ಸಿದ್ದಾಪುರ ಡಿ.9 : ಮಕ್ಕಳ ಭವಿಷ್ಯವನ್ನು ರೂಪಿಸಲು ಶಿಕ್ಷಣ ಅತ್ಯಗತ್ಯವಾಗಿದ್ದು, ಪೋಷಕರು ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳಿಸುವುದರ ಮೂಲಕ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗಲಿದ್ದು, ಭವಿಷ್ಯದ ಚಿಂತನೆಯೊಂದಿಗೆ ಮುಖ್ಯ ವಾಹಿನಿಗೆ ಬರಬೇಕೆಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ
ಅಧ್ಯಕ್ಷ ಸ್ವಾಮಿ ಪರಹಿತಾನಂದಜಿ ಮಹಾರಾಜ್ ಕರೆ ನೀಡಿದರು.
ಚೆನ್ನಂಗಿ ಸರ್ಕಾರಿ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಮಾತನಾಡಿ, ಸಂಘ ಸಂಸ್ಥೆಗಳು ಹಾಗೂ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿಯೊಂದಿಗೆ ಸಮಾಜದ ಮುಖ್ಯ ವಾಹಿನಿಗೆ ಬಂದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗಲಿದೆ ಎಂದರು.
ಶಾರದಾಶ್ರಮದ ಮೂಲಕ ಚೆನ್ನಂಗಿ ಶಾಲೆಗೆ ಕುಡಿಯುವ ನೀರಿಗಾಗಿ ಬೋರ್ವೆಲ್ ಕೊರಸಲಾಗಿದೆ. ಸಮೀಪದ ಹಾಡಿಗಳಲ್ಲಿ ಸಮುದಾಯ ಭವನ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯ ಯೋಜನೆಗಳನ್ನು ಮಾಡಲಾಗಿದೆ.
ಸಂಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದುಕೊಂಡು ಉನ್ನತ ಶಿಕ್ಷಣ ದೊಂದಿಗೆ ವಿವೇಕಾನಂದರ ಆದರ್ಶ ಜೀವನವನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಾಲಿಬೆಟ್ಟದ ಸಮಾಜ ಸೇವಕ ಡಾ. ಎ.ಸಿ ಗಣಪತಿ, ಗ್ರಾಮದ ಹಿರಿಯರು ನಿರ್ಮಿಸಿದ ಈ ಶಾಲೆ ಇದೀಗ 64 ವರ್ಷ ಪೂರೈಸಿದೆ. ಶಾಲೆಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ. ಒಂದು ಶಾಲೆ ಮುನ್ನಡೆಯಬೇಕಾದರೆ ಮುಖ್ಯ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದ್ದು, ಅವರು ಮನಸು ಮಾಡಿದರೆ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗಲಿದೆ ಎಂಬುದಕ್ಕೆ ಚೆನ್ನಂಗಿ ಶಾಲೆ ಗ್ರಾಮಕ್ಕೆ ಮಾದರಿ ಶಾಲೆಯಾಗಿ ಮುನ್ನಡೆಯುತ್ತಿದೆ ಅಭಿಪ್ರಾಯ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತಿರುವ ಮುಖ್ಯ ಶಿಕ್ಷಕಿ ಸುಶಾ ಹಾಗೂ ಶಿಕ್ಷಕರ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಜಿ.ಪಂ ಮಾಜಿ ಸದಸ್ಯ ಮುಕುಂಡ ವಿಜು ಸುಬ್ರಮಣಿ ಮಾತನಾಡಿ, ಸರ್ಕಾರಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವುದರ ಮೂಲಕ ಹಲವಾರು ಯೋಜನೆಗಳನ್ನು ನೀಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣದ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಬರಬೇಕೆಂದು ಹೇಳಿದರು. ಶಾಲೆಯ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವೈಯಕ್ತಿಕವಾಗಿ ಆರ್ಥಿಕ ಸಹಾಯ ನೀಡಿ ಗೌರವಿಸಲಾಗುವುದು ಎಂದರು.
ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಮಾತನಾಡಿ, ಶಿಕ್ಷಣದಿಂದ ದೂರ ಉಳಿದ ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಹಾಡಿಗೆ ತೆರಳಿ ಪೋಷಕರ ಮನವೊಲಿಸಿ ಶಾಲೆಗೆ ಕರೆತರುತ್ತಿದ್ದಾರೆ. ದಾನಿಗಳು ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶಿಕ್ಷಣಕ್ಕಾಗಿ ಕೈಜೋಡಿಸಿದ್ದಾರೆ. ಶಾಲೆಯಲ್ಲಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್, ಮೂಲ ಸಾಮರ್ಥ್ಯದ ಕಲಿಕೆ, ವೃತ್ತಿ ಶಿಕ್ಷಣ, ಪರಿಸರ ಜಾಗೃತಿ, ಸಂಗೀತ, ಕ್ರೀಡೆ, ಸಾಂಸ್ಕೃತಿಕ, ಪ್ರತಿಭಾ ಕಾರಂಜಿ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳ ಕಲಿಕೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ
ಮಕ್ಕಳ ಹಾಜರಾತಿ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಶಿಕ್ಷಕರುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿವಾಸಿ ಮುಖಂಡ ಸಿದ್ದಪ್ಪ ಮಾತನಾಡಿ, ಆದಿವಾಸಿ ಜನಾಂಗದ ಮಕ್ಕಳೇ ಹೆಚ್ಚಾಗಿ ಶಾಲೆಯಲ್ಲಿ ಕಲಿಯುತ್ತಿದ್ದು, ಶಿಕ್ಷಣದಿಂದ ವಂಚಿತರಾಗುತ್ತಿದ್ದ ವಿದ್ಯಾರ್ಥಿಗಳನ್ನು ಕರೆತಂದು ಶಿಕ್ಷಣದೊಂದಿಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಚ್ಚುಕಟ್ಟಾಗಿ ಮುನ್ನಡೆಯುತ್ತಿದ್ದು, ಇದೀಗ ವಿದ್ಯಾರ್ಥಿಗಳು ಸ್ವಯಂ ಪ್ರೇರಿತವಾಗಿ ಗೈರಾಗದಂತೆ ಶಾಲೆಗೆ ಬರುತ್ತಿರುವುದು ಸಂತಸ ತಂದಿದೆ ಎಂದರು.
ಸುತ್ತಮುತ್ತಲ ದಾನಿಗಳು ಶಾಲೆಯ ಉಳಿವಿಗಾಗಿ ಮಕ್ಕಳ ಶಿಕ್ಷಣಕ್ಕೂ ಸಹಕಾರ ನೀಡುವ ಮೂಲಕ ಕೈಜೋಡಿಸುತ್ತಿದ್ದಾರೆ. ಜನಾಂಗದ ಬಾಂಧವರು ಮಕ್ಕಳನ್ನ ಶಿಕ್ಷಣದಿಂದ ವಂಚಿತರಾಗದಂತೆ ನಿಗಾ ವಹಿಸುವುದರೊಂದಿಗೆ ಶಾಲೆಗೆ ಕಳಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು. ವಾರ್ಷಿಕೋತ್ಸವ ಅಂಗವಾಗಿ ಶಾಲಾ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಹಲವಾರು ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷೆ ಬೇಬಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚನ್ನಯ್ಯನಕೋಟೆ ಗ್ರಾ. ಪ0. ಅಧ್ಯಕ್ಷ ಮೇಕೆರಿರ ಅರುಣ್ ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಜಿತ್ ಕಂಬಯ್ಯ, ಅಕ್ಷರ ದಾಸೂಹ ಸಹಾಯಕ ನಿರ್ದೇಶಕ ರಾಜೇಶ್,
ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯಕುಮಾರ್, ದೈಹಿಕ ಶಿಕ್ಷಣ ಪರಿವೀಕ್ಷಕಿ ಗಾಯಿತ್ರಿ,
ಶಿಕ್ಷಣ ಸಂಯೋಜಕಿ ವಿಶಾಲಾಕ್ಷಿ, ಮಾಜಿ ಗ್ರಾ.ಪಂ ಅಧ್ಯಕ್ಷ ವೇಣು, ವಕೀಲ ಉತ್ತಪ್ಪ,
ಬಿ.ಆರ್.ಪಿಗಳಾದ ವಾಮನ, ಗೀತಾಂಜಲಿ, ಸಿಆರ್‌ಪಿ ಕರುಂಬಯ್ಯ, ವಿದ್ಯಾ, ಬಿ ಐ ಆರ್ ಟಿ ಅಜಿತ, ಶಾಲಾ ಮುಖ್ಯ ಶಿಕ್ಷಕಿ ಕೆ.ಕೆ. ಸುಶಾ, .ಸ್ಥಳೀಯರಾದ ಠವಿ, ಡಾಲು ಸೇರಿದಂತೆ ಶಿಕ್ಷಕರು ಪೋಷಕರು ಹಾಜರಿದ್ದರು.









