ಮಡಿಕೇರಿ ಅ.10 : ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ನ ಕೊಡಗು ಶಾಖೆ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿ-2020ರ ಅನುಷ್ಠಾನದ ಕುರಿತು ಮಡಿಕೇರಿಯಲ್ಲಿ ಶಿಕ್ಷಣ ತಜ್ಞರ ವಿಶೇಷ ಸಭೆ ನಡೆಯಿತು.
ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಣ ನೀತಿಯ ಸಾಧಕ ಬಾಧಕಗಳ ಕುರಿತು ಚರ್ಚೆ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ.ಪಿ.ಸುಬ್ರಮಣ್ಯ ಯಡಿಪಡಿತ್ತಾಯ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುನ್ನು ಒಂದು ಬಾರಿಯಾದರು ಓದಲೇಬೇಕು. ಪ್ರಸ್ತುತ ದಿನಗಳಲ್ಲಿ ಶಿಕ್ಷಣ ಚಿಂತಾಜನಕ ಸ್ಥಿತಿಯಲ್ಲಿದ್ದು, ವಿದ್ಯಾರ್ಥಿಗಳಿಗೆ ವಾಸ್ತವದ ಸ್ಥಿತಿಗತಿಗಳ ಬಗ್ಗೆ ಅರಿವು ಮೂಡಿಸಬೇಕು. ಈ ನಿಟ್ಟಿನಲ್ಲಿ ಪಠ್ಯಪುಸ್ತಕದ ಹೊರತಾಗಿಯೂ ಶಿಕ್ಷಣ ನೀಡುವಂತಾಗಬೇಕು ಎಂದರು.
ಜೀವನ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸುವ ಸಾಮಥ್ರ್ಯ, ಕೌಶಲ್ಯ, ಚಾಕಚಕ್ಯತೆ, ಇಚ್ಛಾಶಕ್ತಿ ಇಲ್ಲದಂತಾಗಿದೆ. ಅಂಕಗಳೇ ಮುಂದಿನ ಗುರಿ ಅಲ್ಲ, ಒಮ್ಮೆ ಗುರಿ ಇಟ್ಟ ನಂತರ ಅದನ್ನು ಬದಲಾಯಿಸಬಾರದು, ಬದಲಾಯಿಸಬೇಕಾದರೆ ತಂತ್ರಗಾರಿಕೆ ಮುಖ್ಯ ಎಂದು ತಿಳಿಸಿದರು.
ಪೊನ್ನಂಪೇಟೆ ಸಾಯಿಶಂಕರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹಾಗೂ ಕೊಡಗು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ಕೋಳೆರ ಝರು ಗಣಪತಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ನಗರಸಭೆ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಮಂಗಳೂರು ವಿಶ್ವ ವಿದ್ಯಾನಿಲಯದ ನಿಕಟಪೂರ್ವ ಸಿಂಡಿಕೇಟ್ ಸದಸ್ಯ ಹಾಗೂ ಪೀಪಲ್ಸ್ ಫೋರಮ್ ಫಾರ್ ಕರ್ನಾಟಕ ಎಜುಕೇಶನ್ ಸಂಸ್ಥೆಯ ಕೊಡಗು ಜಿಲ್ಲಾ ಸಂಚಾಲಕ ಜಯಪ್ರಕಾಶ್ ಎಸ್.ತಂಟೆಪಾಡಿ, ಮಂಗಳೂರು ವಿಭಾಗದ ಸಂಚಾಲಕ ಕೆ.ರಮೇಶ್, ನಗರಸಭೆ ಸದಸ್ಯರು, ಸಿಂಡಿಕೇಟ್ ಸದಸ್ಯರು, ಶಿಕ್ಷಣ ತಜ್ಞರು, ಪ್ರಾಂಶುಪಾಲರು, ಉಪನ್ಯಾಸಕರು, ಮುಖ್ಯೋಪಧ್ಯಾಯರು, ಶಿಕ್ಷಕರು ಹಾಗೂ ಚಿಂತಕರು ಚರ್ಚೆಯಲ್ಲಿ ಪಾಲ್ಗೊಂಡಿದ್ದರು.











