ಸೋಮವಾರಪೇಟೆ ನ.27 : ಸಮಾಜ ಸುಧಾರಕ ಶ್ರೀ ನಾರಾಯಣ ಗುರುಗಳ ಚಿಂತನೆ, ಆದರ್ಶಗಳನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಮಾಜಿ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಶ್ರೀ ನಾರಾಯಣ ಗುರು ಸೇವಾ ಸಮಿತಿ, ತುಳುನಾಡು ಬಿಲ್ಲವ ಮಹಿಳಾ ಸಂಘ ವತಿಯಿಂದ ಪಟ್ಟಣದ ಶಂಕಪ್ಪ ಹಾಲ್ ಸಭಾಂಗಣದಲ್ಲಿ ನಡೆದ ಶ್ರೀ ನಾರಾಯಣ ಗುರುಗಳ ಸ್ಮರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಣದಿಂದ ಮಾತ್ರ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯ. ಉನ್ನತ ಶಿಕ್ಷಣವೆಂಬ ಸಂಪತ್ತನ್ನು ಮಕ್ಕಳಿಗೆ ಕಲ್ಪಿಸುವ ಮೂಲಕ ಗುರುಗಳ ಚಿಂತನೆಯನ್ನು ಮುಂದಿನ ಪಿಳಿಗೆಗೂ ತಲುಪಿಸುವ ಕಾರ್ಯವಾಗಬೇಕು ಎಂದರು.
ಸೋಮವಾರಪೇಟೆಯಲ್ಲಿ ಶ್ರೀನಾರಾಯಣ ಗುರುಗಳ ಭವನ ನಿರ್ಮಿಸಲು ಹಿಂದಿನ ನಮ್ಮ ಬಿಜೆಪಿ ಸರ್ಕಾರ 25 ಲಕ್ಷ ರೂ.ಗಳ ಅನುದಾನ ಕಲ್ಪಿಸಲಾಗಿತ್ತು. ಆದರೆ ಇಂದಿನ ಸರ್ಕಾರ ಬಿಡುಗಡೆಗೊಳಿಸಿಲ್ಲ. ಕಾಂಗ್ರೆಸ್ ಸರ್ಕಾರದ ಬಿಟ್ಟಿ ಭಾಗ್ಯಗಳಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡುತ್ತಿಲ್ಲ. ಕೂಡಲೆ ಹಣ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿದರು.
ಮೈಸೂರು ಎನ್‍ಐಇ ಸಹಾಯಕ ಪ್ರಾಧ್ಯಾಪಕ ಡಾ.ಸಂಜಿತ್ ಎಸ್. ಅಂಜನ್ ಮಾತನಾಡಿ, ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ದೇವರು, ಒಂದೇ ಧರ್ಮ ಇವುಗಳ ಮೂಲಕ ಮಾನವ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯದರು ಎಂದರು.
ಶ್ರೀನಾರಾಯಣಗುರು ಸೇವಾ ಸಮಿತಿಯ ಅಧ್ಯಕ್ಷ ಬಿ.ಎ.ಭಾಸ್ಕರ್ ಮಾತನಾಡಿ, ಕಳೆದ 24 ವರ್ಷಗಳ ಹಿಂದೆ ಜನ್ಮತಾಳಿದ ಸೇವಾ ಸಮಿತಿ ಇಂದು ಅರ್ಧ ಎಕರೆ ನಿವೇಶನವನ್ನು ಹೊಂದಿದೆ. 2.60ಕೋಟಿ ವೆಚ್ಚದಲ್ಲಿ ಭವನ ನಿರ್ಮಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಸರ್ಕಾರದಿಂದ ಈಗಾಗಲೇ 25 ಲಕ್ಷ ರೂ.ಗಳು ಬಿಡುಗಡೆಯಾಗಿದ್ದು ಹಣಕಾಸು ಇಲಾಖೆಯ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು. ಗೌರವಾಧ್ಯಕ್ಷ ಲಕ್ಷ್ಮಣ ಪೂಜಾರಿ ಅವರು ನಿವೇಶನ ಖರೀದಿಗೆ 5ಲಕ್ಷ ರೂ.ಗಳನ್ನು ದಾನವಾಗಿ ನೀಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ85ಕ್ಕಿಂದ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಾಲನಟ ಅರುಶ್ ಉಮೇಶ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಶ್ರೀನಾರಾಯಣಗುರು ಸೇವಾ ಸಮಿತಿಯ ಗೌರವಾಧ್ಯಕ್ಷ ಲಕ್ಷ್ಮಣ ಪೂಜಾರಿ, ಹಿಂದೂ ಮಲೆಯಾಳ ಸಮಾಜದ ಜಿಲ್ಲಾಧ್ಯಕ್ಷ ವಿ.ಎಂ.ವಿಜಯ, ಮಡಿಕೇರಿ ಬಿಲ್ಲವ ಸೇವಾಸಮಾಜದ ತಾಲ್ಲೂಕು ಅಧ್ಯಕ್ಷೆ ಬಿ.ಎಸ್.ಲೀಲಾವತಿ, ವಿರಾಜಪೇಟೆ ಅಧ್ಯಕ್ಷ ಬಿ.ಎಂ.ಗಣೇಶ್, ಕುಶಾಲನಗರ ಅಧ್ಯಕ್ಷ ಸುದೀರ್, ಸೋಮವಾರಪೇಟೆ ತುಳುನಾಡು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಬೇಬಿ ಚಂದ್ರಹಾಸ್, ಸಮಿತಿ ಮಾಜಿ ಅಧ್ಯಕ್ಷ ಬಿ.ಆರ್.ಚಂದ್ರಹಾಸ್ ಉಪನ್ಯಾಸಕರಾದ ತೇಜಸ್, ಮೋಹನ್ ಇದ್ದರು.