ನಾಪೋಕ್ಲು ಅ.10 : ಕಳೆದ 25 ವರ್ಷಗಳಿಂದ ಬಹಳ ಅರ್ಥಪೂರ್ಣವಾಗಿ ಬೆಂಗಳೂರಿನಲ್ಲಿ ಬಾಳೆಯಡ ಕುಟುಂಬಸ್ಥರು ಸಂತೋಷ ಕೂಟವನ್ನು ನಡೆಸಿಕೊಂಡು ಬರುತ್ತಿದ್ದು, ಪ್ರತಿಯೊಬ್ಬರ ಕಷ್ಟ ಸುಖಕ್ಕೂ ಭಾಗಿಯಾಗುತ್ತಿದ್ದೇವೆ.ಇದೀಗ 25ನೇ ವರ್ಷಕ್ಕೆ ಕಾಲಿಟ್ಟಿದ್ದು ಕುಟುಂಬದವರ ಒಗ್ಗಟ್ಟು ಹೀಗೆ ಇರಲಿ ಎಂದು ಕಾರ್ಯದರ್ಶಿ ರವಿ ಉತ್ತಯ್ಯ ಹೇಳಿದರು.
ಬೆಂಗಳೂರಿನ ಇಂಟರ್ ನ್ಯಾಷನಲ್ ಏರ್ ರ್ಪೋರ್ಟ್ ರೋಡಿನ ಗೋಲ್ಡನ್ ಫಿಂಚ್ ರೆಸ್ಟೋರೆಂಟ್ ನಲ್ಲಿ ಬಾಳೆಯಡ ಕುಟುಂಬದ 25ನೇ ವರ್ಷದ ಸಂತೋಷಕೂಟದಲ್ಲಿ ಅವರು ಮಾತನಾಡಿದರು.
ಕುಟುಂಬದ ಹಿರಿಯರಾದ ಬಾಳೆಯಡ ಶೀಲಾ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಮೊದಲಿಗೆ ಶ್ರೀ ಕಾವೇರಿ ಮಾತೆಯ ನೆನೆದು ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಕಾರ್ಯಕ್ರಮದಲ್ಲಿ ಹಿರಿಯರಾದ ಶೀಲಾ ಸೇರಿದಂತೆ ಒಲಿಂಪಿಯನ್ ಕರ್ನಲ್ ಬಾಳೆಯಡ ಸುಬ್ರಮಣಿ, ಅಂತಾರಾಷ್ಟ್ರೀಯ ಹಾಕಿ ಆಟಗಾರ ಸುಮನ್ ಪೂಣಚ್ಚ, ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಂತಹ ಕರುಣ್ ಕಾಳಪ್ಪ ಅವರು ಕುಟುಂಬದಲ್ಲಿ ಪಿ ಹೆಚ್ ಡಿ, ವಕೀಲ ವೃತ್ತಿ, ಇಂಜಿನಿಯರ್ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ 60 ಜನರನ್ನು ಸನ್ಮಾನಿಸಲಾಯಿತು.
ಬಳಿಕ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಕ್ರೀಡೆಗಳನ್ನು ನಡೆಸಿ ಅಲ್ಲಿಯೇ ಬಹುಮಾನವನ್ನು ವಿತರಿಸಲಾಯಿತು. 25 ವರ್ಷದಿಂದ ಕುಟುಂಬದ ಕೂಟವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಂತಹ ಕಾರ್ಯದರ್ಶಿ ರವಿ ಉತ್ತಯ್ಯ ಜೊತೆಯಲ್ಲಿ ಅವರ ಪತ್ನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವರದಿ : ದುಗ್ಗಳ ಸದಾನಂದ









