ಮಡಿಕೇರಿ ಅ.5 : ಕ್ಲುಲ್ಲಕ ಕಾರಣಕ್ಕಾಗಿ ಗ್ರಾಮದ ನಾಲ್ವರಿಗೆ ಎಮ್ಮೆಮಾಡು ಜಮಾಅತ್ ನಿಂದ ಸಾಮಾಜಿಕ ಬಹಿಷ್ಕಾರ ಮಾಡಲಾಗಿದೆ ಎಂದು ಆರೋಪಿಸಿರುವ ಎಮ್ಮೆಮಾಡು ಗ್ರಾ.ಪಂ ಸದಸ್ಯ ಸಿ.ಎ.ಇಸ್ಮಾಯಿಲ್, ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈದ್‍ಮಿಲಾದ್ ಸಂದರ್ಭ ಕಲಹ ನಡೆದಿದೆ ಎಂಬ ಕ್ಷುಲ್ಲಕ ಕಾರಣ ನೀಡಿ ಗ್ರಾಮದ ನಾಲ್ವರಿಗೆ ಯಾವುದೇ ನೋಟಿಸ್ ನೀಡದೆ ಜಮಾಅತ್‍ಗೆ ಒಳಪಡುವ ಯಾವುದೇ ಖಾಸಗಿ ಮತ್ತು ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು, ಅವರ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಸಬಾರದೆಂಬ ಹೇಳಿಕೆಯನ್ನು ಜಮಾಅತ್ ನ ಆಡಳಿತ ಮಂಡಳಿ ನೋಟಿಸ್ ಬೋರ್ಡ್‍ನಲ್ಲಿ ಪ್ರದರ್ಶನ ಮಾಡಿದೆ. ಇದು ಕಾನೂನು ಬಾಹಿರ ನಡೆಯಾಗಿದ್ದು, ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಜಮಾಅತ್‍ನ ಲೆಕ್ಕ ಪರಿಶೋಧನೆಗೆ ನೇಮಕ ಮಾಡಿರುವವರನ್ನು ಸಹ ಸಾಮಾಜಿಕ ಬಹಿಷ್ಕಾರ ಹಾಕಿರುವುದು ಆಡಳಿತ ಮಂಡಳಿಯ ವೈಫಲ್ಯವನ್ನು ಮುಚ್ಚಿ ಹಾಕುವ ಪ್ರಯತ್ನ ಎಂದು ಆರೋಪಿಸಿದರು.
ಕಾನೂನು ವ್ಯವಸ್ಥೆ ಇರುವಾಗ ಕಾನೂನು ಕ್ರಮ ಕೈಗೊಳ್ಳದೆ ನೇರವಾಗಿ ಸಮಾಜಿಕ ಬಹಿಷ್ಕಾರ ಹಾಕಿರುವುದು ಖಂಡನೀಯ ಎಂದ ಇಸ್ಮಾಯಿಲ್, ಸಾಮಾಜಿಕ ಬಹಿಷ್ಕಾರ ಎಂಬ ಕಾನೂನು ಬಾಹಿರ ಆದೇಶದ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಮಾಅತ್ ಮಾಜಿ ಕಾರ್ಯದರ್ಶಿ ಎಂ.ವೈ.ಹಾರೀಸ್, ಗ್ರಾಮಸ್ಥರಾದ ಕೆ.ಎಂ.ಮೂಸೆ, ಎಂ.ಎಸ್.ಮೂಸೆ, ಕೆ.ಎ.ಉಮ್ಮರ್ ಹಾಗೂ ಪಿ.ಎ.ಅಲಿ ಉಪಸ್ಥಿತರಿದ್ದರು.








