ಮಡಿಕೇರಿ ನ.28 : ದೇಶರಕ್ಷಣೆಯಲ್ಲಿ ಸೈನಿಕರ ಪಾತ್ರ ಎಷ್ಟು ಮುಖ್ಯವೋ, ರೋಗಿಗಳ ರಕ್ಷಣೆಯಲ್ಲಿ ಶುಶ್ರೂಷಕರ ಪಾತ್ರ ಹೆಚ್ಚಿದೆ. ಮಾನಸಿಕ ಶಕ್ತಿ, ಯೋಗ, ಧ್ಯಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಸಲಹೆ ನೀಡಿದರು.
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ “ಐಕ್ಯಂ” 2023-24 ಎಂಬ ಶಿರ್ಷಿಕೆಯಲ್ಲಿ ಕಾಲೇಜಿನ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಬಿಎಸ್ಸಿ ನರ್ಸಿಂಗ್ ಕಾಲೇಜು ಇರುವುದು ಹೆಮ್ಮೆಯ ವಿಷಯ. ವೈದ್ಯಕೀಯ ಕಾಲೇಜಿನಲ್ಲಿ ಪ್ರಾರಂಭಿಸಿ ಪ್ರಸ್ತುತ 400 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಮಡಿಕೇರಿಯಲ್ಲಿ ಸರ್ಕಾರಿ ಜಾಗದ ಸಮಸ್ಯೆ ಇದ್ದು, ಆದಾಗ್ಯೂ ಜನಪ್ರತಿನಿಧಿಗಳ ಮೂಲಕ ನರ್ಸಿಂಗ್ ಕಾಲೇಜಿಗೆ ಅವಶ್ಯವಿರುವ ಜಾಗವನ್ನು ಮಂಜೂರು ಮಾಡಲು ಪ್ರಯ್ನತಿಸುವುದಾಗಿ ಭರವಸೆ ನೀಡಿದರು.
ಖಾಸಗಿ ಕಾಲೇಜಿನಲ್ಲಿ ಬಿಎಸ್ಸಿ ನರ್ಸಿಂಗ್ ವಿದ್ಯಾಭ್ಯಾಸ ಮಾಡಲು ಲಕ್ಷಾಂತರ ರೂಪಾಯಿ ಇದ್ದು, ಸರ್ಕಾರಿ ಕಾಲೇಜಿನಲ್ಲಿ ಅತೀ ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಿರಿ, ಕೊರೋನ ಸಮಯದಲ್ಲಿ ಶುಶ್ರೂಷಕರು ಮನೆ, ಮಕ್ಕಳನ್ನು ಬಿಟ್ಟು ಕರ್ತವ್ಯ ನಿರ್ವಹಿಸಿರುವುದನ್ನು ಸ್ಮರಿಸಿದರು.
ಸ್ಥಾನೀಯ ವೈದ್ಯಾಧಿಕಾರಿ ಡಾ. ವಿ.ಎಸ್.ಸತೀಶ್ ಮಾತನಾಡಿ, ವಿದ್ಯಾರ್ಥಿಗಳು ನರ್ಸಿಂಗ್ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು, ಸೇವಾ ಮನೋಭಾವ, ನಿಸ್ವಾರ್ಥ ಸೇವೆ ರೂಡಿಸಿಕೊಳ್ಳಬೇಕು, ವೃತ್ತಿಯಲ್ಲಿ ಮುಂದೆ ಬರಬೇಕು. ಭಾವನಾತ್ಮಕವಾಗಿ ಸ್ಪಂದಿಸಬೇಕು, ಸಂಸ್ಥೆಯ ಘನತೆಯನ್ನು ಹೆಚ್ಚಿಸಲು ಶಿಸ್ತು ಪಾಲಿಸಬೇಕು ಎಂದು ಕಿವಿ ಮಾತು ಹೇಳಿದರು.
ವೈದ್ಯಕೀಯ ಅಧೀಕ್ಷಕರಾದ ಡಾ. ರೂಪೇಶ್ ಗೋಪಾಲ್ ಮಾತನಾಡಿ ಆರೋಗ್ಯ ಕ್ಷೇತ್ರದಲ್ಲಿ ಶುಶ್ರೂಷಕರ ಆರೈಕೆ ಅತೀ ಮುಖ್ಯ ರೋಗಿಗಳೊಂದಿಗೆ ತುಂಬ ಸಮಯ ಕಳೆಯುವುದು ಶುಶ್ರೂಷಕರು ಮಾತ್ರ ಅವರ ಕೊಡುಗೆ ಆಸ್ಪತ್ರೆಗೆ ಹೆಚ್ಚಿರುತ್ತದೆ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಂಜುಂಡಯ್ಯ ಮಾತನಾಡಿ, ಶುಶ್ರೂಷಕರು ಆಸ್ಪತ್ರೆಯ ಹೃದಯ ಇದ್ದಂತೆ ಅವರ ಸೇವೆಗಳನ್ನು ಸ್ಮರಿಸಿದರು.
ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಎ.ಕೆ.ಮಂಜುಳ ನರ್ಸಿಂಗ್ ಕಾಲೇಜಿನ ವರದಿಯನ್ನು ಓದಿ ಸಂಸ್ಥೆಯು 2020 ರಲ್ಲಿ ಕರ್ನಾಟಕ ಸರ್ಕಾರದಿಂದ 100 ಸೀಟುಗಳಿಗೆ ಅನುಮತಿ ನೀಡಿ ಮಂಜೂರು ಮಾಡಿದ್ದು, ಭಾರತೀಯ ನರ್ಸಿಂಗ್ ಕೌನ್ಸಿಲ್, ಕರ್ನಾಟಕ ರಾಜ್ಯ ಶುಶ್ರೂಷ ಪರಿಷತ್ , ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದಿಂದ ಅಂಗಿಕಾರಗೊಂಡಿದ್ದು, ಈ ಕಾಲೇಜನ್ನು ಮಂಜೂರು ಮಾಡಿಸಲು ಶ್ರಮಿಸಿದ ಡೀನ್ ಹಾಗೂ ನಿರ್ದೇಶಕರು, ಜನ ಪ್ರತಿನಿಧಿಗಳು, ಕರ್ನಾಟಕ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿಗಳಾದ ಎ.ಎಲ್.ಸ್ವಾಮಿ, ಡಾ.ನರಸಿಂಹ ರೈ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ನರ್ಸಿಂಗ್ ವಿದ್ಯಾರ್ಥಿಗಳಾದ ಹರ್ಷಿಕ, ರಾಧಿಕ ನೇರವೇರಿಸಿದರು. ಪೂಜ ಸ್ವಾಗತಿಸಿದರು. ಹರ್ಷಿತಾ
ವಂದಿಸಿದರು. ಅತಿಥಿ ಪರಿಚಯವನ್ನು ಸಹಾಯಕ ಪ್ರಾಧ್ಯಾಪಕ ಗುರುಪಾದ ನೇರವೇರಿಸಿದರು.
ಕ್ರೀಡಾಕೂಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ನರ್ಸಿಂಗ್ ವಿದ್ಯಾರ್ಥಿಗಳಿಂದ ಅತ್ಯಾಕರ್ಷಕ ನೃತ್ಯ, ನಾಟಕ ಸೇರಿದಂತೆ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು.