ಮಡಿಕೇರಿ ಅ.10 : ಜಾಗತಿಕವಾಗಿ ಭಾರತೀಯ ಕಾಫಿಗೆ ಬೇಡಿಕೆ ಮತ್ತು ಮಾನ್ಯತೆ ದೊರಕಿಸುವ ನಿಟ್ಟಿನಲ್ಲಿ ದಕ್ಷಿಣ ಭಾರತ ಬೆಳೆಗಾರರ ಒಕ್ಕೂಟ (ಉಪಾಸಿ) ವಿವಿಧ ಕಾಫಿ ಸಂಸ್ಥೆಗಳ ಸಹಕಾರದಲ್ಲಿ ಇಂಡಿಯನ್ ಕಾಫಿ ಬ್ರಾಂಡ್ ರೂಪಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಂದು ಉಪಾಸಿಯ ಅಧ್ಯಕ್ಷ ಸಿ.ಶ್ರೀಧರನ್ ಹೇಳಿದ್ದಾರೆ.
ನಗರದಲ್ಲಿ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ನ 144ನೇ ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಶ್ರೀಧರನ್, ಈಗಾಗಲೇ ವಿಶ್ವದ ಪ್ರಮುಖ ಕಾಫಿ ಕೆಫೆ ಸಂಸ್ಥೆಗಳು ಭಾರತದಲ್ಲಿ ಕೆಫೆ ಪ್ರಾರಂಭಿಸುತ್ತಿವೆ. ಕಾಫಿ ಜಗತ್ತಿನಲ್ಲಿ ಭಾರತದ ಕಾಫಿಯೂ ಗುರುತಿಸಲ್ಪಡುತ್ತಿದೆ. ಬೆಂಗಳೂರಿನಲ್ಲಿ ಕಳೆದ ತಿಂಗಳು ಆಯೋಜಿತ ವಿಶ್ವಕಾಫಿ ಸಮ್ಮೇಳನ ಕೂಡ ಜಾಗತಿಕವಾಗಿ ಭಾರತೀಯ ಕಾಫಿಗೆ ಒಳ್ಳೆಯ ಪ್ರಚಾರ ದೊರಕುವಂತೆ ಮಾಡಿದೆ. ಉಪಾಸಿ ಸಂಸ್ಥೆಯು ಇದೀಗ ಕರ್ನಾಟಕ ಬೆಳೆಗಾರರ ಸಂಘ, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಸಹಯೋಗದಲ್ಲಿ ಇಂಡಿಯನ್ ಕಾಫಿ ಎಂಬ ಬ್ರಾಂಡ್ ಮೂಲಕ ಭಾರತೀಯ ಕಾಫಿಗೆ ಜಾಗತಿಕ ಬೇಡಿಕೆ ಮತ್ತು ಮಾನ್ಯತೆ ದೊರಕಿಸಲು ಪ್ರಯತ್ನಿಸುತ್ತಿದೆ ಎಂದರು.
ಭಾರತದಲ್ಲಿ ಟೀ ಬೆಳೆಗೆ ಹೆಚ್ಚು ಅವಕಾಶಗಳಿದ್ದರೂ ವೈವಿಧ್ಯಮಯ ಟೀ ಉತ್ಪನ್ನಗಳಿಂದಾಗಿ ಟೀಯನ್ನು ಇಂಡಿಯನ್ ಟೀ ಎಂದು ಬ್ರಾಂಡ್ ಮಾಡಲು ಕಷ್ಟಸಾಧ್ಯ. ಆದರೆ ಕಾಫಿ ಇದಕ್ಕೆ ಹೊರತಾಗಿದ್ದು, ಕೊಲಂಬಿಯನ್, ಮೆಕ್ಸಿಕನ್ ಕಾಫಿ ರೀತಿಯಲ್ಲಿಯೇ ವಿಶ್ವದಲ್ಲಿ ಇಂಡಿಯನ್ ಕಾಫಿ ಎಂದು ಬ್ರಾಂಡ್ ಮಾಡಲು ಸುಲಭವಾಗಲಿದೆ. ಆದರೆ ಕಾಫಿ ಕೃಷಿಕರು ತಾವು ಬೆಳೆಯುವ ಕಾಫಿಯ ಗುಣಮಟ್ಟದತ್ತ ಗಮನ ಹರಿಸಿದರೆ ಮಾತ್ರ ಇಂಡಿಯನ್ ಕಾಫಿಗೆ ಬ್ರಾಂಡ್ ದೊರಕಲು ಸಾಧ್ಯವಾಗುತ್ತದೆ ಎಂದೂ ಶ್ರೀಧರನ್ ಅಭಿಪ್ರಾಯಪಟ್ಟರು.
ಪ್ರಸ್ತುತ ಭಾರತದಲ್ಲಿ ಬೆಳೆಸಲಾಗುತ್ತಿರುವ 3.50 ಲಕ್ಷ ಮೆಟ್ರಿಕ್ ಟನ್ ಕಾಫಿಯಲ್ಲಿ 90 ಸಾವಿರ ಮೆಟ್ರಿಕ್ ಟನ್ ಕಾಫಿ ಆಂತರಿಕವಾಗಿ ಬಳಸಲ್ಪಡುತ್ತಿದ್ದು, ಉಳಿದ 2.60 ಲಕ್ಷ ಮೆಟ್ರಿಕ್ ಟನ್ ಕಾಫಿಯನ್ನು ವಿದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಈ ರಫ್ತು ವಹಿವಾಟಿನಿಂದ ಕೇಂದ್ರ ಸರ್ಕಾರಕ್ಕೆ ವಾರ್ಷಿಕ 80 ಸಾವಿರ ಕೋಟಿ ವರಮಾನ ಲಭಿಸುತ್ತಿದೆ ಎಂದು ಮಾಹಿತಿ ನೀಡಿದ ಶ್ರೀಧರನ್, ರಫ್ತು ಮಾಡಲಾಗುವ ಕಾಫಿಯಲ್ಲಿ ಈಗಿನಿಂದಲೇ ಶೇ.5 ರಷ್ಟು ಕಾಫಿಗೆ ಬ್ರಾಂಡ್ ಮಾಡುವ ಗುರಿ ಹೊಂದಬೇಕಾಗಿದೆ ಎಂದು ಸಲಹೆ ನೀಡಿದರು.
1940ರಲ್ಲಿ ಜಾರಿಯಾದ ಕಾಫಿ ಕಾಯಿದೆಯನ್ನು ಪರಿಣಾಮಕಾರಿಯಾಗಿ ಕಾಫಿ ಉದ್ಯಮಕ್ಕೆ ಪ್ರಯೋಜನವಾಗುವಂತೆ ಮಾಡುವ ನಿಟ್ಟಿನಲ್ಲಿ ಉಪಾಸಿ ಪ್ರಯತ್ವಿಸುತ್ತಿದೆ. ಈ ಕಾಯಿದೆಯ ಸಮರ್ಪಕ ಪ್ರಯೋಜನ ಕಾಫಿ ಕೃಷಿಕರು, ಉದ್ಯಮಿಗಳಿಗೆ ಆಗಬೇಕೆಂದು ಶ್ರೀಧರನ್ ಹೇಳಿದರು.
ಟೀ ತೋಟಗಳಲ್ಲಿ ಕೈಗೊಂಡ ಪ್ರಯೋಗದಂತೆ ಭವಿಷ್ಯದಲ್ಲಿ ಕಾಫಿ ತೋಟಗಳಲ್ಲಿಯೂ ಔಷಧೀಯ ಸಸಿಗಳನ್ನು ಬೆಳೆಸಬೇಕಾಗಿದೆ. ಈಗ ಉಪಾಸಿ ಗುರುಸಿರುವಂತೆ 1072 ಔಷಧೀಯ ಸಸ್ಯಗಳಿದ್ದು, ಈ ಪೈಕಿ 270 ಸಸ್ಯಗಳು ಉತ್ತಮ ಮಾರುಕಟ್ಟೆ ಹೊಂದಿದ್ದು ಕಾಫಿ, ಟೀ ಬೆಳೆಗಾರರ ಆರ್ಥಿಕತೆಗೆ ನೆರವಾಗಲಿದೆ ಎಂದೂ ಶ್ರೀಧರನ್ ತಿಳಿಸಿದರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಯು.ಅಶೋಕ್ ಮಾತನಾಡಿ, ಮಾನವ-ವನ್ಯಜೀವಿ ಸಂಘರ್ಷ ಕೊಡಗಿನಲ್ಲಿ ಎಲ್ಲೆ ಮೀರಿದ್ದು, ಶಾಶ್ವತ ಪರಿಹಾರ ದೊರಕದಿದ್ದರೆ ತೋಟ ನಿರ್ವಹಣೆಯೇ ಹೊರೆಯಾಗಲಿದೆ. ರಾಜ್ಯ ಸರ್ಕಾರ ಮುಂಗಡ ಪತ್ರದಲ್ಲಿ ಸೂಕ್ತ ಪರಿಹಾರವನ್ನು ವನ್ಯಜೀವಿ ಸಂಘರ್ಷದಲ್ಲಿ ಸಂತ್ರಸ್ಥರಾದವರಿಗೆ ನೀಡಬೇಕೆಂದು ಒತ್ತಾಯಿಸಿದರು.
ಕರಿಮೆಣಸು, ಅಡಕೆ ಬೆಳೆಗಳಂತೆಯೇ ಕಾಫಿ ಕೃಷಿಯನ್ನೂ ಕೇಂದ್ರ ಸರ್ಕಾರ ಬೆಳೆ ವಿಮೆ ಪರಿಹಾರ ಯೋಜನೆಯಡಿ ತರಬೇಕೆಂದು ಆಗ್ರಹಿಸಿದ ಅಶೋಕ್, ಕೊಡಗಿನಲ್ಲಿ ಬೆಳೆಗಾರರು ಎದುರಿಸುತ್ತಿರುವ ಪೌತಿ ಖಾತೆ ವರ್ಗಾವಣೆ ಸಂಬಂಧಿತ ಸಮಸ್ಯೆಗೆ ಶೀಘ್ರ ಪರಿಹಾರ ದೊರಕಬೇಕಾಗಿದೆ ಎಂದೂ ಹೇಳಿದರು.
ಕಾಫಿ ತೋಟಗಳಲ್ಲಿ ಇತ್ತೀಚಿನ ತಿಂಗಳಲ್ಲಿ ವೃತ್ತಿಪರ ಕಾರ್ಮಿಕರ ಕೊರತೆ ತೀವ್ರವಾಗಿದೆ. ಇತ್ತೀಚಿಗೆ ದಿನಕ್ಕೆ 3-4 ಗಂಟೆ ಮಾತ್ರ ಕಾಮಿ9ಕರು ಕೆಲಸ ಮಡುತ್ತಿದ್ದಾರೆ. ಆದರೆ ದಿನದ ವೇತನವಾದ 475 ರೂ. ಪಾವತಿಯು ಮಾಲೀಕರಿಗೆ ಹೊರೆಯಾಗುತ್ತಿದೆ. ಈ ನಿಟ್ಟಿನಲ್ಲಿ ಗಂಟೆಲೆಕ್ಕದಲ್ಲಿ ಕಾರ್ಮಿಕರಿಗೆ ವೇತನ ನಿಗಧಿಯಾಗಲೇಬೇಕಾದ ಅನಿವಾರ್ಯತೆ ಎದುರಾಗಿದೆ. ಗಂಟೆಲೆಕ್ಕದಲ್ಲಿ ವೇತನ ಪಾವತಿ ನಿಯಮ ಜಾರಿಗೆ ಸರ್ಕಾರ ಮುಂದಾಗಬೇಕೆಂದೂ ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಅಶೋಕ್ ಸಲಹೆ ನೀಡಿದರು.
ಸಿಎಸ್ ಐ ಆರ್ ಮತ್ತು ಸಿಎಫ್ ಟಿಆರ್ ಐ ನ ನಿವೃತ್ತ ಹಿರಿಯ ಪ್ರಧಾನ ವಿಜ್ಞಾನಿ ಡಾ.ಕೆ.ಎ.ಅನು ಅಪ್ಪಯ್ಯ ಮಾತನಾಡಿ, ಕಾಫಿ ಹಸ್ಕ್ ಸೇರಿದಂತೆ ಕಾಫಿಯ ವಿವಿಧ ಅಂಶಗಳನ್ನು ಬಳಸಿ ತಯಾರಿಸಬಹುದಾದ ಇತರ ಉತ್ಪನ್ನಗಳ ಬಗ್ಗೆಯೂ ಕಾಫಿ ಉದ್ಯಮ ಚಿಂತನೆ ಹರಿಸಬೇಕಾಗಿದೆ. ಚಿಕೋರಿ ರಹಿತ ಕಾಫಿ ಬಳಕೆ ಮೂಲಕ ಆರೋಗ್ಯ ವೃದ್ಧಿಯ ಬಗ್ಗೆ ಪ್ರತೀಯೋರ್ವರೂ ಜಾಗೃತಿ ವಹಿಸಬೇಕಾಗಿದೆ ಎಂದರು.
ತಂಪುಪಾನೀಯ ಸೇರಿದಂತೆ ವಿವಿಧ ಆಹಾರ ಉತ್ಪನ್ನಗಳಲ್ಲಿರುವ ಆರೋಗ್ಯಕ್ಕೆ ಮಾರಕವಾದ ವಿಷಕಾರಿ ಪದಾರ್ಥಗಳ ಬಗ್ಗೆ ಯಾರೂ ಉತ್ಪನ್ನಗಳ ಖರೀದಿ ಸಂದರ್ಭ ಎಚ್ಚರಿಕೆ ವಹಿಸುತ್ತಿಲ್ಲ. ಹೀಗಾಗಿಯೇ ನಾವು ಉಪಯೋಗಿಸುವ ಬಹುತೇಕ ಆಹಾರೋತ್ಪನ್ನಗಳಿಂದ ವಿಷಯುಕ್ತ ಪದಾರ್ಥಗಳು ನಮ್ಮ ದೇಹವನ್ನು ಸೇರುತ್ತಿದೆ. ಉತ್ಪನ್ನಗಳ ಖರೀದಿ ಸಂದರ್ಭ ಪ್ಯಾಕೇಟ್ ಗಳಲ್ಲಿ ಎಷ್ಟು ದರ ಇದೆ ಎಂದು ಗಮನಿಸುವ ಗ್ರಾಹಕ ಆ ಉತ್ಪನ್ನಗಳಲ್ಲಿ ಎಷ್ಟು ನೈಜ ಪದಾರ್ಥಗಳನ್ನು
ಬಳಸಲಾಗಿದೆ. ಎಷ್ಟು ಕೃತಕ ಪದಾರ್ಥಗಳನ್ನು ಬಳಸಲಾಗಿದೆ ಎಂದು ತಿಳಿದುಕೊಳ್ಳಲೇಬೇಕಾಗಿದೆ. ಉದಾಹರಣೆಗೆ ಹಣ್ಣಿನ ಪಾನೀಯಗಳಲ್ಲಿ ಶೇ.12 ರಷ್ಟು ಮಾತ್ರ ಹಣ್ಣಿನ ರಸ ಉಪಯೋಗಿಸಲಾಗುತ್ತಿದ್ದು ಉಳಿದ 88 ಶೇ. ಸಕ್ಕರೆಯ ಅಂಶವನ್ನು ಬಳಸಲಾಗುತ್ತಿದೆ. ಇದು ಆರೋಗ್ಯಕ್ಕೆ ಹಾನಿಕಾರಕ ಎಂದೂ ಡಾ.ಅನುಅಪ್ಪಯ್ಯ ಹೇಳಿದರು.
ಕೊಡಗಿನಲ್ಲಿ ಮಾರಾಟವಾಗುತ್ತಿರುವ ಹೋಂಮೇಡ್ ವೈನ್ ಗಳು ಅತ್ಯಂತ ಅಪಾಯಕಾರಿಯಾಗಿದ್ದು, ಖಂಡಿತವಾಗಿಯೂ ಸರ್ಕಾರ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಈ ರೀತಿ ಹೋಂಮೇಡ್ ವೈನ್ ತಯಾರಿಸುವುದೇ ಅಕ್ರಮವಾಗಿದ್ದು ಇದನ್ನು ಮಾರಾಟಕ್ಕೆ ಹೇಗೆ ನೀಡಲಾಗುತ್ತಿದೆ ಎಂದು ಪ್ರಶ್ನಿಸಿದ ಡಾ.ಅನು ಅಪ್ಪಯ್ಯ, ಹೋಂಮೇಡ್ ವೈನ್ ಎಂಬ ಅಪಾಯಕಾರಿ ಪ್ರವೃತ್ತಿಗೆ ಕಡಿವಾಣ ಹಾಕಲೇಬೇಕಾಗಿದೆ ಎಂದು ಒತ್ತಾಯಿಸಿದರು.
ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಸಿ.ಕೆ.ಬೆಳ್ಯಪ್ಪ, ಉಪಾಧ್ಯಕ್ಷ ಎ.ನಂದಬೆಳ್ಯಪ್ಪ ವೇದಿಕೆಯಲ್ಲಿದ್ದರು. ಎಂ.ಸಿ.ಕಾರ್ಯಪ್ಪ ನಿರೂಪಿಸಿದ ಕಾರ್ಯಕ್ರಮದಲ್ಲಿ ಜಿಲ್ಲೆಯ ಹಲವೆಡೆಗಳಿಂದ ಕಾಫಿ ಬೆಳೆಗಾರರು, ಬೆಳೆಗಾರ ಸಂಸ್ಥೆಗಳು, ಕೃಷಿ ಸಂಬಂಧಿತ ಉತ್ಪನ್ನಗಳ ಮಾರಾಟಗಾರರು ಪಾಲ್ಗೊಂಡಿದ್ದರು. ಕಾಫಿ ಸಂಬಂಧಿತ ವಿಚಾರ ಸಂಕಿರಣಗಳು ನಡೆದವು.









