ಮಡಿಕೇರಿ ಅ.6 : ರೋಟರಿ ಮಡಿಕೇರಿ 3181ರ ವತಿಯಿಂದ “ಜಗತ್ತಿನಲ್ಲಿ ಭರವಸೆಯನ್ನು ಮೂಡಿಸುವುದು” ದ್ಯೇಯ ವಾಕ್ಯದೊಂದಿಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಜಿಲ್ಲಾ ರಾಜ್ಯಪಾಲ ರೋಟರಿಯನ್ ಹೆಚ್.ಆರ್.ಕೇಶವ ತಿಳಿಸಿದ್ದಾರೆ.
ಮಡಿಕೇರಿ ರೋಟರಿ ಸಂಸ್ಥೆಗೆ ಅಧಿಕೃತ ಭೇಟಿ ನೀಡಿ, ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಪ್ರಪಂಚದಲ್ಲೇ ಅತ್ಯಂತ ದೊಡ್ಡ ಸರ್ಕಾರೇತರ ಸಂಸ್ಥೆಯಾಗಿದ್ದು, 12 ಲಕ್ಷ ಸದಸ್ಯತ್ವವನ್ನ ಹೊಂದಿದೆ. 1905 ರಲ್ಲಿ ಪ್ರಾರಂಭವಾದ ಸಂಸ್ಥೆ ತಮ್ಮ ಸ್ನೇಹಿತರಿಂದ ಆಮಂತ್ರಣ ಪಡೆದು ಸದಸ್ಯತ್ವವನ್ನು ಪಡೆದುಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು.
ಸೇವೆಯನ್ನು ಗುರಿಯಾಗಿಸಿಕೊಂಡು ನಡೆದು ಬಂದಿರುವ ರೋಟರಿ ಸಂಸ್ಥೆ, ಪ್ರತಿಯೊಂದು ಕ್ಲಬ್‍ಗಳು ಮಾಡಿರುವ ಕೆಲಸವನ್ನು ಅವಲೋಕನ ಮಾಡುತ್ತಿದೆ. ಪೊಲಿಯೋ ನಿರ್ಮೂಲನೆಗೆ ಪಣತೊಟ್ಟಿದ್ದು, ರೋಟರಿ ಇಂಡಿಯಾ ಸಾಕ್ಷರತಾ ಮಿಷನ್ ಎಂಬ ದ್ಯೇಯ ವಾಕ್ಯದೊಂದಿಗೆ ಕಾರ್ಯನಿರ್ವಹಿಸಿದೆ ಎಂದರು.
ಮಡಿಕೇರಿ ರೋಟರಿ ಸಂಸ್ಥೆಯ ಅಧ್ಯಕ್ಷೆ ಗೀತಾ ಗಿರೀಶ್ ಮಾತನಾಡಿ, ಮಡಿಕೇರಿ ರೋಟರಿ ಸಂಸ್ಥೆ ಅಂಗನವಾಡಿಯನ್ನು ಪುನರುಜ್ಜಿವನ ಗೊಳಿಸಬೇಕು ಎಂಬ ನಿಟ್ಟಿನಲ್ಲಿ ನಗರದ ಏಳು ಅಂಗನವಾಡಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿದೆ. ಅಲ್ಲದೇ ಉತ್ತಮ ಶಿಕ್ಷಕರನ್ನು ಗೌರವಿಸಲಾಗುತ್ತಿದೆ. ಸ್ಪರ್ಧಾತ್ಮಕ ಯುಗದಲ್ಲಿ ಮುಂದಿನ ಗೊಂದಲಗಳ ಬಗ್ಗೆ ಗಮನ ಹರಿಸಲಾಗುತ್ತಿದೆ. ಸ್ವಚ್ಛ ಅಭಿಯಾನವನ್ನು ಹಮ್ಮಿಕೊಂಡಿದೆ. ನಗರದ ಜೂನಿಯರ್ ಕಾಲೇಜಿಗೆ 22 ಬೆಂಚ್, ಡೆಸ್ಕ್ ಗಳನ್ನು ವಿತರಿಸಲಾಗಿದ್ದು, ಪ್ರಸ್ತುತ 40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ ಎಂದ ಅವರು, ನಿಶ್ವಾರ್ಥ ಸೇವಾ ಮನೋಭವನೆಯನ್ನು ಹೊಂದಿರುವವರು ಮಾತ್ರ ರೋಟರಿ ಸಂಸ್ಥೆಯಲ್ಲಿ ಸದಸ್ಯರಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಎಂ.ಕೆ.ಶರತ್, ಸಹಾಯಕ ಗವರ್ನರ್ ಡಿ.ಎಂ.ತಿಲಕ್, ರೋಟರಿ ಝೋನಲ್ ಲೆಫ್ಟಿನೆಂಟ್ ಎಸ್.ಎಸ್.ಸಂಪತ್ ಕುಮಾರ್ ಉಪಸ್ಥಿತರಿದ್ದರು.









