ವಿರಾಜಪೇಟೆ ಅ.9 : ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರಿನ ಸೇಕ್ರೆಡ್ ಹಾರ್ಟ್ ಕಾಲೇಜು ತಂಡ “ವಿನ್ನರ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು.
ಆತಿಥೇಯ ಸೆಂಟ್ ಆನ್ಸ್ ಪದವಿ ಕಾಲೇಜಿನ ತಂಡ ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಸಮಾರೋಪ ಸಮಾರಂಭದಲ್ಲಿ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಕರ್ ಫೈನಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಆಟಗಾರರಿಗೆ ಶುಭ ಕೋರಿದರು.
ಒಟ್ಟು 35 ತಂಡಗಳು ಭಾಗವಹಿಸಿದ್ದ ಈ ಪಂದ್ಯಾವಳಿಯಲ್ಲಿ ಮಂಗಳೂರಿನ ಸೇಕ್ರೆಡ್ ಹಾರ್ಟ್ ಪದವಿ ಕಾಲೇಜಿನ ತಂಡವು ಜಯಭೇರಿಯನ್ನು ಬಾರಿಸಿ ವಿನ್ನರ್ಸ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಆಯೋಜಕ ತಂಡವಾದ ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ತಂಡವು ರನ್ನರ್ಸ್ ಪ್ರಶಸ್ತಿಗೆ ತೃಪ್ತಿಪಟ್ಟಿತ್ತು.
ಒಟ್ಟು ಮೂರು ದಿವಸ ನಡೆದ ಈ ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸೆಂಟ್ ಆನ್ಸ್ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಕ್ರೀಡೆಗಳು ಸಮಾಜದಲ್ಲಿ ವೈವಿದ್ಯತೆಯನ್ನು ತರಲು ಸಹಕಾರಿಯಾಗಿವೆ. ಪರಸ್ಪರ ಭಾಂದವ್ಯ ಬೆಳೆಸಿ ಸ್ನೇಹಪರ ಬೆಳವಣಿಗೆಗೆ ಪೂರಕವಾಗಿವೆ ಎಂದರು. ಅಂತಿಮ ಪದವಿ ವಿದ್ಯಾರ್ಥಿಗಳು ವಿದ್ಯಾಸಂಸ್ಥೆಯ ಸಹಕಾರದಿಂದ ಆಯೋಜಿಸಿದ ಈ ಕ್ರೀಡಾಕೂಟವು ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ವಿರಾಜಪೇಟೆ ಸೆಂಟ್ ಆನ್ಸ್ ಚರ್ಚ್‍ನ ಗುರುಗಳಾದ ಫಾ. ಯೇಸು ಪ್ರಸಾದ್ ಮಾತನಾಡಿ ವಿದ್ಯಾರ್ಥಿಗಳು ಪಾಠದ ಜೊತೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಆ ಮೂಲಕ ದೈಹಿಕ, ಮಾನಸಿಕವಾಗಿ ಸದೃಢರಾಗಬೇಕೆಂದರು.
ವಿರಾಜಪೇಟೆಯ ಸಮಾಜ ಸೇವಕರಾದ ರಜತ್ ಮಾತನಾಡಿ ಕಾಲೇಜು ವಿದ್ಯಾರ್ಥಿಗಳಿಂದ ಆಯೋಜಿಸಲಾಗಿದ್ದ ಈ ಕ್ರೀಡಾಕೂಟವು ಯಶಸ್ಸನ್ನು ಕಂಡಿದ್ದು, ಕಾಲೇಜಿನ ಆಡಳಿತ ಮಂಡಳಿ ಹಾಗೂ ಉಪನ್ಯಾಸಕರು, ವಿದ್ಯಾರ್ಥಿಗಳು ಪಟ್ಟ ಶ್ರಮವನ್ನು ಶ್ಲ್ಯಾಘಿಸಿದರು.
ವೇದಿಕೆಯಲ್ಲಿ ವಿರಾಜಪೇಟೆಯ ಆಕ್ಸ್ಫರ್ಡ್ ಫುಟ್ಬಾಲ್ ಕ್ಲಬ್‍ನ ಅಧ್ಯಕ್ಷ ರಾನ್ಸೋನ್, ಆರ್.ಎ. ಗ್ರೂಪ್‍ನ ಹರ್ಷಾದ್, ಉಂಬಾಯ್, ಕಾಲೇಜಿನ ಐಕ್ಯೂಎಸಿ ಘಟಕದ ಸಂಚಾಲಕಿ ಹೇಮ, ಕ್ರೀಡಾಕೂಟದ ಆಯೋಜಕರು ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಬಿ. ವಿ. ರಾಜರೈ, ಉಪನ್ಯಾಸಕಿ ದೃಶ್ಯ, ದೇಚಮ್ಮ ಉಪಸ್ಥಿತರಿದ್ದರು.
ಪಂದ್ಯಾವಳಿಯಲ್ಲಿ ಕೊಡಗು, ಮೈಸೂರು, ಉಡುಪಿ, ಮಂಗಳೂರು, ಕೇರಳದ ಕಾಲೇಜುಗಳ ತಂಡಗಳು ಪಾಲ್ಗೊಂಡಿದ್ದವು.
ಪಂದ್ಯಾವಳಿಯಲ್ಲಿ ಉತ್ತಮ ಗೋಲ್ ಕೀಪರ್ ಆಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಶಿಜು, ಮ್ಯಾನ್ ಓಫ್ ದ ಮ್ಯಾಚ್ ಆಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಅನ್ಸರ್, ಮ್ಯಾನ್ ಓಫ್ ದ ಸೀರೀಸ್ ಆಗಿ ಸೇಕ್ರೆಡ್ ಹಾರ್ಟ್ ಕಾಲೇಜಿನ ಶಿಜು, ಅತೀ ಹೆಚ್ಚು ಗೋಲ್ ಗಳಿಕೆಯ ಪ್ರಶಸ್ತಿಯನ್ನು ಸೆಂಟ್ ಆನ್ಸ್ ವಿರಾಜಪೇಟೆ ತಂಡದ ಅಫ್ರೀದ್, ಬೆಸ್ಟ್ ಡಿಫೆಂಡರ್ ಆಗಿ ಸೆಂಟ್ ಆನ್ಸ್ ಕಾಲೇಜಿನ ಶಫೀಕ್ ಪ್ರಶಸ್ತಿಯನ್ನು ಪಡೆದುಕೊಂಡರು.
ಪಂದ್ಯಾವಳಿಯ ತೀರ್ಪುಗಾರರಾಗಿ ರಾಷ್ಟ್ರ ಮಟ್ಟದ ತೀರ್ಪುಗಾರರಾದ ಅಮ್ಮತಿಯ ಶೇಷಪ್ಪ, ಮೈಸೂರಿನ ಕರುಣ್, ಇಸ್ಮಾಯಿಲ್ ಕಂಡಕೆರೆ ಕಾರ್ಯನಿರ್ವಹಿಸಿದರು.









