ಮಡಿಕೇರಿ ಅ.7 : ಸಂಗೀತ ಮತ್ತು ನೃತ್ಯ ಎಂಥವರನ್ನೂ ಸೆಳೆಯಬಲ್ಲ ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ವರಾರ್ಣವ ಸಂಗೀತ ಶಾಲೆಯ ವಿದ್ವಾನ್ ದಿಲಿಕುಮಾರ್ ಅಭಿಪ್ರಾಯಪಟ್ಟರು.
ವಿರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬಾಲಾಂಜನೇಯ ದೇವಾಸ್ಥಾನದ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ನಡೆದ ಛಧ್ಮ ವೇಷ ಹಾಗೂ ಸಾಂಸ್ಕೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಮಕ್ಕಳಿಗೆ ಬಾಲ್ಯದ ಅಭಿರುಚಿಯನ್ನು ಗುರುತಿಸಿ ಅವರ ಪ್ರತಿಭೆಯ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಬೇಕು. ಬದುಕನ್ನು ಯಾಂತ್ರಿಕರಿಸ ಬಾರದು ಎಂದ ಅವರು, ಸಂಗೀತ, ಸದಭಿರುಚಿ ಸಾಹಿತ್ಯದ ಅಭ್ಯಾಸದಿಂದ ಉತ್ತಮ ಸಂಸ್ಕಾರ ನಿರ್ಮಾಣ ಸಾಧ್ಯ. ನಮ್ಮ ನಾಡಿನಲ್ಲಿ ಶ್ರೇಷ್ಠ ಸಾಂಸ್ಕೃತಿಕ ಪರಂಪರೆಯನ್ನು ಕಾಣುತ್ತೇವೆ. ಸಂಗೀತ ಮತ್ತು ನೃತ್ಯ ಶಾಲೆ, ಶ್ರೇಷ್ಠ ಸಂಸ್ಕೃತಿ ಮತ್ತು ಸಂಪ್ರದಾಯದ ಸಂಕೇತವಾಗಿದೆ ಎಂದರು.
ಸಾಹಿತಿಗಳಾದ ಪುಷ್ಪಲತಾ ಶಿವಪ್ಪ ಮಾತನಾಡಿ, ವಿದ್ಯಾರ್ಥಿಗಳು ರಾಮಾಯಣ ಮಹಾಭಾರತದಂತಹ ಕಾವ್ಯಗಳನ್ನು ಹೆಚ್ಚು ಹೆಚ್ಚಾಗಿ ಓದಿ ಅದರಲ್ಲಿರುವ ತತ್ವಸಾರವನ್ನು ತಿಳಿದು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಈ ಜಗತ್ತಿನಲ್ಲಿ ದುಷ್ಟ ಶಕ್ತಿಗಳು ಹೆಚ್ಚಾದಾಗ ದೇವರು ಅವತರಿಸಿ ದುಷ್ಟಶಕ್ತಿಗಳ ಸಂಹಾರ ಮಾಡುತ್ತಾನೆ. ರಾಮಾಯಣ, ಮಹಾಭಾರತ ಈ ಎರಡು ಮಹಾಕಾವ್ಯಗಳನ್ನು ಮೇಲುದೃಷ್ಠಿಯಿಂದ ನೋಡಬಾರದು ಅದರಲ್ಲಿರುವ ತತ್ವಸಾರವನ್ನು ತಿಳಿದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ವಿರಾಜಪೇಟೆ ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ, ಸಾಹಿತಿಗಳಾದ ರಜಿತ ಕಾರ್ಯಪ್ಪ ಮಾತನಾಡಿ, ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ತಿಳುವಳಿಕೆಯ ಜೊತೆಗೆ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳುವುದನ್ನು ಕಲಿಸುವಂತಾಗಬೇಕು. ಮಕ್ಕಳಿಗೆ ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಈ ರೀತಿಯ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಮಕ್ಕಳಿಗೆ ಶಾಲೆಯ ವಿಷಯಗಳಿಂದ ಭಿನ್ನವಾಗಿ ತಮ್ಮನ್ನು ರೂಪಿಸಿಕೊಳ್ಳಲು ಸಹಕಾರಿಯಾಗುವ ವಿಚಾರಗಳನ್ನು ಪೋಷಕರು ತಿಳಿಸಿಕೊಡುವಂತಾಗಬೇಕು ಎಂದರು.
ಬಾಲಾಂಜನೇಯ ದೇವಸ್ಥಾನದ ಧರ್ಮದರ್ಶಿ ಬಾಬಾ ಶಂಕರ್ ಮಾತನಾಡಿ, ಶ್ರೀ ಕೃಷ್ಣ ಜನ್ಮಾಷ್ಠಮಿಯು ನಮ್ಮ ಇತಿಹಾಸ ಮತ್ತು ಸಂಸ್ಕೃತಿಯಲ್ಲಿ ಬಹಳ ಮಹತ್ವತೆಯನ್ನು ಪಡೆದಿದೆ. ಪ್ರತಿ ವರ್ಷ ಇಡೀ ಜಗತ್ತು ಈ ಹಬ್ಬವನ್ನು ಆಚರಿಸುತ್ತದೆ. ನಮ್ಮ ಮಕ್ಕಳಿಗೆ ನಮ್ಮ ಆಚಾರ ವಿಚಾರಗಳನ್ನು ಕಲಿಸುವಂತಾಗಬೇಕು ಎಂದರು.
ನಾಟ್ಯ ಮಯೂರಿ ನೃತ್ಯ ಶಾಲೆಯ ಸಂಸ್ಥಾಪಕಿ ವಿದೂಷಿ ಪ್ರೇಮಾಂಜಲಿ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಾತಿ ಮತ ಬೇೀಧವಿಲ್ಲದೆ ಜಗತ್ತಿನಾದ್ಯಂತ ಕೃಷ್ಣನನ್ನು ಆರಾಧಿಸಲಾಗುತ್ತಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿರುವ ವಿಚಾರಗಳು ಪ್ರಸ್ತುತ, ಕೃಷ್ಣನ ಬದುಕಿನ ಕಥೆಗಳು ನಮ್ಮ ಜೀವನಕ್ಕೂ ಪ್ರೇರಣೆ ಎಂದು ಶ್ರೀ ಕೃಷ್ಣನ ಜನ್ಮದಿನದ ವಿಶೇಷತೆ ಮತ್ತು ಹಿನ್ನಲೆಯ ಕುರಿತು ವಿವರಿಸಿದರು.
ಇದೇ ಸಂದರ್ಭ ನೃತ್ಯ ಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಿಕ್ಷಕರಾದ ಲವೀನ್ ಲೋಪೇಸ್ ಹಾಗೂ ಸಾಹಿತಿಗಳಾದ ರಜಿತ ಕಾರ್ಯಪ್ಪ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಶ್ರೀ ಕೃಷ್ಣ ಜನ್ಮಾಷ್ಠಮಿಯಂದು ಮಕ್ಕಳು ಮುದ್ದು ಕೃಷ್ಣ ಮತ್ತು ಗೋಪಿಕೆಯರ ವೇಷದಲ್ಲಿ ಕಂಗೊಳಿಸಿದರು ಮತ್ತು ಶ್ರೀ ಕೃಷ್ಣನ ವಿವಿಧ ಸನ್ನಿವೇಶಗಳನ್ನೊಳಗೊಂಡ ನೃತ್ಯ ಪ್ರದರ್ಶನವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಬಹುಮಾನ ವಿತರಿಸಲಾಯಿತು.
ವೇದಿಕೆಯಲ್ಲಿ ಟ್ರಸ್ಟಿಗಳಾದ ಲವೀನ್ ಲೋಪೇಸ್ ಹಾಗೂ ದೀಪಕ್ ಉಪಸ್ಥಿತರಿದ್ದು ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.









