ಮಡಿಕೇರಿ ಅ.6 : ಮಡಿಕೇರಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಮಡಿಕೇರಿ ರೋಟರಿ ಸಂಸ್ಥೆಯ ವತಿಯಿಂದ ಸುಮಾರು ಒಂದುವರೆ ಲಕ್ಷ ಮೌಲ್ಯದ ಬೆಂಚ್ ಗಳನ್ನು ನಗರದ ಜೂನಿಯರ್ ಕಾಲೇಜು ಸಭಾಂಗಣದಲ್ಲಿ ವಿತರಿಸಲಾಯಿತು.
ರೋಟರಿ ಜಿಲ್ಲಾ ಗವರ್ನರ್ ಎಚ್.ಆರ್. ಕೇಶವ್ ಅವರು ಬೆಂಚ್‍ಗಳನ್ನು ವಿತರಿಸಿ ಮಾತನಾಡಿ ವಿದ್ಯಾರ್ಥಿ ಜೀವನ ಬಹಳ ಅಮೂಲ್ಯ. ವಿದ್ಯಾರ್ಥಿಗಳು ಯಾವುದೇ ಸೌಲಭ್ಯಗಳಿಂದ ವಂಚಿತರಾಗಬಾರದು. ವಿದ್ಯಾಭ್ಯಾಸ ಎನ್ನುವುದು ನಮ್ಮ ಮುಖದ ಕನ್ನಡಿಯಂತೆ. ಇಂದಿನ ಸಮಾಜದಲ್ಲಿ ಜೀವಿಸಬೇಕಾದರೆ ವಿದ್ಯಾಭ್ಯಾಸ ಅತಿ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಪಠ್ಯ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗುವುದು ಬಹಳ ಮುಖ್ಯ ಎಂದು ಕರೆ ನೀಡಿದರು.
ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಮಾತನಾಡಿ, ಹಲವಾರು ವರ್ಷಗಳಿಂದ ರೋಟರಿ ಸಂಸ್ಥೆಯವರು ಹಾಗೂ ಡಾ.ಪಾಟ್ಕರ್ ಅವರು ವಿದ್ಯಾರ್ಥಿಗಳಿಗೆ ಅನೇಕ ನೆರವಿನ ಕಾರ್ಯ ನೀಡುತ್ತ ಬಂದಿದ್ದು, ಇನ್ನು ಮುಂದೆಯೂ ಇದೇ ರೀತಿ ವಿದ್ಯಾರ್ಥಿಗಳ ಬದುಕಿನಲ್ಲಿ ರೋಟರಿ ಸಂಸ್ಥೆಯು ಬೆಳಕಾಗಿ ಬರಬೇಕು. ಹಾಗೆಯೇ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ರೋಟರಿ ಸಂಸ್ಥೆಯ ಅಧ್ಯಕ್ಷರಾದ ಗೀತಾ ಗಿರೀಶ್, ರೋಟರಿ ಸಹಾಯಕ ಗವರ್ನರ್ ದೇವಣಿರ ತಿಲಕ್, ವಲಯ ಸೇನಾನಿ ಎಸ್.ಎಸ್.ಸಂಪತ್ ಕುಮಾರ್, ರೋಟರಿ ಸಂಸ್ಶೆಯ ನಿರ್ದೇಶಕರಾದ ಅನಿಲ್, ದೇವಣಿರ ಕಿರಣ್, ಅನಂತಸುಬ್ಬರಾವ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.










