ಮಡಿಕೇರಿ ಡಿ.18 : ಕೊಡಗು ಜಿಲ್ಲಾ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿಲ್ಲವ ಸಮುದಾಯ ಬಾಂಧವರಿಗಾಗಿ ಡಿ.30 ಮತ್ತು 31 ರಂದು 17ನೇ ವರ್ಷದ ಕೋಟಿ ಚೆನ್ನಯ್ಯ ಕ್ರೀಡಾಕೂಟ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷೆ ಬಿ.ಎಸ್.ಲೀಲಾವತಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಡೆಯಲಿದ್ದು, ಸಮಾಜದ ಹಾಗೂ ಜಿಲ್ಲೆಯ ಗಣ್ಯ ವ್ಯಕ್ತಿಗಳು ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದರು.
ಎರಡು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿಯಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್, ಪುರುಷ ಹಾಗೂ ಮಹಿಳೆಯರಿಗೆ ಹಗ್ಗಜಗ್ಗಾಟ, ಭಾರದ ಗುಂಡು ಎಸೆತ, ಮಹಿಳೆಯರಿಗೆ ಥ್ರೋಬಾಲ್, ವಿಷದ ಚೆಂಡು, ಪುರುಷರಿಗೆ ವಾಲಿಬಾಲ್, 5 ವರ್ಷದೊಳಗಿನ ಮಕ್ಕಳಿಗೆ ಕಾಳು ಹೆಕ್ಕುವುದು, 1 ರಿಂದ 2ನೇ ತರಗತಿಯ ಮಕ್ಕಳಿಗೆ ಕಪ್ಪೆ ಜಿಗಿತ, 3 ರಿಂದ 5ನೇ ತರಗತಿ ಮಕ್ಕಳಿಗೆ 50 ಮೀ. ಓಟ, 5ನೇ ತರಗತಿಯಿಂದ 7ನೇ ತರಗತಿ ಬಾಲಕ-ಬಾಲಕಿಯರಿಗೆ 100 ಮೀ. ಓಟ, ಪ್ರೌಢಶಾಲಾ ವಿಭಾಗದ ಬಾಲಕ-ಬಾಲಕಿಯರಿಗೆ 200 ಮೀ. ಓಟ, ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ 400 ಮೀ. ಓಟ, 50 ವರ್ಷ ಮೇಲ್ಪಟ್ಟ ಪುರುಷ ಹಾಗೂ ಮಹಿಳೆಯರಿಗೆ ವೇಗದ ನಡಿಗೆ ಸ್ಪರ್ಧೆ ನಡೆಯಲಿದೆ.
ಡಿ.30 ರಂದು ಕ್ರಿಕೆಟ್ ಪಂದ್ಯಾವಳಿ ಮಾತ್ರ ನಡೆಯಲಿದೆ. ಡಿ.31ರಂದು ಕ್ರಿಕೆಟ್ ಫೈನಲ್ ಪಂದ್ಯಾವಳಿಯ ಜೊತೆಗೆ ಉಳಿದ ಎಲ್ಲಾ ಕ್ರೀಡಾಕೂಟ ನಡೆಯಲಿದ್ದು, ಪಂದ್ಯಾವಳಿಯ ವಿಜೇತರಿಗೆ ನಗದು ಮತ್ತು ಆಕರ್ಷಕ ಟ್ರೋಫಿ ಸೇರಿದಂತೆ ವೈಯಕ್ತಿಕ ಟ್ರೋಫಿ ನೀಡಲಾಗುವುದು.
ಭಾಗವಹಿಸುವ ಕ್ರಿಕೆಟ್ ಹಾಗೂ ಹಗ್ಗಜಗ್ಗಾಟ ಪುರುಷರಿಗೆ ರೂ.2000, ವಾಲಿಬಾಲ್ ಪುರುಷರಿಗೆ ರೂ.1.500 ಮತ್ತು ಮಹಿಳೆಯರಿಗೆ ಥ್ರೋಬಾಲ್, ಹಗ್ಗಜಗ್ಗಾಟ ರೂ.1,000 ಪಾವತಿಸಿ ಡಿ.24ರ ಒಳಗೆ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಮನವಿ ಮಾಡಿದ ಅವರು, ಹೆಚ್ಚಿನ ವಿವರಗಳಿಗಾಗಿ 8971845965, 9448896556, 9481431444 ನ್ನು ಸಂಪರ್ಕಿಸಬಹುದಾಗಿದೆ ಎಂದು ಎಂದು ಲೀಲಾವತಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಕೆ.ರವೀಂದ್ರ, ನಿಕಟಪೂರ್ವ ಅಧ್ಯಕ್ಷ ಬಿ.ಎಂ.ರಾಜಶೇಖರ್, ಮಾಜಿ ಉಪಾಧ್ಯಕ್ಷ ಸದಾನಂದ ಹಾಗೂ ಕ್ರೀಡಾ ಸಮಿತಿ ಕಾರ್ಯದರ್ಶಿ ಪ್ರದೀಪ್ ಕರ್ಕೆರ ಉಪಸ್ಥಿತರಿದ್ದರು.