ವಿರಾಜಪೇಟೆ ಅ.7 : ಶ್ರೀ ಕೃಷ್ಣನ ಉಪದೇಶಾಮೃತವಾದ ಭಗವದ್ಗೀತೆ ಸರ್ವಕಾಲಿಕ ಸತ್ಯ. ಸನಾತನ ಧರ್ಮದಲ್ಲಿ ಭಗವದ್ಗೀತೆಯನ್ನು ಪವಿತ್ರ ಗ್ರಂಥವೆಂದು ಪರಿಗಣಿಸಲಾಗಿದೆ ಎಂದು ಹಿರಿಯ ಸಾಹಿತಿ ಕಿಗ್ಗಾಲು ಗಿರೀಶ್ ಅಭಿಪ್ರಾಯಪಟ್ಟರು.
ಕಾವೇರಿ ಗಣೇಶೊತ್ಸವ ಸಮಿತಿ ಮೂರ್ನಾಡು ರಸ್ತೆ ಹಾಗೂ ವಿರಾಜಪೇಟೆ ಮಹಿಳಾ ಲೇಖಕಿಯರ ಬಳಗದ ವತಿಯಿಂದ ಗಣೇಶೋತ್ಸವ ಸಮಿತಿ ವೇದಿಕೆಯಲ್ಲಿ ನಡೆದ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ ಅರ್ಜುನನಿಗೆ ಗೀತೆಯನ್ನು ಉಪದೇಶಿಸಿದನೆಂಬ ನಂಬಿಕೆಯಿದೆ. ಮತ್ತು ಈ ಮೂಲಕ ಅವರು ಜೀವನದ ಸಾರವನ್ನು ಜನರಿಗೆ ವಿವರಿಸಲು ಪ್ರಯತ್ನಿಸಿದರು. ಯಾವಾಗ ಅರ್ಜುನನು ಕೌರವರ ವಿರುದ್ಧ ಹೋರಾಡಲು ಬಯಸಲಿಲ್ಲವೋ ಆಗ ಶ್ರೀಕೃಷ್ಣನು ನೀನು ನಿರ್ಭಯವಾಗಿ ಹೋರಾಡು ಎಂದು ಹೇಳಿದನೆಂದು ಈ ಗೀತೆಯಲ್ಲಿ ಹೇಳಲಾಗಿದೆ. ಕೊಂದರೆ ಸ್ವರ್ಗ ಸಿಗುತ್ತದೆ, ಗೆದ್ದರೆ ಭೂಮಿಯನ್ನು ಆಳುವಿರಿ. ಹಾಗಾಗಿ ಯಾವುದೇ ಕೆಲಸದಲ್ಲಿ ಯಶಸ್ಸು ಸಿಗಬೇಕಾದರೆ ಮನಸ್ಸಿನಿಂದ ಭಯವನ್ನು ತೊಲಗಿಸಬೇಕು ಎಂದು ಹೇಳುತ್ತಾನೆ. ಗೀತೆಯ ಕೆಲವು ಶ್ಲೋಕಗಳನ್ನು ಅನುಸರಿಸಿದರೆ, ಜೀವನದಲ್ಲಿ ಅಪಾರ ಯಶಸ್ಸನ್ನು ಸಾಧಿಸಬಹುದು. ಭಗವದ್ಗೀತೆ ಎಲ್ಲ ಧರ್ಮದವರಿಗೂ ಪ್ರೇರಣೆಯಾಗುವ ಗ್ರಂಥ ಎಂದರು.
ಗೋಣಿಕೊಪ್ಪ ವಿದ್ಯಾನಿಕೇತನ ಕಾಲೇಜಿನ ಆಡಳಿತ ಮಂಡಳಿಯವರು, ಉಪನ್ಯಾಸಕರು ಹಾಗೂ ತೀರ್ಪುಗಾರರಾದ ಎಸ್.ರಘುನಾಥ್ ಮಾತನಾಡಿ, ಶ್ರೀಕೃಷ್ಣ ಹಾಗೂ ಸುಧಾಮನ ಬಾಂಧವ್ಯ, ಗೆಳೆತನಕ್ಕೆ ಮಾದರಿಯಾಗಿದೆ. ದೇಶದಲ್ಲಿ ಆದ್ಯ ದೇವತೆಯಾಗಿ ಪೂಜಿಸಲ್ಪಡುವ ಶ್ರೀಕೃಷ್ಣನ ಸಂದೇಶಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ವಿರಾಜಪೇಟೆ ಕಾವೇರಿ ಕಾಲೇಜಿನ ಪ್ರಾಂಶುಪಾಲ ಡಾ.ಆನಂದ್ ಕಾರ್ಲಾ ಮಾತನಾಡಿ, ಗೀತೆಯನ್ನು ಜೀವನದ ಮಾರ್ಗದರ್ಶನ ಮತ್ತು ಮೋಕ್ಷ ಸಾಧನೆಗಾಗಿ ಅರ್ಥ ತಿಳಿದು ಪಠಿಸಬೇಕೆಂಬುದು ಪ್ರಾಜ್ಞರ ಅಭಿಮತವಾಗಿದೆ. ಶ್ರದ್ಧಾ ಭಕ್ತಿಯಿಂದ ಪಠಿಸುವದು ಮೊದಲಿನಿಂದ ನಡೆದು ಬಂದ ಪದ್ಧತಿ. ಇದರಿಂದ ಬದುಕಿನ ದಾರಿ ಯಾವ ರೀತಿಯಲ್ಲಿ ಸನ್ಮಾರ್ಗದಲ್ಲಿ ನಡೆಸಬೇಕೆಂದು ತಿಳಿಯುತ್ತದೆ. ಶ್ರೀ ಕೃಷ್ಣನ ಅವತಾರವೇ ವಿಸ್ಮಯಕಾರಿ, ಆತನ ಜನ್ಮ ಚರಿತ್ರೆ ರೋಮಾಂಚನ. ಕಂಸನ ಸಂಹಾರಕ್ಕಾಗಿಯೇ ಅವತಾರ ಎತ್ತಿ ಬಂದ ಶ್ರೀಕೃಷ್ಣ ಶಿಷ್ಟರ ರಕ್ಷಣೆ ದುಷ್ಟರ ಸಂಹಾರ ಮಾಡಿದ್ದಾನೆ. ಭಗವದ್ಗೀತೆಯ ಸಂದೇಶವನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾವೇರಿ ಗಣೇಶೋತ್ಸವ ಸಮತಿ ಅಧ್ಯಕ್ಷ ಆನಂದ್ ರಾಜಪ್ಪ ಕಾರ್ಯಕ್ರಮಕ್ಕೆ ಶುಭ ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ, ಪ್ರತಿದಿನ ನಾವು ಭಗವಧ್ಗೀತೆಯ ಶ್ಲೋಕವನ್ನು ಪಠಿಸಿದರೆ ಮನಸ್ಸಿನಲ್ಲಿ ಸುಖ ಶಾಂತಿ, ಆತ್ಮಸ್ಥೇರ್ಯ ಮೂಡಲು ಸಾಧ್ಯ. ಮಕ್ಕಳಿಗೂ ಇದನ್ನು ಕಲಿಸುವಂತಾಗಬೇಕು. ಶ್ರೀಕೃಷ್ಣ ಬೋಧಿಸಿದ ಭಗವದ್ಗೀತೆಯ ಸಂದೇಶಗಳನ್ನು ವಿಶ್ವದ ಬಹುತೇಕರು ಅನುಸರಿಸುತ್ತಿದ್ದು, ಅವು ಸಾರ್ವಕಾಲಿಕ ಸತ್ಯದಿಂದ ಕೂಡಿವೆ ಕೃಷ್ಣನ ನಾಮ ಜಪಿಸಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
ಸಭಾ ಕಾರ್ಯಕ್ರಮದ ಬಳಿಕ ಶಾಲಾ ಕಾಲೇಜು ಹಾಗೂ ಸಾರ್ವಜನಿಕ ವಿಭಾಗದಲ್ಲಿ ಭಗವದ್ಗೀತೆ ಶ್ಲೋಕ ಮತ್ತು ಭಾವಾರ್ಥ ಪಠಣ ಸ್ಪರ್ಧಾ ಕಾರ್ಯಕ್ರಮ ನಡೆಯಿತು.
ಬಳಿಕ ಸ್ಪರ್ಧೆಯಲ್ಲಿ ಭಾಗವಹಿಸಿದ ಸ್ಫರ್ಧಾಳುಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ನಾಲ್ಕು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದುಕೊಂಡವರಿಗೆ ಪ್ರಮಾಣ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಲಾಯಿತು.
ತೀರ್ಪುಗಾರರಾಗಿ ಗಿರೀಶ್ ಕಿಗ್ಗಾಲು, ಎಸ್ ರಘುನಾಥ್ ಕಾರ್ಯ ನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ಕಾವೇರಿ ಗಣೇಶೋತ್ಸವ ಸಮತಿಯ ಕಾರ್ಯದರ್ಶಿ, ವಕೀಲ ವಿ.ಜಿ.ರಾಕೇಶ್, ಹರ್ಷ ಕೀರ್ತಿ, ಪ್ರಿಯಾಂಕ ಸೇರಿದಂತೆ ಸಮಿತಿಯ ಆಡಳಿತ ಮಂಡಳಿ ಪದಾಧಿಕಾರಿಗಳು, ಶಾಲಾ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಸಂತ ಅನ್ನಮ್ಮ ಕಾಲೇಜು ವಿದ್ಯಾರ್ಥಿನಿ ಅನುಷಾ ಪ್ರಾರ್ಥಿಸಿದರು. ಸಾಹಿತಿಗಳಾದ ರಜಿತ ಕಾರ್ಯಪ್ಪ ಸ್ವಾಗತಿಸಿದರು. ಸಾಹಿತಿಗಳಾಗಿರುವ ಪುಷ್ಪಲತಾ ಶಿವಪ್ಪ ಹಾಗೂ ವಿಮಲ ದಶರಥ ನಿರೂಪಿಸಿದರು, ವಿದುಷಿ ಪ್ರೇಮಾಂಜಲಿ ಆಚಾರ್ಯ ವಂದಿಸಿದರು.









