ಮಡಿಕೇರಿ ಡಿ.13 : ವಾಲ್ನೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಬೆಳೆಗಾರರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ.
ಸ್ಥಳೀಯ ಬೆಳೆಗಾರ ಭುವನೇಂದ್ರ ಎಂಬುವವರ ತೋಟಕ್ಕೆ ದಾಳಿ ಮಾಡಿದ ಸುಮಾರು 9ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಕೃಷಿ ಬೆಳೆಗಳನ್ನು ನಾಶ ಮಾಡಿದೆ. ಏಳು ವರ್ಷಗಳಾಗಿರುವ 100 ಕ್ಕೂ ಅಧಿಕ ಅಡಿಕೆ ಗಿಡಗಳು, ಕಾಫಿ ಗಿಡ, ಕಾಳು ಮೆಣಸು ಬಳ್ಳಿಗಳನ್ನು ಧ್ವಂಸ ಮಾಡಿದೆ. ಸುತ್ತಮುತ್ತಲ ತೋಟ ಮತ್ತು ಗದ್ದೆಗಳಿಗೂ ಲಗ್ಗೆ ಇಟ್ಟಿರುವ ಕಾಡಾನೆಗಳು ಕೃಷಿಕರ ಕೈಗೆ ಬಂದ ಫಸಲನ್ನು ಬಾಯಿಗೆ ಬಾರದಂತೆ ಮಾಡಿವೆ. ಈ ಭಾಗದ ಬೆಳೆಗಾರರಿಗೆ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಗ್ರಾಮಸ್ಥರು ಹಾಗೂ ಕಾರ್ಮಿಕರು ಆತಂಕದಿಂದಲೇ ದಿನದೂಡಬೇಕಾದ ಪರಿಸ್ಥಿತಿ ಬಂದೊದಗಿದೆ.
ಕಾಡಾನೆ ಹಾವಳಿ ಕುರಿತು ಬೇಸರ ವ್ಯಕ್ತಪಡಿಸಿರುವ ಭುವನೇಂದ್ರ, ಅರಣ್ಯ ಇಲಾಖೆ ತಕ್ಷಣ ಈ ಭಾಗದ ರೈಲ್ವೆ ಕಂಬಿಯ ಬೇಲಿಗಳನ್ನು ದುರಸ್ತಿ ಪಡಿಸಬೇಕೆಂದು ಒತ್ತಾಯಿಸಿದರು. ಕಾಡಾನೆಗಳ ದಾಳಿಯಿಂದಲೇ ಬೇಲಿಗಳು ಹಾನಿಗೊಳಗಾಗಿದ್ದು, ಇಲಾಖೆ ಈ ಬಗ್ಗೆ ಗಮನ ಹರಿಸಬೇಕೆಂದು ಆಗ್ರಹಿಸಿದರು.
ಕಾಡಾನೆ ಹಾವಳಿಯಿಂದ ಬೆಳೆಗಾರರಿಗೆ ಲಕ್ಷಾಂತರ ರೂ. ನಷ್ಟವಾಗುತ್ತಿದ್ದು, ಪರಿಹಾರ ವಿತರಣೆಗೂ ಕ್ರಮ ಕೈಗೊಳ್ಳಬೇಕು ಮತ್ತು ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಬೇಕೆಂದರು.
::: ಅಧಿಕಾರಿಗಳ ಭೇಟಿ :::
ವಾಲ್ನೂರು ಭಾಗದಲ್ಲಿ ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟವಾಗುತ್ತಿರುವುದರಿಂದ ಮೀನುಕೊಲ್ಲಿ ಅರಣ್ಯ ವಿಭಾಗದ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಅವರು ಸ್ಥಳಕ್ಕೆ ಭೇಟಿ ನೀಡಿದರು. ಹಾನಿಗೊಳಗಾದ ಪ್ರದೇಶವನ್ನು ಪರಿಶೀಲಿಸಿ ಸೂಕ್ತ ಕ್ರಮದ ಭರವಸೆ ನೀಡಿದರು.









