ಚೆಟ್ಟಳ್ಳಿ ಡಿ.8 : ಉತ್ತರ ಭಾರತದಲ್ಲೇ ಹೆಚ್ಚಾಗಿ ಬೆಳೆಯುವ ಮಾರುಟ್ಟೆಯಲ್ಲಿ ಬಲು ಬೇಡಿಯ ವಿದೇಶಿಹಣ್ಣು ಲಿಚ್ಚಿ ಕೊಡಗಿನ ವಾತಾವರಣಕ್ಕೆ ಸೂಕ್ತ ವೆನಿಸಿದೆ. ದೇಶವಿದೇಶಗಳಲ್ಲು ಅಪರೂಪವೆಂಬಂತೆ ಡಿಸಂಬರ್ ತಿಂಗಳಲ್ಲಿ ಕೊಡಗಿನಲ್ಲಿ ಕಂಡುಬರುವ ಆಫ್‍ಸೀಜನ್ ಹಣ್ಣಾಗಿದೆ ಎಂದು ಭಾರತೀಯ ತೋಟಗಾರಿಕಾ ಸಂಸ್ಥೆಯ ನಿರ್ದೇಶಕರಾದ ಡಾ ಬಿಕಾಸ್‍ದಾಸ್ ಹೇಳಿದರು.
ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ನಡೆದ ಆಫ್ ಸೀಜನ್ ಲಿಚ್ಚಿ ಹಣ್ಣಿನ ಕ್ಷೇತ್ರೋತ್ಸವ ಹಾಗೂ ಬೇಸಾಯ ಕ್ರಮಗಳ ಕುರಿತು ನಡೆದ ಲಿಚ್ಚಿ ಹಣ್ಣಿನ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಲವು ವರ್ಷಗಳಿಂದ ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ವಿವಿಧ ಬಗೆಯ ಲಿಚ್ಚಿಬೆಳೆಯನ್ನು ಪ್ರಾಯೋಗಿಕವಾಗಿ ಬೆಳೆಸಲಾಗುತ್ತಿದ್ದು, ವಿದೇಶಗಳಲ್ಲಿ ಜೂನ್‍ತಿಂಗಳಲ್ಲಿ ಲಿಚ್ಚಿ ಫಸಲು ನೀಡಿದರೆ ಕೊಡಗಿನ ವಾತಾವರಣದಲ್ಲಿ ಡಿಸೆಂಬರ್ ತಿಂಗಳಲ್ಲಿ ಫಸಲು ಬರುತ್ತಿದೆ. ಆದರೂ ಲಿಚ್ಚಿ ಬೆಳೆಯ ಅಭಿವೃದ್ಧಿಯಾಗಿಲ್ಲ. ಮುಂದಿನ ದಿನಗಳಲ್ಲಿ ಲಿಚ್ಚಿ ಅಭಿವೃದ್ಧಿಗೆ ಕೇಂದ್ರಿಯ ತೋಟಗಾರಿಕಾ ಕೇಂದ್ರದ ವತಿಯಿಂದ ಬೆಳೆಗಾರರ ಸಹಕಾರದೊಂದಿಗೆ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದೆಂದರು.
ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ಮುಖ್ಯಸ್ಥ ಡಾ.ರಾಜೇಂದಿರನ್ ಮಾತನಾಡಿ, ವಿದೇಶಿ ತಳಿಯಾದ ಲಿಚ್ಚಿಯನ್ನು ಹಲವು ವೈಜ್ಞಾನಿಕ ವಿಧಾನಗಳ ಮೂಲಕ ಈ ಕೇಂದ್ರದಲ್ಲಿ ಅಭಿವೃದ್ಧಿ ಪಡಿಸಲಾಗಿದ್ದು, ಬೆಳೆಗಾರರರಿಗೆ ತಿಳಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಕಾಫಿ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಪ್ರಗತಿಪರ ಬೆಳೆಗಾರರಾದ ಬೋಸ್ ಮಂದಣ್ಣ ಮಾತನಾಡಿ, ಕೊಡಗು ಹಾಗೂ ವೈನಾಡಿನ ವಾತಾರವಣ ಆಫ್ ಸೀಜನ್ ಲಿಚ್ಚಿ ಬೆಳೆಗೆ ಸೂಕ್ತವಾದ್ದರಿಂದ ಉತ್ತಮ ಆದಾಯಕ್ಕೆ ಮೂಲವಾಗಿದೆ. ಬೆಳೆಗಾರರಿಗೆ ಉತ್ತಮ ಇಳುವರಿ ನೀಡುವ ಗಿಡಗಳ ದೊರೆಯದೇ ಇರುವುದು, ಮಾರುಕಟ್ಟೆಯ ಕೊರತೆ ಇದೆ. ಚೆಟ್ಟಳ್ಳಿ ಕೇಂದ್ರದಲ್ಲಿ ಬೆಳೆಗಾರರ ಸಹಕಾರ ಸಂಘವನ್ನು ಸ್ಥಾಪಿಸುವ ಮೂಲಕ ಬೆಳೆಗಾರರಿಗೆ ಪ್ರಯೋಜನಕಾರಿಯಾಗಲಿದೆ ಎಂದರು.
2015 ರಲ್ಲಿ ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಕೇಂದ್ರದಲ್ಲಿ ಲಿಚ್ಚಿಬೆಳೆಯನ್ನು ಅಭಿವೃದ್ಧಿಪಡಿಸಿದ್ದು, ವಿಶೇಷವೆಂಬಂತೆ ವರ್ಷದ ಕ್ರಿಸ್‍ಮಸ್ ತಿಂಗಳ ಸಮಯದಲ್ಲಿ ಕೊಡಗಿನಲ್ಲಿ ಫಸಲುಬರುತ್ತಿದೆ. ಬಲುಬೇಡಿಕೆ ಇರುವೆಡೆ ಲಿಚ್ಚಿ ಹಣ್ಣಿನ ಬೆಲೆಯು ಹೆಚ್ಚಿದ್ದು, ಉತ್ತಮ ಆದಾಯದ ಮೂಲವಾಗಿ ಬೆಳೆಗಾರರು ಲಿಚ್ಚಿ ಬೆಳೆಯನ್ನು ಉತ್ತಮ ಗುಣಮಟ್ಟ ಹಾಗೂ ಮಾರುಕಟ್ಟೆಯ ಬೇಡಿಯ ಅನುಸಾರವಾಗಿ ಬೆಳೆಯಬೇಕೆಂದರು.
ತೋಟ ಗಾರಿಕಾ ಸಂಶೋಧನಾಕೇಂದ್ರದಿಂದ ಬೆಳೆಗಾರರಿಗೆ ಉತ್ತಮ ತಳಿಯ ಗಿಡಗಳನ್ನು ವಿತರಿಸುವ ಪ್ರಯತ್ನ ನಡೆಯುತ್ತಿದ್ದು ಬೆಳೆಗಾರರ ಸಹಕಾರ ಮುಖ್ಯವೆಂದು ಐಐಹೆಚ್‍ಆರ್‍ನ ಕೋಡಿನೇಟರ್ ಡಾ.ಪ್ರಕಾಶ್ ಪಾಟಿಲ್ ಹಾಗೂ ಐಐಹೆಚ್‍ಆರ್‍ನ ನಿರ್ದೇಶಕ ಡಾ.ಸಂಜೀವಕುಮಾರ್ ಸಿಂಗ್ ತಿಳಿಸಿದರು.
ತೋಟಗಾರಿಕಾ ಕೇಂದ್ರದ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಡಾ.ಬಿಕಾಸ್‍ದಾಸ್, ಡಾ.ಪ್ರಕಾಶ್‍ಪಾಟಿಲ್, ಡಾ.ಸಂಜೀವ ಕುಮಾರ್‍ಸಿಂಗ್, ಬೋಸ್‍ಮಂದಣ್ಣ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಕೇಂದ್ರದವಿಜ್ಞಾನಿ ಡಾ. ಬಿ.ಎಂ.ಮುರುಳಿದರ ವಂದಿಸಿ, ಕೀಟಶಾಸ್ತ್ರದ ವಿಜ್ಞಾನಿ ಡಾ.ರಾಣಿ ನಿರೂಪಿಸಿದರು.
ಕಾರ್ಯಕ್ರಮದ ಅಂಗವಾಗಿ ಕೇಂದ್ರದ ಹಾಗೂ ಬೆಳೆಗಾಗರರು ಬೆಳೆದ ವಿವಿಧ ಲಿಚ್ಚಿ ಹಣ್ಣುಗಳು, ವಿವಿಧ ನಾಟಿ ಹಣ್ಣು ಹಾಗೂ ಬಗೆಬಗೆಯ ಕೀಟಗಳು, ಕಸಿಕಟ್ಟಿದ ಗಿಡಗಳ ಪ್ರದರ್ಶನ ನಡೆಯಿತು.
ನಂತರ ನಡೆದ ಕಾರ್ಯಗಾರದಲ್ಲಿ ಡಾ.ಬಿಕಾಸ್‍ದಾಸ್ ಹಾಗೂ ಡಾ, ಮುರುಳಿಧರ್ ಲಿಚ್ಚಿಬೆಳೆಯ ನಿರೂವಣೆ ಹಾಗೂ ಬೇಸಾಯ ತಾಂತ್ರಿಕತೆಯ ಬಗ್ಗೆ ತಿಳಿಸಿದರು. ಅಲ್ಲದೇ ಬೆಳೆಗಾರರಿಗೆ ಕೇಂದ್ರದ ಲಿಚ್ಚಿ ತೋಟದ ಕ್ಷೇತ್ರ ವೀಕ್ಷಣಾ ಕಾರ್ಯಕ್ರಮ ನಡೆಯಿತು.
ಕೃಷಿ ವಿಜ್ಞಾನಕೇಂದ್ರ, ತೋಟಗಾರಿಕೆ, ಕೃಷಿ ಇಲಾಖೆ, ಕಾಫಿಮಂಡಳಿ, ಸಂಬಾರ ಮಂಡಳಿ ಹಾಗೂ ವಿವಿಧ ಇಲಾಖೆಗಳ ತಜ್ಞರು ಹಾಗೂ ಅಧಿಕಾರಿಗಳು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳು, ಕೊಡಗು, ಹಾಸನ, ಚಿಕ್ಕಮಂಗಳೂರು ಹಾಗೂ ಪಂಜಾಬ್‍ನ ಬೆಳೆಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವರದಿ : ಪುತ್ತರಿರ ಕರುಣ್ ಕಾಳಯ್ಯ









