ಮೈಸೂರು ಡಿ.18 : ವ್ಯಾಪಾರಸ್ಥರ ದೈನಂದಿನ ಬದುಕು ಇತ್ತೀಚಿನ ದಿನಗಳಲ್ಲಿ ಸ್ಪರ್ಧಾತ್ಮಕವಾಗಿದ್ದು, ಪೈಪೋಟಿಗಳ ನಡುವೆ ಒತ್ತಡದ ಬದುಕನ್ನು ಸಾಗಿಸುತ್ತಿದ್ದಾರೆ. ದಿನದ ಒಂದು ಘಂಟೆಗಳ ಕಾಲ ಬಿಡುವು ಮಾಡಿಕೊಂಡು ಆಯಾಮಗಳ ಮೂಲಕ ತಮ್ಮಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ. ಅಂತೆಯೇ ಗ್ರಾಹಕರ ಆರೋಗ್ಯದ ಕಾಳಜಿಗಾಗಿ ಆಹಾರ ಪದಾರ್ಥ ಮಾರುವ ಹಾಗೂ ತಯಾರಿಸುವ ವ್ಯಾಪಾರಸ್ಥರು ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (ಎಫ್‌ಎಸ್‌ಎಸ್ ಎಐ) ಪರವಾನಗಿ ಕಡ್ಡಾಯವಾಗಿ ಪಡೆದಿರಬೇಕು ಎಂದು ಮೈಸೂರು ಜಿಲ್ಲಾ ಅಂಕಿತ ಅಧಿಕಾರಿ ಡಾ.ಕಾಂತರಾಜ್ ಹೇಳಿದರು.
ಹೂಟಗಳ್ಳಿ ಕೆಎಚ್‌ಬಿ ಬಡಾವಣೆಯ ವರ್ತಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಂಘದ ಸಭಾಂಗಣದಲ್ಲಿ ನಡೆದ ನೂತನ ಸದಸ್ಯರಿಗೆ ಸಂಘದ ಗುರುತಿನ ಚೀಟಿ ಹಾಗೂ ಪ್ರಮಾಣ ಪತ್ರವನ್ನು ವಿತರಣೆ ಮಾಡುವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಆಹಾರ ಉತ್ಪನ್ನಗಳು ತಯಾರಾಗುವ, ಸಂಗ್ರಹಿಸುವ ಸ್ಥಳದ ಮೇಲೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿ ಕಲಬೆರೆಕೆ ಹಾಗೂ ಗುಣಮಟ್ಟವಿಲ್ಲದ ಆಹಾರ ಉತ್ಪನ್ನಗಳನ್ನು ತಯಾರಿಸುವವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿರುತ್ತದೆ. ಪ್ರತಿ ಜಿಲ್ಲೆಗಳಲ್ಲಿ ನಿಯೋಜಿತ ಅಧಿಕಾರಿಗಳು ಆಹಾರ ಉತ್ಪನ್ನಗಳನ್ನು ತಯಾರಿಸುವವರಿಗೆ ಪರವಾನಗಿಯನ್ನು ನೀಡುವ, ರದ್ದು ಮಾಡುವ, ಪರಿಶೀಲನೆ ನಡೆಸುವ, ದೂರುಗಳನ್ನು ಸ್ವೀಕರಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ ಹಾಗಾಗಿ ವ್ಯಾಪಾರಸ್ಥರು ಇಲಾಖೆಯ ಕಾನೂನು ಪಾಲನೆಗೆ ಸ್ಪಂದಿಸಬೇಕು ಎಂದರು.
ಫುಡ್ ಅಂಡ್ ಸೇಫ್ಟಿ ಇಲಾಖೆ ತರಭೇತಿ ಅಧಿಕಾರಿ ರಶ್ಮಿ ಮಾತನಾಡಿ, ಆಹಾರ ಉತ್ಪನ್ನಗಳಲ್ಲಿ ಉತ್ತಮ ಗುಣಮಟ್ಟ ಕಾಪಾಡಲು ತಯಾರಕರ ಮೇಲಿನ ಹಿಡಿತವನ್ನು ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ ಮತ್ತಷ್ಟು ಬಿಗಿಗೊಳಿಸಿದೆ ಹಾಗಾಗಿ ವರ್ತಕರು ತಮ್ಮ ಆರೋಗ್ಯದ ಜೊತೆಗೆ ಗ್ರಾಹಕರ ಆರೋಗ್ಯವನ್ನೂ ಕಾಪಾಡಬೇಕು ಇದಕ್ಕೆ ಸಂಬದಿಸಿದಂತೆ ಇಲಾಖೆಯ ವತಿಯಿಂದ ಅಧ್ಯಯನ ಕೇಂದ್ರದಲ್ಲಿ ತರಭೇತಿ ಹಾಗೂ ಪ್ರಮಾಣ ಪತ್ರ ನೀಡಲಾಗುತ್ತಿದೆ ಎಂದರು.
ಸಂಘದ ಅಧ್ಯಕ್ಷ ಎಂ.ಶಿವಣ್ಣ ಮಾತನಾಡಿ, ಪ್ಯಾಪಾರ ನಡೆಸಲು ಎಲ್ಲಾ ರೀತಿಯ ಪರವಾನಿಗೆ ಪಡೆಯಲು ಇಲಾಖೆಗಳ ಮಾಹಿತಿ ಕೊರತೆಯಿಂದಾಗಿ ವರ್ತಕರು ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದರು, ಹೆಚ್ಚಿನ ಹಣವನ್ನು ಕಳೆದುಕೊಂಡು ಮೋಸಹೋಗಿರುವ ಘಟನೆಗಳು, ಕೆಲವು ಸಂಘ ಸಂಸ್ಥೆಗಳಿಂದ ಹಣವಸೂಲಿ ಇವೆಲ್ಲವುಗಳನ್ನು ತಪ್ಪಿಸಲು ನಮ್ಮ ಸ್ಥಳೀಯ ವರ್ತಕರೆಲ್ಲಾ ಸೇರಿ ಕ್ಷೇಮಾಭಿವೃದ್ಧಿ ಸಂಘ ಸ್ತಾಪಿಸಿದ್ದೇವೆ. ಆರಂಭದಲ್ಲೇ ವರ್ತಕರಿಂದ ಉತ್ತಮವಾಗಿ ಪ್ರತಿಕ್ರಿಯೆ ದೊರೆತು ಸಂಘ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದರು.
ಸಂಘಕ್ಕೆ ನೂತನವಾಗಿ ಸದಸ್ಯತ್ವ ಪಡೆದಿರುವ 81 ಸದಸ್ಯರುಗಳಿಗೆ ಗುರುತಿನ ಚೀಟಿ ಹಾಗೂ ಪ್ರಮಾಣಪತ್ರ ನೀಡಲಾಯಿತು.
ಈ ಸಂದರ್ಭ ಮಾತೃಶ್ರೀ ಡಯಾಗ್ನಸಿಸ್ ಲ್ಯಾಬ್ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ಸದಸ್ಯರಿಗೂ ಉಚಿತವಾಗಿ ವೈದ್ಯಕೀಯ ತಪಾಸಣೆಯನ್ನು ಮಾಡಿದರು.
ಕಾರ್ಯಕ್ರಮದಲ್ಲಿ ಪದಾಧಿಕಾರಿಗಳು, ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ವರದಿ : ಎನ್.ಎ.ಅಶ್ವಥ್ ಕುಮಾರ್