ನಾಪೋಕ್ಲು ಜ.3 : ಇಂದಿನ ಮಕ್ಕಳೇ ದೇಶದ ಭವಿಷ್ಯ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಮತ್ತು ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.
ಚೆರಿಯಪರಂಬು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಲಾ ಕೊಠಡಿಯನ್ನು ಮತ್ತು ಶಾಲಾ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳೇ ನಮ್ಮ ದೇಶದ ಭವಿಷ್ಯ, ಆದರೆ ಮಕ್ಕಳ ಭವಿಷ್ಯವನ್ನು ರೂಪಿಸುವಂತಹ ಜವಾಬ್ದಾರಿ ನಾಗರಿಕರದ್ದಾಗಿದೆ. ಮಕ್ಕಳು ಉನ್ನತ ಶಿಕ್ಷಣವನ್ನು ಪಡೆಯಲು ಅವಕಾಶವನ್ನು ಕಲ್ಪಿಸಿಕೊಡುವುದು ನಮ್ಮ ಜವಾಬ್ದಾರಿ ಆಗಿದೆ ಎಂದು ಹೇಳಿದರು.
ಮಕ್ಕಳು ಹೆಚ್ಚು ಓದಲು ಸ್ಪೂರ್ತಿಯನ್ನು ನೀಡಬೇಕು. ಯಾವುದೇ ರೀತಿಯ ಶಿಕ್ಷಣ ಪಡೆದರೆ ಯಾವ ರೀತಿ ಉಪಯೋಗವಾಗುತ್ತದೆ ಎಂಬ ಬಗ್ಗೆ ಪೂರಕವಾದ ಮಾಹಿತಿಯನ್ನು ನೀಡಬೇಕು ಎಂದು ಕಿವಿಮಾತು ಹೇಳಿದ ಪೊನ್ನಣ್ಣ ಅವರು, ವಿದ್ಯಾರ್ಥಿಗಳಿಗೆ ಸ್ನೇಹಿತರು ಮತ್ತು ಆಟದಷ್ಟೇ ಪಾಠ ಕೂಡ ಅತ್ಯವಶ್ಯಕ. ಒಳ್ಳೆಯ ಶಿಕ್ಷಣ ಪಡೆದು ಸಾರ್ಥಕವಾದ ಜೀವನ ನಡೆಸಿ ಎಂದು ಕರೆ ನೀಡಿದರು.
ಪೋಷಕರು ಮಕ್ಕಳಿಗೆ ಸ್ವತಂತ್ರವಾಗಿ ಚಿಂತನೆ ಮಾಡುವ ಶಕ್ತಿಯನ್ನು ತುಂಬಬೇಕು. ಸ್ವತಂತ್ರವಾಗಿ ಜೀವಿಸುವ ಮಾರ್ಗವನ್ನು ಅಳವಡಿಸಿಕೊಟ್ಟರೆ ಅವರೇ ಜೀವನ ನಡೆಸಿಕೊಂಡು ಹೋಗುತ್ತಾರೆ ಎಂದರು.
ಈ ಸಂದರ್ಭ ಶಾಲಾ ವತಿಯಿಂದ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಿ.ಯು ಸಾದಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಂಚಾಯತಿ ಅಧ್ಯಕ್ಷ ವನಜಾಕ್ಷಿ ರೇಣುಕೇಶ್, ಉಪ ಅಧ್ಯಕ್ಷ ಕುಲೇಟಿರ ಹೇಮಾವತಿ ಅರುಣ್, ಮಾಜಿ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಸದಸ್ಯ ಮಾಚೇಟಿರ ಕುಶು ಕುಶಾಲಪ್ಪ, ಚೆರಿಯಪರಂಬು ಜಮಾತ್ ಅಧ್ಯಕ್ಷ ಜುಬೇರ್, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಸಿ.ದೊಡ್ಡೆ ಗೌಡ, ಮಡಿಕೇರಿ ಕ್ಷೇತ್ರ ಸಮನ್ವಯ ಅಧಿಕಾರಿ ಪಿ.ಕೆ.ಗುರುರಾಜ್, ಹಲೆ ವಿದ್ಯಾರ್ಥಿ ಸಿರಾಜ್, ನಾಪೋಕ್ಲು ರಾಣಾಧಿಕಾರಿ ಮಂಜುನಾಥ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುಳ ಚಿತ್ರಾಪುರ, ಕರ್ನಾಟಕ ಪಬ್ಲಿಕ್ ಸ್ಕೂಲ್ ಉಪ ಪ್ರಾಂಶುಪಾಲ ಶಿವಣ್ಣ ಎಂ.ಎಸ್, ಶಾಲಾ ಮುಖ್ಯ ಶಿಕ್ಷಕಿ ಲೀಲಾವತಿ ಎಂ.ಬಿ ಗುತ್ತಿಗೆದಾರ ಬಾಬು .ಕೆ.ಸೇರಿದಂತೆ ಇನ್ನಿತರ ಉಪಸ್ಥಿತರಿದ್ದರು.
ಈ ಸಂದರ್ಭ ವೇದಿಕೆಯಲ್ಲಿದ್ದ ಗಣ್ಯರು ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು.
ಬಳಿಕ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ವರದಿ : ದುಗ್ಗಳ ಸದಾನಂದ








