ಮಡಿಕೇರಿ ಅ.6 : ಕೊಡಗಿನ ಗಡಿ ಗ್ರಾಮ ಕರಿಕೆಯಲ್ಲಿ ಕಾಡಾನೆಗಳ ಉಪಟಳ ಮಿತಿ ಮೀರಿದೆ. ಕಾಡಾನೆ ಹಿಂಡು ದಾಳಿ ಮಾಡಿದ ಪರಿಣಾಮ ತೋಟಗಳಿಗೆ ಹಾನಿಯಾಗಿದ್ದು, 80 ಕ್ಕೂ ಅಧಿಕ ಅಡಿಕೆ, 28 ಕ್ಕೂ ಹೆಚ್ಚು ತೆಂಗು ಮತ್ತು ಸುಮಾರು 50 ಬಾಳೆ ಗಿಡಗಳನ್ನು ನಾಶ ಪಡಿಸಿದೆ.
ಕರಿಕೆಯ ಎಳ್ಳುಕೊಚ್ಚಿ ಗ್ರಾಮದ ರಾಘವ ಹೊಸಮನೆ, ದುಶ್ಯಂತ ಹೊಸಮನೆ ಹಾಗೂ ಚೆತ್ತುಕಾಯದ ಹೆಚ್.ಎಂ.ನಂಜುಂಡ ಅವರ ತೋಟಗಳಲ್ಲಿ ಅಪಾರ ನಷ್ಟ ಉಂಟಾಗಿದೆ. ಪ್ರತಿವರ್ಷ ಈ ಅವಧಿಯಲ್ಲಿ ಗಡಿ ರಾಜ್ಯ ಕೇರಳ ಭಾಗದಿಂದ ಕಾಡಾನೆಗಳ ಹಿಂಡು ಬಂದು ದಾಂಧಲೆ ನಡೆಸುತ್ತವೆ ಎಂದು ಸ್ಥಳೀಯ ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಹಾಗೂ ಕೊಡಗು ಜಿಲ್ಲಾಡಳಿತ ಗಡಿ ಗ್ರಾಮದ ಬಗ್ಗೆ ಕಾಳಜಿ ವಹಿಸಿ ಕಾಡಾನೆ ಉಪಟಳ ತಡೆಗೆ ಸೋಲಾರ್ ಬೇಲಿ ನಿರ್ಮಾಣ ಮತ್ತು ತಡೆಗೋಡೆ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ವಿತರಿಸಬೇಕೆಂದು ತೋಟದ ಮಾಲೀಕರುಗಳು ಮನವಿ ಮಾಡಿದ್ದಾರೆ.









