ಮಡಿಕೇರಿ ನ.11 : ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ 70 ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ನ.14 ರಿಂದ 20 ರವರೆಗೆ ಜಿಲ್ಲೆಯ ವಿವಿಧ ಸಹಕಾರ ಸಂಘಗಳ ಸಹಯೋಗದೊಂದಿಗೆ ನಡೆಯಲಿದೆ.
ಸಹಕಾರಿ ಕ್ಷೇತ್ರದಲ್ಲಿ ಉನ್ನತ ಸಾಧನೆ ಮಾಡಿರುವ ಮಡಿಕೇರಿ ತಾಲ್ಲೂಕಿನ ಕೊಳಕೇರಿ ಗ್ರಾಮದ ಬಿದ್ದಾಟಂಡ ಎ.ರಮೇಶ್‍ರಿಗೆ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ, ಮಡಿಕೇರಿ ತಾಲ್ಲೂಕಿನ ಕೊಂಗಂಡ ಎ. ತಿಮ್ಮಯ್ಯ, ವಿರಾಜಪೇಟೆ ತಾಲ್ಲೂಕಿನ ಚಿರಿಯಪಂಡ ಕೆ.ಉತ್ತಪ್ಪ ಹಾಗೂ ಸೋಮವಾರಪೇಟೆ ತಾಲ್ಲೂಕಿನ ಎಚ್.ಎಸ್.ಸುಬ್ಬಪ್ಪರಿಗೆ ‘ಶ್ರೇಷ್ಠ ಸಹಕಾರಿ ಪ್ರಶಸ್ತಿ’ ಮತ್ತು ಮಡಿಕೇರಿಯ ಮಣವಟ್ಟೀರ ಕಾವೇರಿಯಮ್ಮ ಪೂವಣ್ಣ ಅವರಿಗೆ ‘ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಬಿದ್ದಾಟಂಡ ಎ. ರಮೇಶ್ ಚಂಗಪ್ಪ – ಕೊಡಗು ಸಹಕಾರ ರತ್ನ
ಜಿಲ್ಲೆಗೊಬ್ಬರಂತೆ ‘ಕೊಡಗು ಸಹಕಾರ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುವುದು. 2023 ರ ಕೊಡಗು ಸಹಕಾರ ರತ್ನಕ್ಕೆ ಭಾಜನರಾದವರು ಶ್ರೀ ಬಿದ್ದಾಟಂಡ ಎ. ರಮೇಶ್ ಚಂಗಪ್ಪ ಮಡಿಕೇರಿ ತಾಲೂಕು ಕೊಳಕೇರಿ ಗ್ರಾಮದ ಬಿದ್ದಾಟಂಡ ಎ. ರಮೇಶ್ ಚಂಗಪ್ಪರವರು ಕೊಡಗು ಜಿಲ್ಲಾ ಹಾಪ್‍ಕಾಮ್ಸ್‍ನಲ್ಲಿ ಅಧ್ಯಕ್ಷರಾಗಿ ಮುಂದುವರೆಯುತ್ತಿದ್ದಾರೆ. ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ನಿ., ಮಡಿಕೇರಿಯಲ್ಲಿ 2005-2010 ರವರೆಗೆ ನಿರ್ದೇಶಕರಾಗಿ ಅದೇ ಅವಧಿಯಲ್ಲಿ ಕೊಡಗು ಜಿಲ್ಲಾ ಏಲಕ್ಕಿ ಮಾರಾಟ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿದ್ದು, 2010 ರಿಂದ ಪ್ರಸ್ತುತವರೆಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2002 ರಿಂದ ಪ್ರಸ್ತುತವರೆಗೂ ಕರ್ನಾಟಕ ರಾಜ್ಯ ಸಹಕಾರ ತೋಟಗಾರಿಕಾ ಮಹಾಮಂಡಳದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಲಾಗುತ್ತಿದೆ. ಈ ಅವಧಿಯಲ್ಲಿ ಮಂಡ್ಯ ಹಾಪ್‍ಕಾಮ್ಸ್‍ಗೆ ನಾಮನಿರ್ದೇಶನಗೊಂಡಿರುತ್ತಾರೆ. ನಾಪೋಕ್ಲು ಸೌಹಾರ್ಧ ಸಹಕಾರಿಯು ಇವರ ಮುಂದಾಳತ್ವದಲ್ಲಿ ಸ್ಥಾಪನೆಗೊಂಡಿದ್ದು ಪ್ರಸ್ತುತ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕೊಂಗಂಡ ಎ. ತಿಮ್ಮಯ್ಯ – ಮಡಿಕೇರಿ ತಾಲೂಕಿನಿಂದ ಶ್ರೇಷ್ಠ ಸಹಕಾರಿ ಪ್ರಶಸ್ತಿ
ಮಡಿಕೇರಿಯ ಕೊಂಗಂಡ ಎ. ತಿಮ್ಮಯ್ಯನವರು 1983 ರಿಂದ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 15 ವರ್ಷಗಳ ಕಾಲ ನಿರ್ದೇಶಕರಾಗಿ 1 ಅವಧಿಗೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುತ್ತಾರೆ. ಕೊಡಗು ಜಿಲ್ಲಾ ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 1985 ರಿಂದ ಸೇವೆ ಸಲ್ಲಿಸುತ್ತಿರುವ ಇವರು ಒಂದು ಅವಧಿಗೆ ಅಧ್ಯಕ್ಷರಾಗಿ 35 ವರ್ಷಗಳಿಂದ ನಿರ್ದೇಶಕರಾಗಿ ಮುಂದುವರೆಯುತ್ತಿದ್ದಾರೆ. ಕೊಡಗು ಸೌಹಾರ್ಧ ಸಹಕಾರಿ ನಿ., ಮಡಿಕೇರಿಯಲ್ಲಿ ನಿರ್ದೇಶಕರಾಗಿರುವ ಇವರು ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳ ನಿ., ಬೆಂಗಳೂರು ಇಲ್ಲಿ 2004 ರಿಂದ ಸುಮಾರು 10 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.
ಚಿರಿಯಪಂಡ ಕೆ. ಉತ್ತಪ್ಪ – ವಿರಾಜಪೇಟೆ ತಾಲೂಕಿನಿಂದ ಶ್ರೇಷ್ಠ ಸಹಕಾರಿ ಪ್ರಶಸ್ತಿ
ಪೊನ್ನಂಪೇಟೆಯ ಚಿರಿಯಪಂಡ ಕೆ. ಉತ್ತಪ್ಪನವರು ಪೊನ್ನಂಪೇಟೆ ಪಟ್ಟಣ ಸಹಕಾರ ಬ್ಯಾಂಕಿನಲ್ಲಿ 1971 ರಿಂದ ನಿರಂತರವಾಗಿ ಅಂದರೆ ಕಳೆದ 51 ವರ್ಷಗಳಿಂದ ನಿರ್ದೇಶಕರಾಗಿ, ಸುಮಾರು 36 ವರ್ಷಗಳ ಕಾಲ ಅಧ್ಯಕ್ಷರಾಗಿ ತಮ್ಮ ಗಣನೀಯ ಸೇವೆ ಸಲ್ಲಿಸುತ್ತಿದ್ದಾರೆ. ಮಡಿಕೇರಿಯ ಜನತಾ ಬಜಾರ್‍ನಲ್ಲಿ ಒಂದು ಅವಧಿಗೆ ನಿರ್ದೇಶಕರಾಗಿ, ವಿರಾಜಪೇಟೆಯ ಮಾರಾಟ ಮಹಾಮಂಡಳದಲ್ಲಿ ಸತತ 3 ಅವಧಿಗೆ ನಿರ್ದೇಶಕರಾಗಿ ಸಂಘದ ಅಭಿವೃದ್ಧಿಗೆ ಶ್ರಮಿಸಿರುತ್ತಾರೆ.
ಎಚ್.ಎಸ್. ಸುಬ್ಬಪ್ಪ – ಸೋಮವಾರಪೇಟೆ ತಾಲೂಕಿನಿಂದ ಶ್ರೇಷ್ಠ ಸಹಕಾರಿ ಪ್ರಶಸ್ತಿ
ನಿಡ್ತದ ಹಿತ್ತಲಗೇರಿ ಗ್ರಾಮದ ಸುಬ್ಬಪ್ಪನವರು 1979 ರಲ್ಲಿ ನಿಡ್ತ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 5 ಬಾರಿ ಸತತವಾಗಿ ಆಯ್ಕೆಯಾಗಿರುತ್ತಾರೆ. 1989 ರಲ್ಲಿ ಶನಿವಾರಸಂತೆ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದಲ್ಲಿ ಆಯ್ಕೆಯಾಗಿ ನಂತರದಲ್ಲಿ 14 ವರ್ಷಗಳ ಕಾಲ ಅಧ್ಯಕ್ಷರಾಗಿ 2018ರವರೆಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುತ್ತಾರೆ. ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿರುತ್ತಾರೆ.
ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ – ಶ್ರೇಷ್ಠ ಮಹಿಳಾ ಸಹಕಾರಿ ಪ್ರಶಸ್ತಿ
ಮಡಿಕೇರಿಯ ನಿವಾಸಿ ಶ್ರೀಮತಿ ಮಣವಟ್ಟಿರ ಕಾವೇರಿಯಮ್ಮ ಪೂವಣ್ಣ ಇವರು ಮಡಿಕೇರಿ ಕೋಟೆ ಮಹಿಳಾ ಸಹಕಾರ ಸಂಘ, ಮಹದೇವಪೇಟೆ ಮಹಿಳಾ ಸಹಕಾರ ಸಂಘಗಳಲ್ಲಿ ನಿರ್ದೇಶಕಿಯಾಗಿ, ಕೊಡಗು ಮಹಿಳಾ ವಿವಿದೊದ್ಧೇಶ ಸಹಕಾರ ಸಂಘದಲ್ಲಿ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. 1984 ರಲ್ಲಿ ಒಂದು ಅವಧಿಗೆ ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕಿಗೆ ನಿರ್ದೇಶಕಿಯಾಗಿದ್ದ ಇವರು ಅದೇ ಅವಧಿಯಲ್ಲಿ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನಲ್ಲಿಯೂ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ನಿ., ಬೆಂಗಳೂರಿನಲ್ಲಿ ಉಪಾಧ್ಯಕ್ಷೆಯಾಗಿ, ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.








