ನಾಪೋಕ್ಲು ನ.29 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗತಪ್ಪ ದೇವಾಲಯದಲ್ಲಿ ಕೊಡಗಿನ ಸುಗ್ಗಿ ಹಬ್ಬವಾದ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸುವ ಪುತ್ತರಿ (ಹುತ್ತರಿ) ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಜಿಲ್ಲೆಯಲ್ಲಿ ಮೊಟ್ಟ ಮೊದಲು ಪಾಡಿ ಸನ್ನಿಧಿಯಲ್ಲಿ ಹಬ್ಬಆಚರಿಸುವ ಸಂಪ್ರದಾಯ ಹಿಂದಿನಿoದಲೇ ನಡೆದು ಬಂದಿದೆ.
ಸoಪ್ರದಾಯದoತೆ ಸನ್ನಿಧಿಯ ಸುತ್ತಮುತ್ತಲಿನ ಪೊಂಗೆರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರ ಮನೆಯವರು ಹುತ್ತರಿ ಆಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಊರಿನವರು, ಪರವೂರಿನ ಭಕ್ತರು ಪಾಲ್ಗೊಂಡಿದ್ದರು.
ಪ್ರಮುಖ ಐದು ಮನೆತನದ ಕುಟುಂಬದ ಹೆಣ್ಣು ಮಕ್ಕಳು ತಳಿಯತಕ್ಕಿ ಬೊಳಕ್ನೊಂದಿಗೆ ಬಂದು ದೇವಾಲಯಕ್ಕೆ ಪ್ರದಕ್ಷಿಣೆಗೈದರು. ಈ ವೇಳೆ ಕಣಿಯರ ನಾಣಯ್ಯ, ಕುಡಿಯರ ಮುತ್ತಪ್ಪ, ಪೆಮ್ಮಯ್ಯ, ಪೊಂಗೇರ ಪೂಣಚ್ಚ ಇನ್ನಿತರರು ಪುತ್ತರಿ ಪದ್ಧತಿ ಪರಂಪರೆಯನ್ನು ಪರಿಚಯಿಸುವುದರ ಮೂಲಕ ದುಡಿ ಕೊಟ್ಟ ಪಾಟ್ ನೆರವೇರಿಸಿ ಕೊಟ್ಟರು.
ಈ ಸಂದರ್ಭ ಪುತ್ತರಿ ಹಬ್ಬದ ಅಂಗವಾಗಿ, ಪೊಂಗೇರ ಉಲ್ಲಾಸ್ ಅವರು ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ನಾಡಿನ ಸುಭಿಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ತಳಿಯತಕ್ಕಿ ಬೊಳಕ್, ಡೋಲು, ಜಾಗಟೆಗಳ ನಿನಾದದೊಂದಿಗೆ ದೇವಾಲಯದ ಮುಕ್ಕಾಟಿ ಸುಬ್ರಮಣಿ ಬೆಳ್ಳಿಯ ಬಿಂದಿಗೆ ಹೊತ್ತು, `ಪೊಲಿ ಪೊಲಿಯೇ ಬಾ’ ಎಂಬ ಉದ್ಗೋಷ ಮತ್ತು ಪಟಾಕಿಗಳ ಮೊರೆತದೊಂದಿಗೆ ಪೊಂಗೇರ ಅಪ್ಪಣ್ಣ ಅವರ `ಮಾವುಬಲ್ಯ’ಗದ್ದೆಗೆ ತೆರಳಿ ಕದಿರುಕೊಯ್ಯುವುದಕ್ಕೂ ಮುನ್ನ ಸುಬ್ರಮಣಿ ಅವರು ವಿಧಿವಿಧಾನಗಳನ್ನು ನೆರವೇರಿಸಿದರು.
ಕದಿರುಕಟ್ಟಿ, ಹಾಲು ತುಪ್ಪ ಬಿಟ್ಟು ಪ್ರಾರ್ಥನೆ ಸಲ್ಲಿಸಿ ನಿಗದಿತ ಸಮಯವಾಗುತ್ತಿದ್ದಂತೆಯೇ ಶುಭ ಮುಹೂರ್ತದಲ್ಲಿ ಸುಬ್ರಮಣಿ ಅವರು ಕದಿರುಕೊಯ್ದು, ನೆರೆದವರ ಕೈಗೆ ನೀಡಿದರು.ಈ ವೇಳೆ ಶುಭ ಸೂಚಕವಾಗಿ ಗುಂಡು ಹಾರಿಸಲಾಯ್ತು.ಪಟಾಕಿಗಳ ಶಬ್ದ ಮುಗಿಲು ಮುಟ್ಟಿತು. ಪೊಲಿಪೊಲಿಯೇದೇವಾ ಎಂಬ ಉದ್ಘೋಷಗಳು ಮೊಳಗಿದವು.
ಅನಂತರ ಡೋಲು,ಜಾಗಟೆ, ಪೊಲಿಪೊಲಿಯೇದೇವಾ ಎಂಬ ಘೋಷದೊಂದಿಗೆ ಹಿಂತಿರುಗಿ ಅಶ್ವತ್ಥಕಟ್ಟೆಗೆ ಪ್ರದಕ್ಷಿಣೆ ಹಾಕಿ, ದೇವಾಲಯಕ್ಕೆ ಮರಳಲಾಯ್ತು. ಸನ್ನಿಧಿಗೆ ಪ್ರದಕ್ಷಿಣೆ ಬಂದು, ಕದಿರನ್ನು ಅರ್ಚಕ ನೀಡಿದ ಬಳಿಕ ನಮಸ್ಕಾರ ಮಂಟಪದಲ್ಲಿಟ್ಟು ವಿಶೇಷ ಧಾನ್ಯಲಕ್ಷ್ಮಿ ಪೂಜೆವನ್ನು ಮುಖ್ಯ ಅರ್ಚಕ ಕುಶ ಭಟ್, ಜಗದೀಶ್, ಶ್ರೀಕಾಂತ್ ಮತ್ತು ತಂಡ, ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು.
ಮೊದಲ ಕದಿರನ್ನು ಗರ್ಭಗುಡಿಯಲ್ಲಿ ಕಟ್ಟಿ, ಅನಂತರ ಇತರೆ ಗುಡಿಗಳಿಗೆ ಕಟ್ಟಲಾಯ್ತು. ಅಲ್ಲದೆ, ನೆರೆದ ಭಕ್ತಾದಿಗಳಿಗೆ ಕದಿರು ವಿತರಿಸಲಾಯ್ತು.
ಆದರೆ ಸಂಪ್ರದಾಯದoತೆ ಪೊಂಗೆರ, ಕನಿಯಂಡ, ಕೋಲೆಯಂಡ, ಬೊಳ್ಳನಮಂಡ ಮತ್ತು ಐರಿರಕುಟುಂಬಗಳು ಮನೆಗೆ ಹಿಂತಿರುಗಿ, ತಮ್ಮದೇ ಗದ್ದೆಯಿಂದ ಕದಿರುಕೊಯ್ದು ಸಂಪ್ರದಾಯ ಪಾಲಿಸಿದರು.
ಸನ್ನಿಧಿಯಲ್ಲಿ ವಿಶೇಷ ಪೂಜೆಯ ಬಳಿಕ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವಾಯ್ತು. ಈ ವೇಳೆ ಕಂದಾಯ ಪರಿವೀಕ್ಷಕ ರವಿಕುಮಾರ್ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಬಾಚಮಂಡ ಲವ ಚಿಣ್ಣಪ್ಪ, ಊರಿನ, ಪರವೂರಿನ ಭಕ್ತರು ಹಾಜರಿದ್ದರು.
ವರದಿ : ದುಗ್ಗಳ ಸದಾನಂದ