ಮಡಿಕೇರಿ ನ.10 : ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಪರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಶಾಂತಿಯುತ ಹೋರಾಟಕ್ಕೆ ಶೀಘ್ರ ಜಯ ಸಿಗಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಾಡಿನಾಡ್- ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಕುಂಜಿಲ ಕಕ್ಕಬ್ಬೆ “ಕೆಂಜರಾಣೆ ಪಾಡಿನಾಡ್‌ಮಂದ್”ನಲ್ಲಿ ಕೊಡವ ಜಾಗೃತಿ ಸಭೆಯ ಮೂಲಕ ಸಿಎನ್‌ಸಿ ಸಂಘಟನೆಯ ಐದು ಹಂತಗಳ ಪಾದಯಾತ್ರೆಯನ್ನು ಮುಕ್ತಾಯಗೊಳಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೊಡಗಿನ ಆದಿಮಸಂಜಾತ ಕೊಡವ ಜನಾಂಗಕ್ಕೆ ಸಂವಿಧಾನದಡಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಮೂಲಕ ಮಾತ್ರ ಭದ್ರತೆ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಕೊಡವ ಲ್ಯಾಂಡ್ ಗಾಗಿ ಶಾಂತಿಯುತ ಹೋರಾಟ ಮುಂದುವರೆಯಲಿದೆ. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ ನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿ ನಮ್ಮ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಿರಿಯರಾದ ಸ್ವಾಮಿ ಅವರು ನಮಗೆ ಸ್ಫೂರ್ತಿಯಾಗಿದ್ದು, ಅವರಿಂದ ಪ್ರೇರಣೆಗೊಂಡು ಅವರ ಜನ್ಮದಿನದಿಂದ ಪಾದಯಾತ್ರೆಯನ್ನು ಆರಂಭಿಸಿ ಇಂದು ಮುಕ್ತಾಯಗೊಳಿಸಿದ್ದೇವೆ. ಇವರ ಮಾರ್ಗದರ್ಶನದಲ್ಲಿ ಕೋಡವ ಲ್ಯಾಂಡ್ ಗಾಗಿ ಕಾನೂನು ಹೋರಾಟ ಕೂಡ ನಡೆಯಲಿದೆ ಎಂದರು.
ಇದೇ ನ.26 ರಂದು ಸಿಎನ್‌ಸಿ ವತಿಯಿಂದ ಕೊಡವ ನ್ಯಾಷನಲ್ ಡೇ ನಡೆಯಲಿದ್ದು, ಕಾರ್ಯಕ್ರಮಕ್ಕೆ ಡಾ.ಸುಬ್ರಮಣಿಯನ್ ಸ್ವಾಮಿ ಅವರು ಆಗಮಿಸಲಿದ್ದಾರೆ. ಸಮಾವೇಶದಲ್ಲಿ ಪ್ರತಿಯೊಬ್ಬ ಕೊಡವ, ಕೊಡವತಿಯರು ಪಾಲ್ಗೊಳ್ಳುವ ಮೂಲಕ ಸಿಎನ್‌ಸಿ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.
ಆದಿಮಸಂಜಾತ ಕೊಡವ ಜನಾಂಗ ತಮ್ಮ ಪೂರ್ವಜರು ನೀಡಿದ ಪೂಜನೀಯ ಭೂಮಿಯನ್ನು ಅನುಭವಿಸುತ್ತಿದ್ದಾರೆಯೇ ಹೊರತು ಯಾರೂ ದಾನವಾಗಿ ನೀಡಿಲ್ಲ. ಕೊಡಗಿನ ಮೂಲನಿವಾಸಿ ಆದಿಮಸಂಜಾತ ಕೊಡವರ ಮಾತೃಭೂಮಿ ಇದಾಗಿದ್ದು, ಹೊರಗಿನಿಂದ ಬಂದವರು ಅನುಭವಿಸುತ್ತಿರುವ ಭೂಮಿಗೂ, ಕೊಡವರ ಭೂಮಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಕೊಡವರ ಅಜನ್ಮ ಹಕ್ಕಾಗಿರುವ ಜನ್ಮಭೂಮಿ ಪರರ ಪಲಾಗುತ್ತಿದೆ. ಈ ಬಗ್ಗೆ ಕೊಡವರು ಜಾಗೃತಗೊಳ್ಳದಿದ್ದರೆ ಅತ್ಯಂತ ಸೂಕ್ಷ್ಮ ಜನಾಂಗ ಅಪಾಯಕ್ಕೆ ಸಿಲುಕುವ ಆತಂಕವಿದೆ ಎಂದು ಹೇಳಿದರು.
ನಮಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವುದಾಗಿ ಭರವಸೆ ನೀಡಿ 1956 ರಲ್ಲಿ ಕರ್ನಾಟಕ ರಾಜ್ಯದೊಂದಿಗೆ ವಿಲೀನಗೊಳಿಸಿ ನಂತರ ನಮ್ಮನ್ನು ಕಡೆಗಣಿಸುವ ಮೂಲಕ ವಂಚನೆ ಮಾಡಲಾಗಿದೆ. ಸಂವಿಧಾನದ 7 ನೇ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ರಾಜ್ಯಗಳ ಮರು-ಸಂಘಟನಾ ಕಾಯಿದೆ 1956 ರ ಒಪ್ಪಂದಗಳಿಗೆ ಕರ್ನಾಟಕ ರಾಜ್ಯವು ಬದ್ಧವಾಗಿಲ್ಲ. “ಸಿ” ರಾಜ್ಯವಾಗಿದ್ದ ಕೂರ್ಗ್ 1956ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ನಂತರ ಕೊಡವರನ್ನು ರಾಜ್ಯದ 2ನೇ ದರ್ಜೆಯ ವರ್ಣಭೇದ ನೀತಿಯ ನಾಗರಿಕರಂತೆ ಪರಿಗಣಿಸಲಾಗಿದೆ. ಇದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಾಚಪ್ಪ ಆರೋಪಿಸಿದರು.
ಡಾ.ಸುಬ್ರಮಣಿಯನ್ ಸ್ವಾಮಿ ಅವರು ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿ ಕೊಡವ ಲ್ಯಾಂಡ್ ಪರವಾಗಿ ಆಯೋಗವನ್ನು ರಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಸರ್ಕಾರಗಳು ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ನೀಡಬೇಕೆಂದು ಆಗ್ರಹಿಸಿದರು.
ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸಿಗದ ಹೊರತು ಕೊಡವರಿಗೆ ಸಾಂವಿಧಾನಿಕ ಭದ್ರತೆ ಮತ್ತು ನ್ಯಾಯಯುತ ಹಕ್ಕುಗಳು ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು, ಕೊಡವ ಜನಾಂಗದ ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು, ಕೊಡವ ಕಸ್ಟಮರಿ ಜನಾಂಗೀಯ ‘ಸಂಸ್ಕಾರ ಗನ್’ ಹಕ್ಕುಗಳನ್ನು ಸಿಖ್ಖರ “ಕಿರ್ಪಾನ್” ಗೆ ಸಮಾನವಾಗಿ ನಮ್ಮ ಸಂವಿಧಾನದ 25 ಮತ್ತು 26ನೇ ವಿಧಿಗಳ ಅಡಿಯಲ್ಲಿ ಕೊಡವರ “ಧಾರ್ಮಿಕ ಸಂಸ್ಕಾರ”ವೆಂದು ರಕ್ಷಿಸಬೇಕು, ಮಾತೃ ಭಾಷೆ ಕೊಡವ ತಕ್ಕ್ ಅನ್ನು 8ನೇ ಶೆಡ್ಯೂಲ್‌ಗೆ ಸೇರಿಸಬೇಕು. ಸಂವಿಧಾನದ 347, 350, 350ಎ ಮತ್ತು 350ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ 3ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು, ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತ್ರದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು. ಜೀವನದಿ ಕಾವೇರಿಗೆ “ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ಸ್ಥಾಪಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.
::: ಯೋಗಕ್ಷೇಮಕ್ಕಾಗಿ ಪೂಜೆ :::
ಕೊಡವ ಲ್ಯಾಂಡ್ ಹೋರಾಟದ ಪರ ಶ್ರೀಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಾಚಪ್ಪ ಅವರು, ಅರ್ಥಶಾಸ್ತ್ರಜ್ಞ ಡಾ.ಸುಬ್ರಮಣಿಯನ್ ಸ್ವಾಮಿ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದರು.
ಇದಕ್ಕೂ ಮೊದಲು ಕಕ್ಕಬ್ಬೆಯಲ್ಲಿ ಮಾನವ ಸರಪಳಿ ನಿರ್ಮಿಸಿದ ಸಿಎನ್‌ಸಿ ಪ್ರಮುಖರು ಹಾಗೂ ಕೊಡವ, ಕೊಡವತಿಯರು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು, ನಂತರ ಪಾದಯಾತ್ರೆಯಲ್ಲಿ ಸಾಗಿದರು.
ಕಲಿಯಂಡ ಮೀನ, ಪಟ್ಟಮಾಡ ಲಲಿತಾ ಗಣಪತಿ, ನಂದಿನೆರವಂಡ ಪಾರ್ವತಿ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತ, ಕರವಂಡ ಸರಸು, ನಂದಿನೆರವಂಡ ನಿಶಾ ಅಚಯ್ಯ, ನಂದೆಟ್ಟಿರ ಕವಿತಾ ಸುಬ್ಬಯ್ಯ, ಚೀಯಕಪೂವಂಡ ಚಿತ್ರ ರಂಜು, ಬಾಚಮಂಡ ಸೀತಾ ಪೂವಣ್ಣ, ಕಲಿಯಂಡ ಸರಸು ಮಾದಪ್ಪ, ಅಪ್ಪಾರಂಡ ಮೀರಾ ನಂಜಪ್ಪ, ಅಪ್ಪಾರಂಡ ನೀರು ನಂಜಪ್ಪ, ನಂಬುದಮಂಡ ಜೂಬಿ ದೇವಕ್ಕಿ, ಕಲಿಯಂಡ ಪ್ರಕಾಶ್, ಬಾಚಮಂಡ ರಾಜ ಪೂವಣ್ಣ, ದೇಶ ತಕ್ಕ ಪರದಂಡ ಸುಮನ್ ಸುಬ್ರಮಣಿ,
ಅರೆಯಡ ಗಿರೀಶ್, ನಂದಿನೆರವಂಡ ವಿಜು, ಬೇಪಡಿಯಂಡ ಬಿದ್ದಪ್ಪ, ನಂದಿನೆರವಂಡ ಬೋಪಣ್ಣ, ಅಪ್ಪಾರಂಡ ಶ್ರೀನಿವಾಸ್, ಪೊನ್ವಾಲ್ತಂಡ ರಾಜಪ್ಪ, ನಂದೆಟ್ಟಿರ ರವಿ ಸುಬ್ಬಯ್ಯ, ಚೋಳಪಂಡ ನಾಣಯ್ಯ, ಪಾಂಡಂಡ ನರೇಶ್, ಕೋಡಿಮಣಿಯಂಡ ಗಗನ್, ಕಂಬೆಯಂಡ ಮಿಟ್ಟು ಪಳಂಗಪ್ಪ, ಪಟ್ಟಮಾಡ ಕುಶ, ಮಂದಪಂಡ ಮನೋಜ್, ಅಲ್ಮಂಡ ನೆಹರು, ಪಟ್ಟಮಾಡ ಅಶೋಕ್, ಮಂದಪಂಡ ಸೂರಜ್, ಬಾಚಮಂಡ ಲವ, ಚಂಬಂಡ ಜನತ್, ಕಾಂಡೇರ ಸುರೇಶ್, ಪಾರ್ವಂಗಡ ನವೀನ್, ಜಮ್ಮಡ ಮೋಹನ್, ಅಪ್ಪೆಂಗಡ ಮಾಲೆ, ಅಪ್ಪಾರಂಡ ವಿಜು, ಅಪ್ಪಾರಂಡ ಪ್ರಸಾದ್, ಬಾಚಮಂಡ ಬೆಲ್ಲು ಪೂವಪ್ಪ, ಕಲ್ಯಾತಂಡ ಬಾಬು ತಿಮ್ಮಯ್ಯ, ಪುದಿಯೊಕ್ಕಡ ಪೃಥ್ವಿ, ಕಲಿಯಂಡ ಸಂಪನ್, ಕಲಿಯಂಡ ರಮೇಶ್, ಬಾಚಮಂಡ ಭರತ್, ಕಲ್ಯಾಟಂಡ ರಘು, ಕಲ್ಯಾತಂಡ ಯತೀಶ್, ಕಲ್ಯಾತಂಡ ಸುಧಾ, ಬೊಳಿಯಡಿರ ಸಂತು, ಕಲ್ಯಾತಂಡ ಅರುಣ್, ಕಲ್ಯಾತಂಡ ರಾಜ, ಚೀಯಕಪೂವಂಡ ರಂಜು, ಬೊಟ್ಟಂಗಡ ಜಪ್ಪು, ಪರ್ದಂಡ ಕಸ್ತೂರಿ, ಉದಿಯಂಡ ಸುಭಾಷ್, ಉದಿಯಂಡ ವಿನಯ್, ಕಂಬೆಯಂಡ ಮಿಟ್ಟು ಪಳಂಗಪ್ಪ, ಕಂಬೆಯಂಡ ರಾಜ ದೇವಯ್ಯ, ಅಪ್ಪಾರಂಡ ಪ್ರಕಾಶ್, ಅಪ್ಪಾರಂಡ ವಿವೇಕ್, ಉದಿಯಂಡ ಮೋಹನ್ ಪೆಮ್ಮಯ್ಯ, ಪೊನ್ವಾಲ್ತಂಡ ರಘು, ಪೊನ್ವಾಲ್ತಂಡ ಚೋಮುಣಿ, ಮೇಚಂಡ ಜೋಯಪ್ಪ, ಪೊರ್ಕೊಂಡ ಬೋಪಣ್ಣ, ಕೋಳೆರ ರನ್ನು, ಚೋಯಮಾಡಂಡ ಮೊಣ್ಣಪ್ಪ, ಬಡ್ಕಡ ಡೀನಾ ಪೂವಯ್ಯ, ಬಡ್ಕಡ ಉತಯ್ಯ, ನಂಬಂಡಮಂಡ ಗಪ್ಪು, ನಂಬಂಡಮಂಡ ಮನು ಮಂದಣ್ಣ, ನಂಬಂಡಮಂಡ ಅಯ್ಯಪ್ಪ, ನಾಟೋಳಂಡ ದಿಲೀಪ್, ಕುಂಡ್ಯೋಳಂಡ ರಮೇಶ್, ಬೇಪಡಿಯಂಡ ಬಿದ್ದಪ್ಪ, ಕಲ್ಯಾಟಂಡ ರಾಜಕುಮಾರ, ಕಳಿಯಂಡ ಸುನಂದಾ, ಕೇಟೋಳಿರ ಸನ್ನಿ ಸೋಮಣ್ಣ, ಮಾದಂಡ ಜಗ್ಗ, ಬಾಚಮಂಡ ಜಾಜಿ ಸೋಮಣ್ಣ, ನಂದಿನೆರವಂಡ ನಿಶಾ ಅಚ್ಚಯ್ಯ,
ಕಲಿಯಂಡ ಗಿರೀಶ್, ಅಲ್ಲಾರಂಡ ಸನ್ನು ಮತ್ತಿತರರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡು ಕೊಡವ ಲ್ಯಾಂಡ್ ಪರ ಘೋಷಣೆಗಳನ್ನು ಕೂಗಿದರು.











