ಮಡಿಕೇರಿ ಅ.5 : ದಿನ ಕಳೆದಂತೆ ಜನರೂ, ಅವರ ವೇಷ ಭೂಷಣಗಳು, ತಿಂಡಿ ತಿನಿಸುಗಳು ಬದಲಾಗುತ್ತಿದೆ. ಹಿಂದೆಲ್ಲಾ ಅಮ್ಮ ಒಲೆಯ ಮುಂದೆ ಕುಳಿತು ಕೈಯಿಂದ ತಟ್ಟಿ ಓಡಿನಲ್ಲಿ ಕಾಯಿಸುತ್ತಿದ್ದ ರೊಟ್ಟಿ, ಚುಂಯ್ಯೆಂದು ಸುತ್ತಿ ಸುತ್ತಿ ಹಾಕುತ್ತಿದ್ದ ಗರಿ ಗರಿ ದೋಸೆ, ದೊಡ್ದ ಪಾತ್ರೆಗಳಲ್ಲಿ ಬೇಯಿಸುತ್ತಿದ್ದ ಕಡುಬು, ಇಡ್ಲಿ ಎಲ್ಲಾ ಕಾಣಲು ಈಗ ಹಳ್ಳಿಗೆ ಹೋಗ ಬೇಕಷ್ಟೆ. ಅಂದು ಅಪರೂಪಕ್ಕೆ ನೆಂಟರು ಬಂದಾಗ ಮಾತ್ರ ವಿಶೇಷ ನಾಟಿ ಕೋಳಿ ಸಾರು. ಆದರೆ ಇಂದು ಅದೆಲ್ಲಾ ನೆನಪು ಮಾತ್ರ.
ಈಗಂತೂ ಪೇಟೆಗಳ ಯಾವುದೇ ಗಲ್ಲಿಗೆ ಹೋದರೂ ಹುರಿದ ಮೀನು, ಚಿಕನ್ ಕಬಾಬ್, ಗೋಬಿ ಮಂಚೂರಿ, ನೂಡಲ್ , ಬಿರಿಯಾನಿಯ ಘಮ ಮೂಗಿಗೆ ಹೊಡೆಯುತ್ತಿರುತ್ತದೆ. ನಗರಗಳಲ್ಲಿ ಮಾಂಸಾಹಾರದ ಹೋಟೆಲ್ ಗಳಿಗಂತು ಎಲ್ಲೂ ಬರವಿಲ್ಲ. ಸಂಜೆಯ ವೇಳೆ ರಸ್ತೆ ಬದಿಗಳಲ್ಲಿ ಒಂದು ಮುರುಕು ಗಾಡಿ, ಅದರ ಪಕ್ಕದಲ್ಲಿ ಒಂದು ಗ್ಯಾಸ್ ಸ್ಟವ್ , ಸುತ್ತಲೂ ಪ್ಲೇಟ್ ಹಿಡಿದು ನಿಂತಿರುವ ಜನ, ಸಾಮಾನ್ಯ ದೃಶ್ಯ. ಹಾದಿ ಉದ್ದಕ್ಕೂ ಮೂಗಿಗೆ ಬರುವ ಪರಿಮಳ ಬೇಡವೆಂದರೂ ಕೂಡ ಕಾಲನ್ನು ಅತ್ತ ಕೊಂಡೊಯ್ಯುತ್ತದೆ. ಅಲ್ಲಿದ್ದ ತಿಂಡಿಯನ್ನು ತಿಂದು ನಾವೂ ಅಲ್ಲಿದ್ದವ ರೊಂದಿಗೆ ಬಾಯಿ ಚಪ್ಪರಿಸುತ್ತೇವೆ. ಆದರೆ ನಾವು ಆ ತಿನಿಸುಗಳ ಜೊತೆಯಲ್ಲಿ ಏನನ್ನು ತಿನ್ನುತ್ತಿದ್ದೇವೆ ಎಂಬ ಅರಿವು ಕೂಡ ನಮಗೆ ಇರುವುದಿಲ್ಲ.
ನೀವು ಚೈನೀಸ್ ಫುಡ್ ಇಷ್ಟ ಪಡುವವ ರಾದರೆ, ನಿಮಗೆ ಅಚ್ಚರಿ ಎನಿಸುವ ಸಂಗತಿಯೊಂದು ಕಾದಿದೆ. ಸಾಮಾನ್ಯವಾಗಿ ಫಾಸ್ಟ್ ಫುಡ್ ಗಳಾದ ನೂಡಲ್, ಕಬಾಬ್, ಗೋಬಿ ಮಂಚೂರಿಯಂತಹ ತಿಂಡಿಗಳಿಗೆ ಅಜಿನೋ ಮೋಟೋ ಎಂಬ ರಾಸಾಯನಿಕ ವನ್ನು ಬಳಸದಿದ್ದರೆ ನಿಮ್ಮ ಬಾಯಿಗೆ ಆ ರುಚಿ ಮತ್ತು ಮೂಗಿಗೆ ಅಲ್ಲಿರುವ ಪರಿಮಳ ಬರುವುದಿಲ್ಲ.
ಮೊನೊ ಸೋಡಿಯಂ ಗ್ಲುಟಮೇಟ್ ಎನ್ನುವ ಈ ರಾಸಾಯನಿಕವನ್ನು 1908 ರಲ್ಲಿ ಜಪಾನ್ ದೇಶದಲ್ಲಿ ರಸಾಯನ ತಜ್ಞ ಕಿಕುನೆ ಇಕೆಡರಿಂದ ಕಂಡು ಹಿಡಿಯಲಾಯಿತು. ಇದರ ಹಿಂದೆ ಒಂದು ಸಣ್ಣ ಕಥೆಯಿದೆ.
ತನ್ನ ಹೆಂಡತಿ ತಯಾರು ಮಾಡುತ್ತಿದ್ದ ಸೂಪ್ ಮತ್ತು ತಿಂಡಿಗಳು ಬಹಳ ರುಚಿಯಾಗಿರುವು ದರಿಂದ ಇದಕ್ಕೆ ಏನು ಹಾಕುವೆ ಎಂದು ಕೇಳಿದಾಗ ಆಕೆ ಸಮುದ್ರದ ಸಸ್ಯವಾದ ( ಕೊಂಬು) ವಿನತ್ತ ಬೆರಳು ತೋರಿಸಿದಳು. ಇದು ಸಮುದ್ರದಲ್ಲಿ ದೊರೆಯುವ ಆಂಕ್ಷೆಂಟ್ ಎಂಬ ಸಸ್ಯ. ಇಕೆಡ ಅದನ್ನು ಒಣಗಿಸಿ ಪುಡಿ ಮಾಡಿ, ಕುದಿಸಿ ,ಭಟ್ಟಿ ಇಳಿಸಿ ಶುದ್ಧೀಕರಿಸಿದಾಗ ಅದರಲ್ಲಿ ಗ್ಲೂಟಮಿಕ್ ಆಸಿಡ್ ಎಂಬ ರುಚಿ ತಯಾರಕ ( ಟೇಸ್ಟ್ ಮೇಕರ್ ) ವಸ್ತು ಕಂಡು ಬಂತು. ಇದನ್ನು ಜಪಾನ್ ಭಾಷೆಯಲ್ಲಿ ‘ಉಮಾಮಿ’ ಎಂದು ಕರೆದು, ನಂತರ ಆಜಿನಮೊಟೊ ಎಂಬ ಕಂಪನಿಯ ಮುಖಾಂತರ ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು. ಈಗ ಅಜಿನೊ ಮೊಟೊ ಅಥವಾ ಟೇಸ್ಟಿಂಗ್ ಪೌಡರ್ ಚೀನೀ ಪಾಕ ಪದ್ಧತಿಯ ಮೂಲ ವಸ್ತು ಆಗಿದೆ. ಇದು ಆಹಾರದ ಪರಿಮಳವನ್ನು ಹೆಚ್ಚಿಸಿ ವಿಶಿಷ್ಟವಾದ ಸುವಾಸನೆ ಮತ್ತು ರುಚಿಯನ್ನು ನೀಡುತ್ತದೆ.
ತಾಂತ್ರಿಕವಾಗಿ ಹೇಳುವುದಾದರೆ ಅಜಿನೊಮೊಟೊ ಎಂಬುದು ಗ್ಲುಟಾಮೇಟ್ ಸೋಡಿಯಂ ಮತ್ತು ಗ್ಲುಟಾಮಿಕ್ ಆಸಿಡ್‌ನಿಂದ ತಯಾರಿಸಲ್ಪಟ್ಟ ಒಂದು ಸಂಯುಕ್ತ ವಸ್ತು. ಇದನ್ನು ಸಸ್ಯ ಆಧಾರಿತ ಪದಾರ್ಥಗಳಾದ ಕಬ್ಬು, ಬೀಟ್ ರೂಟ್, ಜೋಳ ಅಥವಾ ಮರಗೆಣಸುವಿನಿಂದ ತಯಾರಿಸಲಾಗುತ್ತದೆ. ಇದು ನೈಸರ್ಗಿಕವಾಗಿ ಕಂಡು ಬರುವ ಅಮೈನೊ ಆಸಿಡ್. ಇದನ್ನು ಸಾಮಾನ್ಯವಾಗಿ ಏಷ್ಯ ಖಂಡದ ಆಹಾರಗಳಾದ ನೂಡಲ್ಸ್, ಸೂಪ್ ಮತ್ತು ಫ್ರೈಡ್ ರೈಸ್‌ನಲ್ಲಿ ಹೆಚ್ಚು ಬಳಸ ಲಾಗುತ್ತದೆ.
ಪೌಷ್ಟಿಕ ತಜ್ಞರ ಪ್ರಕಾರ ಅಜಿನೊಮೊಟೊ ದಲ್ಲಿ ಸೋಡಿಯಂ, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶವಿದ್ದು ಯಾವುದೇ ವಿಟಮಿನ್, ಪ್ರೋಟೀನ್, ಕೊಬ್ಬು ಹಾಗೂ ಇತರೆ ಆರೋಗ್ಯಕರ ಅಂಶಗಳು ಇಲ್ಲ.
ಅಜಿನೊಮೊಟೊ ಸಣ್ಣ ಪ್ರಮಾಣದಲ್ಲಿ, ಮಿತಿಯಲ್ಲಿ ಬಳಸಲು ಸುರಕ್ಷಿತವಾಗಿದೆ ಮತ್ತು ಬಾಯಿಗೆ ರುಚಿಯನ್ನು ನೀಡಿ, ಹೊಟ್ಟೆ ಹಸಿವನ್ನು ಹೆಚ್ಚಿಸುತ್ತದೆ. ಆದರೆ ‘ ಅತಿಯಾದ’ ಬಳಕೆಯು ದೇಹಕ್ಕೆ ಹಾನಿಕಾರಕವಾಗಿದೆ. ರುಚಿಯಾದ ಅಜಿನೊಮೊಟೊದಲ್ಲಿ ಗ್ಲುಟಮೇಟ್ ಅಂಶವನ್ನು ಹೊಂದಿರುವ ಕಾರಣ ಇದು ಹಾನಿಕಾರಕ ಎಂದು ಅನೇಕ ವಿಜ್ಞಾನಿಗಳು ಭಾವಿಸುತ್ತಾರೆ. ಗ್ಲುಟಮೇಟ್ ನಿಮ್ಮ ದೇಹಕ್ಕೆ ವಿಷಕಾರಿಯಾಗ ಬಹುದು. ಇದು ನರ ಕೋಶಗಳನ್ನು ಸಹ ಹಾನಿ ಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಇದರ ಸೇವನೆಯಿಂದ ಶರೀರದಲ್ಲಿ ಅತಿಯಾದ ಕೊಬ್ಬು ಶೇಖರಣೆಯಾಗಿ, ದೇಹ ದಪ್ಪಗಾಗಲು ತೊಡಗುತ್ತದೆ. ನೀವು ಎಷ್ಟೇ ವ್ಯಾಯಾಮ, ಪಥ್ಯ ಮಾಡಿದರೂ ದೇಹ ಕರಗದೆ ಇರುವುದು ಇದರ ಒಂದು ಲಕ್ಷಣ. ಕೆಲವೊಮ್ಮೆ ಕಣ್ಣಿನ ದೃಷ್ಟಿಯ ದೋಷಗಳು ಕೂಡ ಬರ ಬಹುದು. ಸದಾ ಕಾಡುವ ತಲೆ ನೋವಿಗೆ ಒಂದು ಮುಖ್ಯ ಕಾರಣ ಈ ಅಜಿನೋಮೋಟ ಸೇವನೆ. ಇದರ ಸೇವನೆಯಿಂದ ಬೆವರುವಿಕೆಯ ಸಮಸ್ಯೆ ಹೆಚ್ಚಾಗಿ, ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗಿ, ನಿರ್ಜಲೀಕರಣದಿಂದಾಗಿ ಆಯಾಸಕ್ಕೆ ಕಾರಣವಾಗಬಹುದು.
ದೇಹದಲ್ಲಿ ಹೆಚ್ಚಿದ ಸೋಡಿಯಂನಿಂದ ಕೀಲು ಮತ್ತು ಸ್ನಾಯು ನೋವಿಗೆ ಕಾರಣ ವಾಗಬಹುದು. ಕೆಲವರಿಗೆ ಹೊಟ್ಟೆಯಲ್ಲಿ ಉರಿಯುವ ಸಂವೇದನೆಗೆ ಕಾರಣ ವಾಗಬಹುದು. ಕರುಳು ಸಂಬಂಧಿತ ಇತರ ಸಮಸ್ಯೆಗಳಾದ ಆಮ್ಲೀಯತೆ, ಆಸಿಡ್ ರಿಫ್ಲಕ್ಸ್ ನಂತಹ ಆರೋಗ್ಯ ಸಮಸ್ಯೆಯನ್ನು ಕೂಡಾ ಇದು ಉಂಟು ಮಾಡುತ್ತದೆ.
ಹೆಚ್ಚುವರಿ ಅಜಿನೊಮೊಟೊವನ್ನು ತಿನ್ನುವುದು ರಕ್ತದೊತ್ತಡದ ಏರಿಳಿತಗಳಿಗೆ ಮತ್ತು ಅತಿಯಾದ ಹೃದಯದ ಬಡಿತಕ್ಕೆ ಕಾರಣ ವಾಗಬಹುದು. ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಜನರಲ್ಲಿ ಮೈಗ್ರೇನ್ ನಂತಹ ತೀವ್ರ ತಲೆನೋವು ಕಂಡುಬರುತ್ತದೆ. ಅದರಲ್ಲಿರುವ ಮೊನೊಸೋಡಿಯಂ ಗ್ಲುಟಮೇಟ್ ಅಂಶವು ನಿದ್ದೆ ಮಾಡುವಾಗ ಉಸಿರಾಟದ ಸಮಸ್ಯೆಗಳಿಂದ ನೀವು ಗೊರಕೆ ಹೊಡೆಯುವಂತೆ ಮಾಡುತ್ತದೆ.
ಎಲ್ಲಕಿಂತ ದೊಡ್ದ ಆಘಾತಕಾರಿ ಸಂಗತಿ ಯೆಂದರೆ, ಪ್ರಕಟವಾದ ಅಧ್ಯಯನಗಳು ಇದು ಕ್ಯಾನ್ಸರ್ ನಂತಹ ದೊಡ್ಡ ರೋಗಗಳಿಗೆ ಕಾರಣವಾಗುತ್ತದೆ ಎಂದು ಸೂಚಿಸುತ್ತದೆ. ಅಜಿನೊಮೊಟೊದ ಹೆಚ್ಚಿನ ಸೇವನೆಯು ಕ್ಯಾನ್ಸರ್ ಕೋಶಗಳನ್ನು ಪುನರುತ್ಪಾದಿಸುತ್ತದೆ ಮತ್ತು ದೊಡ್ದ ಕರುಳಿನ ( ಕೊಲೊರೆಕ್ಟಲ್) ಕ್ಯಾನ್ಸರ್ಗೆ ಕಾರಣವಾಗ ಬಹುದು ಎಂದು ತಿಳಿಸುತ್ತದೆ. ಗರ್ಭಿಣಿಯರು ಮತ್ತು ದುರ್ಬಲ ಆರೋಗ್ಯವನ್ನು ಹೊಂದಿರುವವರು ಇದನ್ನು ತಿನ್ನಲೇ ಬಾರದು. ಇದು ಗರ್ಭಿಣಿಯರು ಅಥವಾ ಅವರ ಮಗುವಿನ ಬೆಳವಣಿಗೆಗೆ ಒಳ್ಳೆಯದಲ್ಲ. ಹುಟ್ಟುವ ಮಗು ಅಂಗ ವೈಕಲ್ಯತೆ ಯಿಂದ ಬಳಲುವ ಸಾಧ್ಯತೆಗಳು ಕೂಡಾ ಇದೆ.
ಹಾಲು ಕೂಡಾ ಮಿತಿಯ ಒಳಗಡೆ ಇದ್ದರೆ ಅಮೃತ, ಅದೇ ಅತಿಯಾದರೆ ವಿಷವಾಗ ಬಹುದು. ಹಾಗೆಯೇ ಅಪರೂಪಕ್ಕೆ ಹಿಡಿತದಲ್ಲಿ ನೂಡಲ್ಸ್, ಕಬಾಬ್, ಗೋಬಿ, ಬಿರಿಯಾನಿ ತಿಂದರೆ ಆರೋಗ್ಯಕ್ಕೆ ತೊಂದರೆ ಇಲ್ಲ. ಆದರೆ ಆಗಾಗ ಅದನ್ನು ತಿನ್ನುವುದರಿಂದ ಕೆಲವರ ಶರೀರದಲ್ಲಿ ಮುಂದೆ ಅನಾಹುತವನ್ನು ಸೃಷ್ಟಿ ಮಾಡಬಹುದು. ಬಾಯಿಗೆ ಸಿಹಿಯಾದ ಈ “ರುಚಿ ಹುಡಿ ” ದೇಹಕ್ಕೆ ಕಹಿಯಾಗಬಹುದು.
ವರದಿ : ಡಾ. ಕೆ.ಬಿ.ಸೂರ್ಯ ಕುಮಾರ್- ಮಡಿಕೇರಿ