ಚೆಯ್ಯಂಡಾಣೆ ಡಿ.19 : ಒಬ್ಬ ವ್ಯಕ್ತಿ ಹುಟ್ಟವಾಗ ಯಾವ ಧರ್ಮದಲ್ಲಿ ಹುಟ್ಟುತ್ತಾನೆ ಎಂಬುದು ಅವರಿಗೆ ಅರಿವಿರುವುದಿಲ್ಲ. ಹುಟ್ಟಿದ ಮೇಲೆ ತನ್ನ ಧರ್ಮವನ್ನು ಪ್ರೀತಿಸಿ, ಅನ್ಯ ಧರ್ಮವನ್ನು ಗೌರವಿಸುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಪಣ ತೊಡಬೇಕೆಂದು ನರಿಯಂದಡ ಗ್ರಾ.ಪಂ ಉಪಾಧ್ಯಕ್ಷ ಕೋಡಿರ ವಿನೋದ್ ನಾಣಯ್ಯ ಹೇಳಿದರು.
ಕಡಂಗದಲ್ಲಿ ನಡೆದ ಸುನ್ನಿ ಸ್ಟೂಡೆಂಟ್ ಪೇಡರೇಷನ್ (ಎಸ್.ಎಸ್.ಎಫ್ ) ವಿರಾಜಪೇಟೆ ವಿಭಾಗ ಮಟ್ಟದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ ಸಾಹಿತ್ಯೋತ್ಸವದ ಮುಖ್ಯ ದ್ವಾರವಾದ ಮಹೂಂ ಎಂ.ಎ. ಅಬೂಬಕ್ಕರ್ ಸ್ಮಾರಕ ದ್ವಾರ ಉದ್ಘಾಟಿಸಿ ಮಾತನಾಡಿ, ದೇಶದಲ್ಲಿ ಎಲ್ಲಾ ವರ್ಗದ ಜನರು ಸೌಹಾರ್ದತೆಯಿಂದ ಬದುಕು ಕಟ್ಟಿಕೊಳ್ಳಲು, ಉತ್ತಮ ಯುವ ಪೀಳಿಗೆಯನ್ನು ಸಮಾಜಕ್ಕೆ ತರಲು ಇಂತಹ ಕಾರ್ಯಕ್ರಮದಿಂದ ಸಾಧ್ಯ, ಎಸ್ ಎಸ್ ಎಫ್ ನಾ ಸಾಹಿತ್ಯೋತ್ಸವ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.
ನಿವೃತ ಸೈನಿಕ ಹಾಗೂ ನಾಪೋಕ್ಲು ಬ್ಲಾಕ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮ್ಮರ್ ಸಿ.ಆರ್.ಪಿ.ಎಫ್, ಗ್ರಾಮ ಪಂಚಾಯಿತಿ ಸದಸ್ಯ ಸಿ.ಇ.ಸುಬೈರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಮುಖ್ಯ ಭಾಷಣಗಾರರಾಗಿ ಆಗಮಿಸಿದ ರಾಫಿ ಹಿಮಾಮಿ ಅಲ್ ಹಾದಿ ಮಾತನಾಡಿ, ದೇಶದಲ್ಲಿ ಎಸ್ ಎಸ್ ಎಫ್ ಎಂಬ ವಿದ್ಯಾರ್ಥಿ ಸಂಘಟನೆಯಿಂದ ಹಲವಾರು ಕಾರ್ಯಕ್ರಮಗಳು ಜಾರಿಗೊಂಡಿದ್ದು, ವಿದ್ಯಾರ್ಥಿ ಒಕ್ಕೂಟದಿಂದ ರಾಷ್ಟ್ರದ ಒಳಿತಿಗೆ ಸಹಾಯಕಾರಿಯಾಗುತ್ತದೆ ಎಂದರು.
ಸಾಹಿತ್ಯೋತ್ಸವಕ್ಕೆ ಸ್ಥಾಪಿಸಿದ ಎಸ್ ಎಸ್ ಎಫ್ ಧ್ವಜಾರೋಹಣವನ್ನು ಬದ್ರಿಯಾ ಮಸೀದಿಯ ಅಧ್ಯಕ್ಷ ಕೆ.ಇ.ಉಸ್ಮಾನ್ ನೆರವೇರಿಸಿದರು.
ಸಮಾರೋಪ ಸಮಾರಂಭ :: ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಎಸ್ ಎಫ್ ವಿರಾಜಪೇಟೆ ವಿಭಾಗದ ಅಧ್ಯಕ್ಷ ಖಮರುದ್ದಿನ್ ಅನ್ವಾರಿ ವಹಿಸಿದರು.
ಎಸ್ ಎಸ್ ಎಫ್ ಕೇರಳ ರಾಜ್ಯಾಧ್ಯಕ್ಷ ಫಿರ್ದೌಸ್ ಸಖಾಫಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಿಂದಲೇ ವಿವಿಧ ಸ್ವರ್ಧೆಗಳಾದ ಭಾಷಣ, ಹಾಡು, ಸಾಂಸ್ಕೃತಿಕ, ಕಲಾ ಸ್ವರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಅನಾವರಣ ಗೊಳಿಸಬೇಕು, ರಾಜ್ಯ ರಾಷ್ಟ್ರಮಟ್ಟದಲ್ಲಿ ನಡೆಯುವಂತಹ ಸಾಹಿತ್ಯೋತ್ಸವದಲ್ಲಿ ಪಾಲ್ಗೊಳ್ಳಲು ಸದಾ ಸಿದ್ದರಾಗಿರಬೇಕು, ವಿದ್ಯಾರ್ಥಿ ಸಂಘಟನೆಗಳಿಂದ ಯುವ ಸಮೂಹ ತಪ್ಪುದಾರಿಗಳಿಂದ ಮುಕ್ತರಾಗಿ ಒಳ್ಳೆಯ ವ್ಯಕ್ತಿತ್ವವನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
2 ದಿನ ನಡೆದ ಸ್ವರ್ಧೆಯಲ್ಲಿ ವಿರಾಜಪೇಟೆ ಡಿವಿಷನ್ ಗೆ ಒಳಪಟ್ಟ ಐದು ಸೆಕ್ಟರ್ ಗಳ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅನಾವರಣ ಗೊಳಿಸಿದರು. ವಿಜೇತರಾದ ವಿದ್ಯಾರ್ಥಿಗಳು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವಕ್ಕೆ ಆಯ್ಕೆಯಾದರು.
ಚಾಂಪಿಯನ್ ಆಗಿ ಪಾಲಿಬೆಟ್ಟ ಸೆಕ್ಟರ್ 752 ಅಂಕ ಪಡೆದು ಹೊರ ಹೊಮ್ಮಿದರೆ, 624 ಅಂಕ ಪಡೆದು ಕಡಂಗ ಸೆಕ್ಟರ್ ರನ್ನರ್ಸ್ ಗೆ ತೃಪ್ತಿ ಪಟ್ಟರು.
ಈ ಸಂದರ್ಭ ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ಪತ್ರಕರ್ತ ಅಶ್ರಫ್, ಮೊಯ್ದು ಮುಸ್ಲಿಯಾರ್, ಸಾಬಿತ್ ಮಾಸ್ಟರ್, ಎಸ್.ವೈ.ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಹ್ಮದ್ ಮದನಿ, ಜೆಡಿಎಸ್ ವಿರಾಜಪೇಟೆ ತಾಲೂಕು ಅಲ್ಪಸಂಖ್ಯಾತ ಯುವ ಘಟಕದ ಅಧ್ಯಕ್ಷ ಸೈಫುದ್ದಿನ್ ಚಾಮಿಯಾಲ್, ಬದ್ರಿಯಾ ಮಸೀದಿ ಕಾರ್ಯದರ್ಶಿ ರಾಶೀದ್, ಕೋಶಾಧಿಕಾರಿ ರಜಾಕ್, ಶಿಯಾಬುದ್ದಿನ್ ಚೌಹರಿ, ಎಸ್.ಎಸ್.ಎಫ್ ವಿರಾಜಪೇಟೆ ಡಿವಿಷನ್ ಕಾರ್ಯದರ್ಶಿ ರಶಾದ್ ಹೊಳಮಾಳ, ಗ್ರಾ.ಪಂ ಸದಸ್ಯ ಮಮ್ಮದ್,ಇಸ್ಮಾಯಿಲ್ ಅನ್ವಾರಿ ಅಹ್ಸನಿ, ಸ್ವಾಗತ ಸಮಿತಿಯ ಪದಾಧಿಕಾರಿಗಳು, ಎಸ್.ವೈ.ಎಸ್, ಎಸ್.ಎಸ್.ಎಫ್ ಹಾಗೂ ಕುಟುಂಬದ ಕಾರ್ಯಕರ್ತರು ಹಾಜರಿದ್ದರು.
ವರದಿ : ನೌಫಲ್, ಅಶ್ರಫ್