ಮಡಿಕೇರಿ ಡಿ.7 : ಪ್ರೊ. ಬಿ.ಕೃಷ್ಣಪ್ಪ ಸ್ಥಾಪಿಸಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕದ ವತಿಯಿಂದ ಎಲ್ಲಾ ತಾಲ್ಲೂಕು ಸಮಿತಿಗಳಲ್ಲಿ ಸಂವಿಧಾನ ಶಿಲ್ಪಿ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 67ನೇ ಮಹಾಪರಿನಿರ್ವಾಣ ದಿನಾಚರಣೆ ಅರ್ಥಪೂರ್ಣವಾಗಿ ನಡೆಯಿತು.
ವಿರಾಜಪೇಟೆಯ ಪುರಸಭೆ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಅವರ ಸಾಧನೆ ಮತ್ತು ಬದುಕಿನ ಹಾದಿಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ದಲಿತ ಮುಖಂಡ ಕೆ.ಪಳನಿ ಪ್ರಕಾಶ್, ಅಂಬೇಡ್ಕರ್ ಅವರ ಹೋರಾಟದ ಫಲವಾಗಿ ನಾವು ಉತ್ತಮ ಜೀವನ ನಡೆಸುತ್ತಿದ್ದೇವೆ. ಅವರ ಚೈತ್ಯನದ ಶಕ್ತಿಯನ್ನು ಇಂದಿನ ಯುವ ಸಮೂಹ ಮೈಗೂಡಿಸಿಕೊಳ್ಳಬೇಕು. ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯ ಚಿಂತನೆಯನ್ನು ವಾಸ್ತವಗೊಳಿಸಬೇಕು ಎಂದು ಕರೆ ನೀಡಿದರು.
ಸಮಿತಿಯ ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಮಾತನಾಡಿ, ಅಂಬೇಡ್ಕರ್ ಅವರ ತತ್ವ ಸಿದ್ಧಾಂತವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮಹಾ ಪರಿನಿರ್ವಾಣವು ಬೌದ್ಧ ಧರ್ಮದ ಪ್ರಮುಖ ಗುರಿಗಳಲ್ಲಿ ಒಂದು. ಬುದ್ಧ ಮತ್ತು ಬೌಧ ಧರ್ಮದ ಕೃತಿಯನ್ನು ಪೂರ್ಣಗೊಳಿಸಿದ ಕೆಲವೇ ದಿನಗಳಲ್ಲಿ ಅಂಬೇಡ್ಕರ್ ಅವರು ನಿಧನರಾದರು. ಅಲ್ಲದೆ ಅವರು ಹಲವಾರು ವರ್ಷಗಳ ನಂತರ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿ ತಮ್ಮ ಬೆಂಬಲಿಗರೊಂದಿಗೆ ಮತಾಂತಗೊಂಡರು ಎಂದು ವಿವರಿಸಿದರು.
ಬೆಂಬಲಿಗರು ಡಾ.ಅಂಬೇಡ್ಕರ್ ಅವರನ್ನು ಬೌದ್ಧ ನಾಯಕನೆಂದು ಪರಿಗಣಿಸಿದರು. ಅಸ್ಪøಶ್ಯತೆ ನಿವಾರಣೆಗೆ ನೀಡಿದ ಕೊಡುಗೆಗಳಿಗಾಗಿ ಅವರನ್ನು ಬೌದ್ಧ ಗುರು ಎಂದು ಕರೆದರು. ಆದ್ದರಿಂದ ಅಂಬೇಡ್ಕರ್ ಅವರ ಪುಣ್ಯತಿಥಿಯನ್ನು ಮಹಾ ಪರಿನಿರ್ವಾಣ ದಿನವೆಂದು ಆಚರಿಸಲಾಗುತ್ತದೆ ಎಂದು ತಿಳಿಸಿದರು.
ವಿರಾಜಪೇಟೆ ತಾಲೂಕು ಸಂಚಾಲಕ ಮನು ಚೆನ್ನಯ್ಯನಕೋಟೆ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಸಂಚಾಲಕಿ ರೇಖಾ ಮಹೇಶ್, ಮಹಿಳಾ ಒಕ್ಕೂಟದ ಸುನಿತಾ ಸುಧಾಕರ್, ಜಿಲ್ಲಾ ಸಂಘಟನಾ ಸಂಚಾಲರಾದ ಭಾವ ಮಾಲ್ದಾರೆ, ಬೋಜ ಬಾರಿಕಾಡು, ಕೆದಮಳ್ಳೂರು ಗ್ರಾಮ ಸಂಚಾಲಕ ರಘು ಉಪಸ್ಥಿತರಿದ್ದರು.
ಸಂವಿಧಾನದ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
ಜಿಲ್ಲಾ ಸಂಘಟನಾ ಸಂಚಾಲಕ ಮನೋಜ್ ಕುಮಾರ್ ಅವರ ನೇತೃತ್ವದಲ್ಲಿ ಸೋಮವಾರಪೇಟೆಯಲ್ಲಿ, ಜಿಲ್ಲಾ ಖಜಾಂಚಿ ರಾಮಚಂದ್ರ ಅವರ ನೇತೃತ್ವದಲ್ಲಿ ಮಡಿಕೇರಿ, ತಾಲ್ಲೂಕು ಸಂಚಾಲಕ ಪ್ರಶಾಂತ್ ಹಾಗೂ ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಪದ್ಮಾವತಿ ಅವರ ನೇತೃತ್ವದಲ್ಲಿ ಕುಶಾಲನಗರದಲ್ಲಿ ಮಹಾ ಪರಿನಿರ್ವಾಣ ಕಾರ್ಯಕ್ರಮ ನಡೆಯಿತು.












