ವಿರಾಜಪೇಟೆ ಡಿ.8 : ಏಡ್ಸ್ ಕುರಿತು ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಅವಶ್ಯಕವಾಗಿವೆ ಎಂದು ವಿರಾಜಪೇಟೆ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಯತಿರಾಜ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ, ವಿರಾಜಪೇಟೆ ತಾಲೋಕು ಆರೋಗ್ಯ ಇಲಾಖೆ, ವಿರಾಜಪೇಟೆಯ ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್. ಎಸ್. ಎಸ್., ಯುವ ರೆಡ್ ಕ್ರಾಸ್, ವೈಯುಕ್ತಿಕ ಕೌನ್ಸೆಲ್ಲಿಂಗ್ ಘಟಕಗಳ ಸಹಯೋಗದಲ್ಲಿ ಸೆಂಟ್ ಆನ್ಸ್ ಪದವಿ ಕಾಲೇಜಿನಲ್ಲಿ ನಡೆದ ವಿಶ್ವ ಏಡ್ಸ್ ದಿನಾಚರಣೆ-2023 ರಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಪ್ರತಿಯೊಬ್ಬರು ಆರೋಗ್ಯ ಜಾಗೃತಿ ಹೊಂದಿರಬೇಕು. ಆರೋಗ್ಯವಂತ ಸಮಾಜದಿಂದ ಮಾತ್ರ ಸ್ವಾಸ್ತ್ಯ ಸಮಾಜದ ರಚನೆ ಸಾಧ್ಯವಾಗುತ್ತದೆ ಎಂದರು.
ಏಡ್ಸ್ ಒಂದು ಮಾರಕ ರೋಗ ಎನ್ನುವುದಕ್ಕಿಂತ ಅದರ ಕುರಿತು ಜಾಗೃತಿ ಅವಶ್ಯಕ ವಾಗಿದೆ. ಜಾಗೃತಿ ಮೂಡಿದಾಗ ಮಾತ್ರ ನಿಯಂತ್ರಣ ಸಾಧ್ಯ. ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಘಟಕ ಹಾಗೂ ಆರೋಗ್ಯ ಉಪಕೇಂದ್ರಗಳಲ್ಲಿ ಎಚ್.ಐ.ವಿ ಪರೀಕ್ಷಾ ಕೇಂದ್ರಗಳಿದ್ದು, ಸಾರ್ವಜನಿಕ ಜಾಗೃತಿ ಮೂಡಿಸುತ್ತಿವೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ಮೇಲ್ವಿಚಾರಕ ಸುನೀತಾ ಮುತ್ತಣ್ಣ ಮಾತನಾಡಿ, ವಿದ್ಯಾರ್ಥಿಗಳು ಏಡ್ಸ್ ಅರಿವು ಮೂಡಿಸುವ ಪ್ರಯತ್ನ ಸಮಾಜದಲ್ಲಿ ಆಗಬೇಕು. ಇಂದಿನ ಆಧುನಿಕ ಜೀವನದಲ್ಲಿ ಜೀವನ ಮೌಲ್ಯಗಳು ಅತೀ ಮುಖ್ಯವಾಗಿದ್ದು, ಪ್ರತಿಯೊಬ್ಬರು ಮೌಲ್ಯಯುತ ಜೀವನ ನಡೆಸಬೇಕೆಂದು ಕಿವಿಮಾತು ಹೇಳಿದರು.
ಏಡ್ಸ್ ನಿಯಂತ್ರಣ ಘಟಕದ ವತಿಯಿಂದ ಜಿಲ್ಲಾ ಹಾಗೂ ತಾಲೂಕು ಗ್ರಾಮ ಮಟ್ಟದಲ್ಲಿಯೂ ಸಮುದಾಯದ ಅರಿವು ಕಾರ್ಯಕ್ರಮವನ್ನು ಸತತವಾಗಿ ಮಾಡಲಾಗುತ್ತಿದೆ ಎಂದ ಅವರು ಜಾಗೃತಿ ಮೂಡಿಸುವಲ್ಲಿ ಯುವಕರ ವಿದ್ಯಾರ್ಥಿಗಳ ಪಾತ್ರ ಅತೀ ಮುಖ್ಯವಾಗಿದೆ ಎಂದರು.
ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೆ. ಫಾ. ಮದಲೈ ಮುತ್ತು ವಿದ್ಯಾರ್ಥಿಗಳಿಗೆ ಆರೋಗ್ಯ ಪ್ರತಿಜ್ಞಾ ವಿಧಿ ಭೋದಿಸಿ ಮಾತನಾಡಿ, ವಿದ್ಯಾರ್ಥಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಜೀವನದಲ್ಲಿ ಸಂಸ್ಕೃತಿಯನ್ನು ರಕ್ಷಿಸುದರ ಜೊತೆಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ಮಾತನಾಡಿ, ಏಡ್ಸ್ ಕುರಿತು ಅರಿವು, ಜಾಗೃತಿ, ಮತ್ತು ನಿಯಂತ್ರಣ ಅತೀ ಮುಖ್ಯವಾಗಿದೆ. ಈ ಮೂರು ಅಂಶಗಳನ್ನು ಪ್ರತಿಯೊಬ್ಬರು ತಮಗೆ ತಾವೇ ಅರಿತರೆ ಏಡ್ಸ್ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಎಚ್.ಐ.ವಿ ಪಾಸಿಟಿವ್ ದರವನ್ನು ಕಡಿಮೆ ಮಾಡಲು ಇನ್ನಷ್ಟು ಕಾರ್ಯಕ್ರಮಗಳು ಸಮುದಾಯದಲ್ಲಿ ನಡೆಯಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ, ಸಮುದಾಯದಲ್ಲಿ ಏಡ್ಸ್ ಕುರಿತು ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆಯ ಜೊತೆಯಲ್ಲಿ ಕಾಲೇಜಿನ ವಿವಿಧ ಘಟಕಗಳು ಕೈ ಜೋಡಿಸಬೇಕಾಗಿದೆ. ಪ್ರತಿಯೊಬ್ಬರಲ್ಲೂ ಆರೋಗ್ಯ ಜಾಗೃತಿ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ಸಮಾಜದಲ್ಲಿ ಸಾರ್ವಜನಿಕರಿಗೆ ಆರೋಗ್ಯ ಜಾಗೃತಿ ಮೂಡಿಸಬೇಕೆಂದು ಕರೆ ಕೊಟ್ಟರು.
ವಿಶ್ವ ಏಡ್ಸ್ ದಿನದ ಈ ಭಾರಿಯ ಘೋಷವಾಕ್ಯವಾದ “ಸಮುದಾಯಗಳು ಮುನ್ನಡೆಸಲಿ ” ಇದನ್ನು ಎಲ್ಲರೂ ಅರಿಯಬೇಕು ಎಂದು ತಿಳಿಸಿದರು.
ವೇದಿಕೆಯಲ್ಲಿ ಕಾಲೇಜಿನ ಐಕ್ಯೂ ಎಸಿ ಸಂಚಾಲಕಿ ಹೇಮ, ಐಸಿಟಿಸಿ ಘಟಕದ ಆಪ್ತ ಸಮಾಲೋಚಕ ಚಿಟ್ಟಿಯಪ್ಪ, ಚಂದ್ರಶೇಖರ್, ರಂಗಮಣಿ, ಸೆಂಟ್ ಆನ್ಸ್ ಪದವಿ ಕಾಲೇಜಿನ ಎನ್. ಎಸ್. ಎಸ್. ಅಧಿಕಾರಿ ಶಾಂತಿಭೂಷಣ್, ಯುವ ರೆಡ್ ಕ್ರಾಸ್ ಅಧಿಕಾರಿ ವಿಲೀನ ಗೋನ್ಸಾಲ್ವೇಸ್, ಕೌನ್ಸೆಲ್ಲಿಂಗ್ ಘಟಕದ ಸಂಯೋಜಕಿ ನಿರ್ಮಲ, ಕಾಲೇಜಿನ ಎನ್. ಎಸ್. ಎಸ್ ಘಟಕದ ವಿದ್ಯಾರ್ಥಿಗಳು, ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳು ಹಾಜರಿದ್ದರು.
ಉಪನ್ಯಾಸಕಿ ಪ್ರತಿಮಾ ರೈ ಸ್ವಾಗತಿಸಿದರು. ಎನ್. ಎಸ್. ಎಸ್ ಅಧಿಕಾರಿ ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಸೃಜನ ದೇಚಮ್ಮ ನಿರೂಪಿಸಿ, ವಿಲೀನ ಗೋನ್ಸಾಲ್ವೇಸ್ ವಂದಿಸಿದರು.
ಜಾಗೃತಿ ಜಾಥಾ : ಸಭಾ ಕಾರ್ಯಕ್ರಮಕ್ಕೂ ಮೊದಲು ಎನ್. ಎಸ್. ಎಸ್ ಹಾಗೂ ಯುವ ರೆಡ್ ಕ್ರಾಸ್ ಘಟಕದ ವಿದ್ಯಾರ್ಥಿಗಳಿಂದ ಏಡ್ಸ್ ದಿನಾಚರಣೆ ಬಗ್ಗೆ ಜಾಗೃತಿ ಜಾಥಾವು ವಿರಾಜಪೇಟೆ ನಗರದಲ್ಲಿ ನಡೆಯಿತು. ಈ ಜಾಥಾಕ್ಕೆ ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ. ಫಾ. ಐಸಾಕ್ ರತ್ನಾಕರ್ ಚಾಲನೆ ನೀಡಿದರು.
ವಿದ್ಯಾರ್ಥಿಗಳು ಜಾಥಾದಲ್ಲಿ ಘೋಷಣೆಯನ್ನು ಕೂಗುವುದರ ಮೂಲಕ ಸಾರ್ವಜನಿಕ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಎನ್. ಎಸ್. ಎಸ್ ಅಧಿಕಾರಿ ಶಾಂತಿಭೂಷಣ್, ರೆಡ್ ಕ್ರಾಸ್ ಅಧಿಕಾರಿ ವಿಲೀನ, ಕೌನ್ಸೆಲ್ಲಿಂಗ್ ಘಟಕದ ಸಂಯೋಜಕಿ ನಿರ್ಮಲ, ಉಪನ್ಯಾಸಕ ಅರ್ಜುನ್, ದೀಪ, ಆರೋಗ್ಯ ಇಲಾಖಾ ಸಿಬ್ಬಂದಿಗಳು ಪಾಲ್ಗೊಂಡಿದ್ದರು.









