, ನಾವೆಲ್ಲರೂ ಆಧುನಿಕತೆಯ ಸೋಗಿನಲ್ಲಿ ನಮ್ಮ ಬದುಕನ್ನು ರೂಪಿಸಿಕೊಂಡಿದ್ದೇವೆ. ಆಧುನಿಕತೆಯು ಹಿಂಸೆಯನ್ನು, ಯುದ್ಧವನ್ನು, ಬಂಡವಾಳ ಶಾಹಿತ್ವವನ್ನು ತನ್ನ ಆಕರವಾಗಿ ಪ್ರತಿಪಾದಿಸುತ್ತಿದೆ. ಆಧುನಿಕತೆಯ ಅಹಂಕಾರದಲ್ಲಿ ನಮ್ಮ ನೆಲೆ, ಜಲ, ಭಾಷೆ, ಸಂಸ್ಕೃತಿಗಳೆಲ್ಲವೂ ಕಲುಷಿತಗೊಳ್ಳುತ್ತಿದೆ. ಇಂತಹ ವರ್ತನೆಗಳಿಂದ ಮನುಷ್ಯ ದೂರ ಉಳಿಯಬೇಕು. ಸುಸ್ಥಿರ ಬದುಕಿನ ಮೊದಲ ಪಾಠ ಸರಳ ಜೀವನ. ಸರಳ ಜೀವನ ಎಂದರೆ ಪ್ರಕೃತಿ ನಿಯಮಕ್ಕೆ ಅನುಸಾರವಾಗಿ ಬದುಕುವುದು. ಈ ಬಗೆಯ ಬದುಕನ್ನು ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರೀ ಅವರುಗಳು ಬದುಕಿ ತೋರಿಸಿ ಕೊಟ್ಟಿದ್ದಾರೆ. ನಾವು ಸಹ ಅವರ ಪಥದಲ್ಲಿ ಮುನ್ನೆಡೆಯಬೇಕು. ಮುಂದಿನ ಪೀಳಿಗೆಗೂ ಈ ಜಗದ ಸಂಪನ್ಮೂಲಗಳನ್ನು ಉಳಿಸಿ ಬೆಳಸಬೇಕು ಎಂದರು.
ಮಾತ್ರವಲ್ಲದೆ ವಿನೋಬಾ ಭಾವೆ ಅವರು ಭೂದಾನದಂತಹ ಚಳವಳಿಯನ್ನು ರೂಪಿಸಲು ಮುಖ್ಯ ಪ್ರೇರಣೆ ಗಾಂಧಿ ಚಿಂತನೆಯಾಗಿದ್ದು, ದೇಶದಲ್ಲಿ ಸಾವಿರಾರು ಎಕರೆ ಭೂಮಿ ಹೊಂದಿದ್ದ ಜಮೀನ್ದಾರರು ಗಾಂಧಿ ಚಿಂತನೆಯ ಕಾರಣದಿಂದ ಭೂಮಿಯನ್ನು ಬಡವರಿಗೆ ದಾನ ಮಾಡಿದರು. ಈ ಬಗೆಯ ನಿರೂಪಣೆಗಳನ್ನು ನಾವು ಸಹ ನಮ್ಮ ಬದುಕಿನಲ್ಲಿ ಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಪ್ರೊ. ಎಂ.ಪಿ.ಕೃಷ್ಣ, ಎಂ.ಎನ್.ರವಿಶಂಕರ, ಎನ್ ಎಸ್ ಎಸ್ ಘಟಕದ ಯೋಜನಾಧಿಕಾರಿ ಡಾ. ಎ.ಎನ್.ಗಾಯತ್ರಿ, ಇಸಿ/ಸಿಸಿ ಘಟಕದ ಸಂಯೋಜಕಿ ಡಾ.ರೇಣುಶ್ರೀ, ಎನ್.ಸಿ.ಸಿಯ ಸಿ.ಪಿ.ವಿಶಾಲ್, ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಸಿ.ನಿವ್ಯಾ ಮೇದಪ್ಪ ಉಪಸ್ಥಿತರಿದ್ದರು. ಎನ್‍ಎಸ್‍ಎಸ್, ಎನ್‍ಸಿಸಿ, ಇಸಿ/ಸಿಸಿ ಮತ್ತು ಕ್ರೀಡಾ ವಿದ್ಯಾರ್ಥಿಗಳು ಹಾಜರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಿದ್ಯಾರ್ಥಿನಿ ಸ್ನೇಹ ಪ್ರಾರ್ಥಿಸಿದರು. ಪುಷ್ಯ ಮತ್ತು ತಂಡದವರಿಂದ ಗಾಂಧಿ ನೆಚ್ಚಿನ ರಘುಪತಿ ರಾಘವ ಗೀತೆಯನ್ನು ಹಾಡಲಾಯಿತು. ವಿದ್ಯಾರ್ಥಿನಿ ಆರ್ಯ ಗಾಂಧಿ ಕುರಿತು ಮಾತನಾಡಿದರು. ಎನ್‍ಎಸ್‍ಎಸ್ ಘಟಕದ ಯೋಜನಾಧಿಕಾರಿ ಡಾ. ಎ.ಎನ್.ಗಾಯತ್ರಿ ಸ್ವಾಗತಿಸಿದರು. ಎನ್‍ಎಸ್‍ಎಸ್ ವಿದ್ಯಾರ್ಥಿ ಶೃತಿ ವಂದಿಸಿದರು.









