ಕುಶಾಲನಗರ ನ.10: ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಪುರಸಭೆ ವ್ಯಾಪ್ತಿಯಲ್ಲಿ ಪಟಾಕಿ ಮಾರಾಟ ಹಾಗೂ ಪಟಾಕಿ ಬಳಕೆ ನಿಯಂತ್ರಣ ಮಾಡುವ ಉದ್ದೇಶದಿಂದ ಕುಶಾಲನಗರ ಪುರಸಭೆ ವತಿಯಿಂದ “ಸ್ವಚ್ಚ ದೀಪಾವಳಿ ಶುಭ ದೀಪಾವಳಿ” ಅಭಿಯಾನಕ್ಕೆ ಚಾಲನೆ ದೊರೆಯಿತು.
ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು, ಕನ್ನಡ ಭಾರತಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಜೂನಿಯರ್ ಕಾಲೇಜು ಹಾಗೂ ಫಾತಿಮಾ ಕಾನ್ವೆಂಟ್ ನಲ್ಲಿ “ಸ್ವಚ್ಚ ದೀಪಾವಳಿ ಶುಭ ದೀಪಾವಳಿ” ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಪರಿಸರ ಸ್ನೇಹಿ ಹಸಿರು ದೀಪಾವಳಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಆಯಾ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿಗಳ ನೇತೃತ್ವದಲ್ಲಿ ಸಭೆಯನ್ನು ಕರೆದು ವಿದ್ಯಾರ್ಥಿಗಳಿಗೆ ಹಸಿರು ಪಟಾಕಿ ಬಗ್ಗೆ ಜಾಗೃತಿ ಮೂಡಿಸಲಾಯಿತು.
ನಂತರ ಹಸಿರು ಪಟಾಕಿ ಬಳಕೆ ಮಾಡುವ ಸಾರ್ವಜನಿಕರಿಂದ ಸಹಿ ಸಂಗ್ರಹಿಸಲಾಯಿತು. ಕಾಲೇಜುಗಳ ಮುಂಭಾಗ ಹಾಗೂ ಕಾರ್ಯಪ್ಪ ಸರ್ಕಲ್ ನಲ್ಲಿ ಸೆಲ್ಫೀ ಬೋರ್ಡ್ ಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಸೆಲ್ಫೀ ತೆಗೆಯಲು ಅನುವು ಮಾಡಿಕೊಡಲಾಗಿತ್ತು.
ಪರಿಸರ ಸ್ನೇಹಿ ದೀಪಾವಳಿಯ ಪ್ರತಿಜ್ಞಾ ವಿಧಿಯನ್ನು ಪಡೆಯಲು ಕ್ಯೂ ಆರ್ ಕೋಡ್ ಗಳನ್ನು ಇಡಲಾಗಿತ್ತು. ನಂತರ ಸಾರ್ವಜನಿಕರಿಗೆ ಸ್ವಚ್ಚ ದೀಪಾವಳಿ ಶುಭ ದೀಪಾವಳಿ ಅಭಿಯಾನದ ಬಗ್ಗೆ ಧ್ವನಿ ವರ್ಧಕದ ಮೂಲಕ ಅರಿವು ಮೂಡಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಹಾಗೂ ಶಾಲಾ ಶಿಕ್ಷಣ ಇಲಾಖೆಯ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ಘಟಕದ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್, ಪರಿಸರಕ್ಕೆ ಹಾನಿಯುಂಟು ಮಾಡುವ ಹಾಗೂ ಮಾಲಿನ್ಯಕಾರಿ ಪಟಾಕಿಯನ್ನು ಸಿಡಿಸದಂತೆ ಈಗಾಗಲೇ ಸುಪ್ರೀಂ ಕೋರ್ಟ್ ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಿಸುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕಿದೆ ಎಂದರು.
ಈ ಸಂದರ್ಭ ಕುಶಾಲನಗರ ಪರಸಭೆ ಮಾಜಿ ಅಧ್ಯಕ್ಷ ಜಯವರ್ಧನ್, ಕುಶಾಲನಗರ ಪುರಸಭೆ ಆರೋಗ್ಯಾಧಿಕಾರಿ ಉದಯ್ ಕುಮಾರ್, ಪುರಸಭೆ ಸಿಬ್ಬಂದಿಗಳು, ಪತ್ರಕರ್ತರಾದ ಜಯಪ್ರಕಾಶ್ ಹಾಗೂ ಸಾರ್ವಜನಿಕರು ಹಾಜರಿದ್ದರು.









