ಮಡಿಕೇರಿ ಅ.9 : ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಯಾಗಿರುವ ಜಲಜೀವನ್ ಮಿಷನ್ ಮತ್ತು ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಈ ಯೋಜನೆ ಕಾಮಗಾರಿಗಳನ್ನು ಪರಿಶೀಲಿಸಲು ಕೇಂದ್ರ WASH (WATER, SANITATION and HYGIENE) ತಜ್ಞರ ತಂಡದ ಅನಿಲ್ ಬಿಹಾರಿ ಮತ್ತು ಜಾಲಿ ಕೇಶವನ್ ರವರು ಜಿಲ್ಲೆಗೆ ಆಗಮಿಸಿದ್ದು, 3 ದಿನಗಳ ಕಾಲ ಜೆ.ಜೆ.ಎಂ ಮತ್ತು ಎಸ್ ಬಿ ಎಂ ಕಾಮಗಾರಿಗಳನ್ನು ಪರಿಶೀಲಿಸಿದರು. ಈ ಯೋಜನೆಯಡಿಯಲ್ಲಿ ಒಟ್ಟು 463 ಜನವಸತಿ ಕಾಮಗಾರಿಗಳನ್ನು ಕೈಗೊಳ್ಳಲಾಗಿರುತ್ತದೆ. ಇದರಲ್ಲಿ ಮಡಿಕೇರಿ ತಾಲ್ಲೂಕಿನ ಮಕ್ಕಂದೂರು, ಕಾಟಕೇರಿ, ಮದೆ, ಮಲೆಚೆಂಬು ಮತ್ತು ಸೊಡ್ಲೂರು ಕಟ್ಟೆಮಾಡು ಗ್ರಾಮಗಳು, ಸೋಮವಾರಪೇಟೆ ತಾಲ್ಲೂಕಿನ 7ನೇ ಹೊಸಕೋಟೆ, ಶಾಂತಳ್ಳಿ, ಕುಂದಳ್ಳಿ, ಕುಂಬೂರು, ಸೂರ್ಲಬ್ಬಿ, ಬೇಲೂರು ಬಸವನಹಳ್ಳಿ, ದೊಡ್ಡಮಳ್ತೆ, ಗಣಗೂರು, ಹಿತ್ಲುಕೇರಿ ಹಾಗೂ ಮುಳ್ಳೂರು ಗ್ರಾಮಗಳು ಮತ್ತು ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಗ್ರಾಮದಲ್ಲಿನ ಕಾಮಗಾರಿಗಳನ್ನು ಆಯ್ಕೆ ಮಾಡಿಕೊಂಡು ಪರಿಶೀಲನೆ ನಡೆಸಿದ್ದಾರೆ. ಕೇಂದ್ರ WASH ತಂಡವು ಆಯಾ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ, ಈ ಯೋಜನೆಗೆ ಸಂಬಂಧಪಟ್ಟಂತೆ ಜೆ.ಜೆ.ಎಂ ಯೋಜನೆಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸುವ ಬಗ್ಗೆ ಅಭಿಯಂತರರಿಗೆ ಮಾರ್ಗದರ್ಶನ ನೀಡಿದರು. ಸೋಮವಾರ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ ಅವರನ್ನು ಭೇಟಿ ಮಾಡಿ ಕಾಮಗಾರಿ ಪರಿಶೀಲಿಸಿದ ಬಗ್ಗೆ ಚರ್ಚಿಸಿದರು. ತಂಡದೊಂದಿಗೆ ಜಿ.ಪಂ.ಇಇ ಸುರೇಶ್ ಕುಮಾರ್, ಜಿಲ್ಲಾ ಜೆಜೆಎಂ ಮತ್ತು ಎಸ್ ಬಿ ಎಂ ಅಧಿಕಾರಿಗಳು ಇದ್ದರು.












