ಮಡಿಕೇರಿ ಡಿ.9 : ತೂಕ್ ಬೊಳಕ್ ಕಲೆ, ಕ್ರೀಡೆ, ಸಾಹಿತ್ಯ ಅಕಾಡೆಮಿಯಿಂದ ಡಿ.12ರಂದು ಅಮ್ಮತ್ತಿಯಲ್ಲಿ ಎರಡನೇ ವರ್ಷದ ರಾಜ್ಯಮಟ್ಟದ ಕೊಡವ ವಾಲಗತ್ತಾಟ್ ನಮ್ಮೆ ನಡೆಯಲಿದೆ ಎಂದು ಕಾರ್ಯಕ್ರಮದ ಸಂಚಾಲಕ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಮ್ಮತ್ತಿ ಕೊಡವ ಸಮಾಜದ ಸಹಕಾರದೊಂದಿಗೆ ಅಮ್ಮತ್ತಿ ಕೊಡವ ಸಮಾಜದ ಆವರಣದಲ್ಲಿ ಕೊಡವ ವಾಲಗತ್ತಾಟ್ ನಮ್ಮೆ ನಡೆಯಲಿದ್ದು, ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ವಿವಿಧ ವಿಭಾಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದರು.
1 ರಿಂದ 7ನೇ ತರಗತಿಯವರೆಗೆ ಪ್ರಾಥಮಿಕ ವಿಭಾಗ, 8ನೇ ತರಗತಿಯಿಂದ 10ನೇ ತರಗತಿಯವರೆಗೆ ಪ್ರೌಢಶಾಲಾ ವಿಭಾಗ, ಪ್ರಥಮ ಪಿಯುಸಿಯಿಂದ 3ನೇ ಪದವಿಯವರೆಗೆ ಕಾಲೇಜು ವಿಭಾಗ, ಕಾಲೇಜಿನ ನಂತರ 60 ವಯಸ್ಸಿನವರೆಗೆ ಮತ್ತೊಂದು ವಿಭಾಗ, 60 ವಯಸ್ಸಿನ ಮೇಲ್ಪಟ್ಟು ಹಿರಿಯ ನಾಗರಿಕರ ವಿಭಾಗ ಸೇರಿದಂತೆ ಐದು ವಿಭಾಗಗಳಲ್ಲಿ ಪುರುಷರು ಹಾಗೂ ಮಹಿಳೆಯರು ಎಂದು ತಲಾ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ ಎಂದು ಮಧೋಶ್ ಪೂವಯ್ಯ ಮಾಹಿತಿ ನೀಡಿದರು.
ಕಳೆದ ವರ್ಷ ಮೊದಲ ಬಾರಿಗೆ ವಿರಾಜಪೇಟೆ ಕೊಡವ ಸಮಾಜದಲ್ಲಿ ಯಶಸ್ವಿ ಕೊಡವ ವಾಲಗತ್ತಾಟ್ ನಮ್ಮೆಯನ್ನು ಆಯೋಜಿಸಲಾಗಿದ್ದು, ಜನಮನ್ನಣೆ ಪಡೆದಿತ್ತು. ಈ ಬಾರಿ ಅಮ್ಮತ್ತಿ ಕೊಡವ ಸಮಾಜದ ಸಹಕಾರದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಪರ್ಧಿಗಳು ಮಾತ್ರವಲ್ಲದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮವನ್ನು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ವಿಧಾನ ಪರಿಷತ್ ಸದಸ್ಯೆ ಶಾಂತೇಯಂಡ ವೀಣಾ ಅಚ್ಚಯ್ಯ, ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಪೊನ್ನಂಪೇಟೆ ಕೊಡವ ಸಮಾಜದ ಮಾಜಿ ಅಧ್ಯಕ್ಷ ಸುಳ್ಳಿಮಾಡ ಗೋಪಾಲ್ ತಿಮ್ಮಯ್ಯ, ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆಯ ಕಾರ್ಯದರ್ಶಿ ಪಾರುವಂಗಡ ಸನ್ನಿ ಮೊಣ್ಣಪ್ಪ, ಜೇಸಿಐ ರಾಷ್ಟ್ರೀಯ ಉಪಾಧ್ಯಕ್ಷ ಅಜ್ಜಿಕುಟ್ಟೀರ ನರೇನ್ ಕಾರ್ಯಪ್ಪ, ವಿರಾಜಪೇಟೆ ತಾಲೂಕು ವೈದ್ಯಾಧಿಕಾರಿಗಳಾದ ಡಾ.ಯತಿರಾಜ್, ಡಾ. ಚೇಂದಿರ ಬೋಪಣ್ಣ, ಕೊಡವ ಸಿನಿಮಾ ನಟ ಹಾಗೂ ನಿರ್ದೇಶಕ ಕಾಳಿಮಾಡ ದಿನೇಶ್ ನಾಚಪ್ಪ, ಹಿರಿಯ ಕಲಾವಿದರಾದ ಮಂಡೀರ ಬೋಪಯ್ಯ ಹಾಗೂ ಪದ್ಮ ಬೋಪಯ್ಯ ಭಾಗವಹಿಸಲಿದ್ದಾರೆ.
ತೂಕ್ ಬೊಳಕ್ ಕಲೆ ಕ್ರೀಡೆ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಅಗಲಿದ ಖ್ಯಾತ ಸಾಹಿತಿ ಮುಲ್ಲೇಂಗಡ ಬೇಬಿ ಚೋಂದಮ್ಮ ಸ್ಮರಣಾರ್ಥ ಉಚಿತ ಆರೋಗ್ಯ ತಪಾಸಣಾ ಶಿಬಿರ ಸೇರಿದಂತೆ ಕಣ್ಣು ದಾನ ಮತ್ತು ದೇಹ ದಾನದ ನೋಂದಣಿ ನಡೆಯಲಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಹೆಸರು ನೋಂದಣಿಗಾಗಿ 9480556667 ಅಥವಾ 9483815478 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದ್ದಾರೆ.








