ನಾಪೋಕ್ಲು ನ.4 : ಕ್ರೀಡೆ, ಶಿಕ್ಷಣ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಸಾರ್ಥಕತೆ ಪಡೆಯಬೇಕಾದರೆ ನಿರಂತರ ಪರಿಶ್ರಮ ಪಡಬೇಕು. ಇದರಿಂದ ಯಶಸ್ಸು ಪಡೆಯಲು ಸಾಧ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ನಾಪೋಕ್ಲುವಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ 2023-24ರ ಸಾಲಿನ ಸಾಂಸ್ಕೃತಿಕ ಕ್ರೀಡಾ ಮತ್ತು ವಿವಿಧ ಸಮಿತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸಂಪೂರ್ಣವಾಗಿ ನಿರ್ವಹಿಸಬೇಕು ಆಗ ಸಾರ್ಥಕತೆ ಸಿಗುತ್ತದೆ. ಭಾವನೆಗಳ ಮೂಲಕ ದೇಶ ಕಟ್ಟಲು ಸಾಧ್ಯವಿಲ್ಲ. ದುಡಿಯುವ ವರ್ಗದಿಂದ ದೇಶ ಪ್ರಗತಿ ಕಾಣಲಿದೆ. ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸುವ ಕೆಲಸವನ್ನು ಮಾಡಬೇಕಿದೆ ಎಂದ ಅವರು ವಿದ್ಯಾರ್ಥಿಗಳು ದೂರ ದೃಷ್ಟಿ ಇರಿಸಿ ಕೆಲಸ ನಿರ್ವಹಿಸಬೇಕು. ಭವಿಷ್ಯದ ಕಡೆ ನಿಗಾವಹಿಸುವಂತಹ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದರು.
ಕೊಡಗು ವಿಶ್ವ ವಿದ್ಯಾ ಲಯದ ಕುಲ ಸಚಿವ ಡಾ.ಸೀನಪ್ಪ ಮಾತನಾಡಿ, ಉತ್ತಮ ಭವಿಷ್ಯಕ್ಕಾಗಿ ಮಕ್ಕಳಲ್ಲಿ ಬದಲಾವಣೆ ಆಗಬೇಕು. ವಿದ್ಯಾರ್ಥಿಗಳು ಇಷ್ಟಪಟ್ಟು ಓದಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಕರ್ನಾಟಕ ರಾಜ್ಯೋತ್ಸವದಂದು ಮಾತ್ರ ಭಾಷೆ, ಸಂಸ್ಕೃತಿಯ ಬಗ್ಗೆ ಅಭಿಮಾನ ತೋರ್ಪಡಿಸಿದರೆ ಸಾಲದು ಸಾವಿರ ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯ ಅಭಿವೃದ್ಧಿಗೆ ಪ್ರತಿಯೊಬ್ಬ ಕನ್ನಡಿಗರು ಕೈಜೋಡಿಸುವಂತಾಗಬೇಕು ಎಂದು ಕರೆ ನೀಡಿದರು.
ಕೊಡಗು ವಿಶ್ವವಿದ್ಯಾನಿಲಯದ ಅಡಿಯಲ್ಲಿ ಕಾನೂನು ಕಾಲೇಜು ಹಾಗೂ ಕ್ರೀಡೆಗೆ ಸಂಬಂಧಿಸಿದ ವಿಭಾಗಗಳನ್ನು ತೆರೆಯಲು ಶಾಸಕರು ಸಹಕರಿಸಬೇಕೆಂದು ಮನವಿ ಮಾಡಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಕಾವೇರಿ ಪ್ರಕಾಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಮ್ಮ ರಾಷ್ಟ್ರದ ಮಾದರಿ ವ್ಯಕ್ತಿಗಳ ಗುಣನಡತೆಯನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಮೈಗೂಡಿಸಿಕೊಂಡು ಉತ್ತಮ ಪ್ರಜೆಯಾಗಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನೂತನ ಹಳೆವಿದ್ಯಾರ್ಥಿ ಸಂಘಕ್ಕೆ ಗಣ್ಯರು ಹಾಗೂ ಹಳೆ ವಿದ್ಯಾರ್ಥಿಗಳು ಹೂವಿನ ಗಿಡಕ್ಕೆ ನಿರೇರಿಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭ ಐಕ್ಯೂಎಸಿ ಸಂಚಾಲಕ ನಂದೀಶ್, ಹೆಚ್. ಎಸ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಮನೋಜ್ ಕುಮಾರ್, ಕ್ರೀಡಾ ಸಮಿತಿ ಸಂಚಾಲಕ ಕೆ.ಎಂ ಮುದ್ದಪ್ಪ ಹಾಗೂ
ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಬೋಧಕ ಹಾಗೂ ಬೋಧಕೇತರರು, ವಿದ್ಯಾರ್ಥಿ ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿ ವೃಂದ ಪಾಲ್ಗೊಂಡಿದ್ದರು.
ಉಪನ್ಯಾಸಕ ಮುದ್ದಪ್ಪ ಶಾಸಕ ಎ.ಎಸ್ ಪೊನ್ನಣ್ಣ ಪರಿಚಯ ಮಾಡಿದರು. ಉಪನ್ಯಾಸಕಿ ಹರಿಣಿ ಡಾ. ಸೀನಪ್ಪ ಅವರ ಪರಿಚಯ ಮಾಡಿದರು. ವಿದ್ಯಾರ್ಥಿನಿಯರಾದ ಶ್ವೇತ ಮತ್ತು ರುಕ್ಮಿಣಿ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ವೇಣುಗೋಪಾಲ್ ನಿರೂಪಿಸಿ, ಉಪನ್ಯಾಸಕಿ ಡಿಶ್ಮ ವಂದಿಸಿದರು.
ವರದಿ : ದುಗ್ಗಳ ಸದಾನಂದ









