ಮಡಿಕೇರಿ ನ.10 : ಮಕ್ಕಳ ದಿನಾಚರಣೆಯ ಪ್ರಯುಕ್ತ ಮಡಿಕೇರಿ ನಗರದ ಮಹದೇವಪೇಟೆಯ ಎಸ್‌ಎಸ್ ಆಸ್ಪತ್ರೆ ವತಿಯಿಂದ ನ.12 ರಂದು ವಿದ್ಯಾರ್ಥಿಗಳಿಗಾಗಿ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಆಸ್ಪತ್ರೆಯ ಸಮೀಪದಲ್ಲಿರುವ ಕ್ರೆಸೆಂಟ್ ಸ್ಕೂಲ್ ಆವರಣದಲ್ಲಿ ಭಾನುವಾರ ಬೆಳಗ್ಗೆ 9 ಗಂಟೆಯಿಂದ ಸ್ಪರ್ಧೆ ಆರಂಭಗೊಳ್ಳಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳುವಂತೆ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಶಿಲ್ಪಾ ಸತೀಶ್ ಮನವಿ ಮಾಡಿದ್ದಾರೆ.
ಸ್ಪರ್ಧೆ ಮೂರು ವಿಭಾಗದಲ್ಲಿ ನಡೆಯಲಿದ್ದು, ಮೊದಲ ವಿಭಾಗದಲ್ಲಿ ಎಲ್‌ಕೆಜಿ ಯಿಂದ ಒಂದನೇ ತರಗತಿ ವಿದ್ಯಾರ್ಥಿಗಳಿಗೆ ವಿಷಯ “ಪ್ರಕೃತಿ”, ಎರಡನೇ ವಿಭಾಗದಲ್ಲಿ 2ನೇ ತರಗತಿಯಿಂದ 6ನೇ ತರಗತಿಯವರೆಗೆ ವಿಷಯ “ಚಂದ್ರಯಾನ” ಮತ್ತು 3ನೇ ವಿಭಾಗದಲ್ಲಿ 7ನೇ ತರಗತಿಯಿಂದ 10ನೇ ತರಗತಿಯವರೆಗೆ ವಿಷಯ “ಜಾಗತಿಕ ತಾಪಮಾನ” ವಾಗಿರುತ್ತದೆ. ಚಿತ್ರ ಬಿಡಿಸಲು ಬಣ್ಣವನ್ನು ಮಾತ್ರ ವಿದ್ಯಾರ್ಥಿಗಳು ತರಬೇಕು, ಕಾಗದವನ್ನು ಆಯೋಜಕರು ನೀಡಲಿದ್ದಾರೆ.
ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನವನ್ನು ನೀಡಲಾಗುತ್ತಿದ್ದು, ನಗದು, ಪದಕ ಮತ್ತು ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ನೀಡಲಾಗುವುದು. ಬಹುಮಾನ ವಿತರಣಾ ಸಮಾರಂಭ ಬೆಳಗ್ಗೆ 11.30 ಗಂಟೆಗೆ ನಡೆಯಲಿದ್ದು, ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ಉಪಸ್ಥಿತಿಯಲ್ಲಿ ಬಹುಮಾನ ವಿತರಿಸಲಾಗುವುದು ಎಂದು ಡಾ.ಶಿಲ್ಪಾ ಸತೀಶ್ ತಿಳಿಸಿದ್ದಾರೆ. ಹೆಸರು ನೋಂದಾಯಿಸಲು 8431285500 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.












