ಮಡಿಕೇರಿ ಡಿ.18 : ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 2023-24ನೇ ಸಾಲಿನಲ್ಲಿ ಸುವರ್ಣ ಕರ್ನಾಟಕ 50ರ ಸಂಭ್ರಮದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿ ತಾಲ್ಲೂಕಿನ ಒಂದು ಹೋಬಳಿ ಕೇಂದ್ರದಲ್ಲಿ ಸುವರ್ಣ ಸಂಭ್ರಮ ಗ್ರಾಮ ಸಿರಿ ಕಾರ್ಯಕ್ರಮವನ್ನು ನಡೆಸಲು ಕೊಡಗು ಜಿಲ್ಲೆಯ 5 ತಾಲ್ಲೂಕು ಕಸಾಪ ಅಧ್ಯಕ್ಷರುಗಳ ಸಭೆ ನಿರ್ಧರಿಸಿದೆ.
ನಗರದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಚೇರಿಯಲ್ಲಿ ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಸೋಮವಾರಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷರುಗಳ ಸಭೆ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಅವರ ಗೈರು ಹಾಜರಿಯಲ್ಲಿ ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಜಿಲ್ಲಾ ಕಸಾಪದ ಮಾಜಿ ಅಧ್ಯಕ್ಷರಾದ ಟಿ.ಪಿ.ರಮೇಶ್ ಮಾತನಾಡಿ ಸುವರ್ಣ ಕರ್ನಾಟಕ 50ರ ಸಂಭ್ರಮದ ಗ್ರಾಮಸಿರಿ ಕಾರ್ಯಕ್ರಮವನ್ನು ಎಲ್ಲರ ಸಹಕಾರ ಪಡೆದು ಅರ್ಥಪೂರ್ಣಗೊಳಿಸಬೇಕೆಂದು ಕರೆ ನೀಡಿದರು.
ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಆಪ್ ಮೂಲಕ ಸದಸ್ಯತ್ವ ನೋಂದಣಿ ಆರಂಭಿಸಿದ್ದು, ಸರ್ವರ್ ಸಮಸ್ಯೆ ಎದುರಾಗಿರುವುದನ್ನು ಗಮನಿಸಿ ರಾಜ್ಯ ಸಮಿತಿ ಅರ್ಜಿಗಳನ್ನು ಮುದ್ರಿಸಿ ಕಳುಹಿಸಿದೆ. ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿ ಮತ್ತು ಹೋಬಳಿ ಸಮಿತಿಗಳು ಸದಸ್ಯತ್ವ ಆಂದೋಲನವನ್ನು ಆರಂಭಿಸಬೇಕು. ಆ ಮೂಲಕ ಕೊಡಗು ಜಿಲ್ಲಾ ಕಸಾಪದ ಸದಸ್ಯರ ಸಂಖ್ಯೆ ಹೆಚ್ಚಿಸಲು ಮುಂದಾಗಬೇಕು ಎಂದರು.
2022-23ನೇ ಸಾಲಿನ 25 ದತ್ತಿ ಕಾರ್ಯಕ್ರಮಗಳನ್ನು ಜಿಲ್ಲೆ, ತಾಲ್ಲೂಕು ಹಾಗೂ ಹೋಬಳಿ ಕಸಾಪ ಸಮಿತಿಗಳು ನಡೆಸಿದ್ದು, 23-24ನೇ ಸಾಲಿನ 26 ದತ್ತಿಗಳನ್ನು ಜಿಲ್ಲೆ ಹಾಗೂ ತಾಲ್ಲೂಕು ಕ.ಸಾ.ಪ ಘಟಕಗಳಿಗೆ ಹಂಚಲಾಗಿದೆ. ಆಯಾ ತಾಲ್ಲೂಕಿನ ಹೋಬಳಿ ಘಟಕಗಳ ಸಹಕಾರದೊಂದಿಗೆ 2024ರ ಜ.30ರೊಳಗೆ ಕಾರ್ಯಕ್ರಮ ಪೂರ್ಣಗೊಳಿಸಬೇಕು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ, ವಿರಾಜಪೇಟೆ ತಾಲ್ಲೂಕು ಅಧ್ಯಕ್ಷ ಡಿ.ರಾಜೇಶ್ ಪದ್ಮನಾಭ, ಮಡಿಕೇರಿ ತಾಲ್ಲೂಕು ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಕುಶಾಲನಗರ ತಾಲ್ಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್ ಹಾಗೂ ಸೋಮವಾರಪೇಟೆ ತಾಲ್ಲೂಕು ಗೌರವ ಕಾರ್ಯದರ್ಶಿ ಎ.ಪಿ.ವೀರರಾಜು ಸಭೆಯಲ್ಲಿ ಉಪಸ್ಥಿತರಿದ್ದು ಕಸಾಪ ಪ್ರಗತಿಯ ಕುರಿತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.