ಸೋಮವಾರಪೇಟೆ ಡಿ.6 : ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ಕೊರತೆಯಿಂದ ಬಡರೋಗಿಗಳು ಪರದಾಡುವಂತಾಗಿದ್ದು, ತಕ್ಷಣ ಶಾಸಕರು ವೈದ್ಯರ ನೇಮಕಕ್ಕೆ ಕ್ರಮಕೈಗೊಳ್ಳಬೇಕೆಂದು ಸೋಮವಾರಪೇಟೆ ನಗರ ಬಿಜೆಪಿ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ನಗರಾಧ್ಯಕ್ಷ ಎಸ್.ಆರ್.ಸೋಮೇಶ್, ಹಿಂದಿನ ಅವಧಿಯಲ್ಲಿ ಅಪ್ಪಚ್ಚು ರಂಜನ್ ಶಾಸಕರಾಗಿರುವ ಸಮಯದಲ್ಲಿ 10 ರಿಂದ 12 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಉಳಿದವರು ವರ್ಗಾವಣೆಯಾಗಿ ಹೋಗಿದ್ದಾರೆ. ರೋಗಿಗಳು ಆಸ್ಪತ್ರೆಯಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ ಎಂದು ದೂರಿದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾರ್ವಜನಿಕರಿಗೆ ಸಂಕಷ್ಟಗಳು ಹೆಚ್ಚಾಗಿವೆ. ಸೋಮವಾರಪೇಟೆ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣಕ್ಕೆ ವಿವಿಧ ಮಾರ್ಗದ 17 ಬಸ್‍ಗಳು ಬರುತ್ತಿಲ್ಲ. ಇದರಿಂದ ಮೈಸೂರು ಮಾರ್ಗದಲ್ಲಿ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ನೌಕರರಿಗೆ ಸಮಸೈಯಾಗಿದೆ. ಎಲ್ಲವೂ ಉಚಿತವಾದ ಮೇಲೆ ಖಚಿತವಾಗಿ ಬಸ್ ಬರುತ್ತಿಲ್ಲ. ತಕ್ಷಣವೆ ಎಂದಿನಂತೆ ಬಸ್‍ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಕಾನೂನು ಪ್ರಕೋಷ್ಟದ ಸಂಚಾಲಕ ಎಂ.ಬಿ.ಅಭಿಮನ್ಯು ಕುಮಾರ್ ಮಾತನಾಡಿ, ಕಳೆದ 6 ತಿಂಗಳಿಂದ ಯಾವುದೇ ನೂತನ ಕಾಮಗಾರಿಗಳು ನಡೆಯುತ್ತಿಲ್ಲ. ಹಿಂದಿನ ಬಿಜೆಪಿ ಶಾಸಕರು ತಂದಿದ್ದ ಅನುದಾನದಲ್ಲಿ ಪೂರ್ಣಗೊಂಡ ಕಾಮಗಾರಿಗಳನ್ನು ಈಗಿನ ಶಾಸಕರು ಉದ್ಘಾಟನೆ ಮಾಡಿ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
2018ರಲ್ಲಿ ಸಂಭವಿಸಿದ ಪ್ರಾಕೃತಿ ವಿಕೋಪ ಹಾಗೂ ನಂತರದ ಅತಿವೃಷ್ಟಿಯಿಂದ ಹಾನಿಯಾದ ಸ್ಥಳಗಳ ಅಭಿವೃದ್ಧಿಗೆ ನೀಡಿದ ಹಣ ತಡವಾಗಿ ಬಿಡುಗಡೆಯಾಗಿದ್ದು, ಆ ಹಣವನ್ನು ಹಾನಿಯಾದ ಪ್ರದೇಶಗಳಿಗೆ ವಿನಿಯೋಗಿಸಬೇಕು. ಈಗ ಯಾರದೋ ಮಾತು ಕೇಳಿ, ಬೇರೆ ಪ್ರದೇಶಗಳ ಅಭಿವೃದ್ಧಿಗೆ ಹಣವನ್ನು ಬಳಕೆ ಮಾಡಲು ತಂತ್ರ ರೂಪಿಸಲಾಗಿದೆ. ಹಾಗೇನಾದರೂ ಹಣ ಬಳಕೆಯಾದರೆ ನಿಜವಾದ ಸಂತ್ರಸ್ಥರಿಗೆ ಮಾಡಿದ ದ್ರೋಹವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರ ಆಡಳಿತಾವಧಿ ಮುಗಿದು 7 ತಿಂಗಳು ಕಳೆದಿದೆ. ಹಿಂದಿನ ಶಾಸಕರು ತಂದಿದ್ದ ನಗರೋತ್ಥಾನದ 5 ಕೋಟಿ ರೂ.ಹಣ ಸರಿಯಾಗಿ ವಿನಿಯೋಗ ಆಗಿಲ್ಲ. ಯಾವುದೇ ಕಾಮಗಾರಿ ಪೂರ್ಣಗೊಂಡಿಲ್ಲ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪಿ.ಕೆ.ಚಂದ್ರು, ಮೃತ್ಯುಂಜಯ, ಶರತ್‍ಚಂದ್ರ ಇದ್ದರು.